ಬೆಂಗಳೂರಿನ ಕೋಣನಕುಂಟೆಯಲ್ಲಿ ಪಿಜಿ ಮಾಲಕಿಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ತಿಯ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೆಲವು ದಿನಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಹೇಮಾವತಿ, ಪಿಜಿ ನಡೆಸುತ್ತಿದ್ದರು. ಪಿಜಿ ಜೊತೆಗೆ ಮನೆ ಕಡೆಯೂ ಆರ್ಥಿಕವಾಗಿ ಚೆನ್ನಾಗಿದ್ದ ಹೇಮಾವತಿಗೆ ಶರವಣ ಎನ್ನುವ ವ್ಯಕ್ತಿಯ ಪರಿಚಯವಾಗಿತ್ತು. ದಿನ ಕಳೆದಂತೆ ಸಲುಗೆಯಲ್ಲಿ ಮಾತಾಡಿಸುತ್ತಿದ್ದ ಶರವಣ, ಹೇಮಾವತಿಗೆ ತುಂಬಾ ಹತ್ತಿರವಾಗಿದ್ದ. ಈ ವೇಳೆ ಹೇಮಾವತಿ, ಶರವಣ ಬಳಿ ಸಾಲ ಪಡೆದಿದ್ದರು. ಆದರೆ ಹೇಳಿದ ಸಮಯಕ್ಕೆ ಹಣ ವಾಪಸ್ ಕೊಟ್ಟಿರಲಿಲ್ಲ.
ಮಾ.2 ರಂದು ರಾತ್ರಿ ಹೇಮಾವತಿಯನ್ನು ಹುಡುಕಿಕೊಂಡು ಶರವಣ ಮನೆ ಹತ್ತಿರ ಬಂದಿದ್ದ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬೆಳಗ್ಗೆ ಹೇಮಾವತಿ ಅನುಮಾನಾಸ್ಪದವಾಗಿ ನೇಣು ಕುಣಿಕೆಯಲ್ಲಿ ಪತ್ತೆಯಾಗಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ರಾತ್ರಿ ಏನಾಗಿದೆ ಎಂದು ನನಗೆ ಗೊತ್ತಿಲ್ಲವೆಂದು ಶರವಣ ತಿಳಿಸಿದ್ದಾನೆ. ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಶರವಣನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತ ಹೇಮಾವತಿಯ ಕತ್ತಿನ ಭಾಗ ಸೇರಿದಂತೆ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಾಣಿಸಿವೆ. ಪೊಲೀಸರು ಶರವಣ ಮತ್ತು ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.