ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುವೊಬ್ಬ ಆರೋಗ್ಯಕರ ಪ್ರೋಟೀನ್ ಮತ್ತು ಉತ್ತಮ ಪೌಷ್ಟಿಕಾಂಶಗಳ ಆಹಾರ ಕ್ರಮ ಪಾಲಿಸುವುದು ಎಷ್ಟು ಅಗತ್ಯವೋ, ವಿದ್ಯಾರ್ಥಿಗಳೊಂದಿಗೆ ಒಡನಾಡುವ ಮೇಷ್ಟ್ರು ಲೋಕಜ್ಞಾನ ಪಡೆಯುವುದು ಅತಿ ಅವಶ್ಯ ಎಂದು ಹೇಳುವ, ವಿದ್ಯಾರ್ಥಿಗಳನ್ನು ಭವಿಷ್ಯದ ಸುಂದರ ಬದುಕಿಗೆ ಅಣಿಗೊಳಿಸುವುದು, ಸಮಾಜಮುಖಿಯಾಗಿ ಚಿಂತಿಸುವಂತೆ ಮಾಡುವುದು ಭಾಷಾಶಿಕ್ಷಕನ ಕರ್ತವ್ಯವೆಂದು ನಂಬಿ ಪಾಲಿಸುತ್ತಿರುವ ಕನ್ನಡ ಮೇಷ್ಟ್ರು ಲೋಕೇಶ ಬೆಕ್ಕಳಲೆ. ಕೋಶ ಓದುವ ಮತ್ತು ದೇಶ ಸುತ್ತುವ ಹವ್ಯಾಸ ರೂಢಿ ಮಾಡಿಕೊಂಡಿರುವವರು. ದೇಶ ಸುತ್ತಿದ್ದಕ್ಕೆ ಕೋಶ ಓದಿದ್ದಕ್ಕೆ ಸಾಕ್ಷಿ ರೂಪದಂತಿರುವ ಅವರ ಚೊಚ್ಚಲ ಕೃತಿ ‘ಸಿದ್ಧಾಂತದಾಚೆಗೆ’. ತೇಜಸ್ವಿ, ಲಂಕೇಶ್, ಬೀಚಿ, ಸಿದ್ಧಲಿಂಗಯ್ಯ ಮುಂತಾದ ಸಾಹಿತಿಗಳ ಬಗ್ಗೆ, ಎದೆಗೆ ಬಿದ್ದ ಅಕ್ಷರ, ಕುಲುಮೆ, ಕರ್ವಾಲೊ, ಅಳಿದಮೇಲೆ ಇತ್ಯಾದಿ ಕೃತಿಗಳ ಬಗ್ಗೆ, ಗಾಂಧಿ , ಲೋಹಿಯಾ, ಅಬ್ದುಲ್ ಕಲಾಂರಂತಹ ಚಿಂತಕರ ಬಗ್ಗೆ, ತಾವು ಕೈಗೊಂಡ ಚಾರಣದ ಬಗ್ಗೆ, ಶಿಕ್ಷಣ ಸಂಬಂಧಿತ ವಿಷಯಗಳ ಬಗ್ಗೆ ನಾಡಿನ ಪತ್ರಿಕೆಗಳಿಗೆ ಬರೆದ 29 ಲೇಖನಗಳು ಇಲ್ಲಿವೆ.
ಕೋತಿಗಳ ನಡವಳಿಕೆಯ ಪ್ರಸ್ತಾಪ ಮಾಡುತ್ತಾ, ಜನರು ಕೊಡುವ ತಿಂಡಿ ತಿಂದು ತಿಂದು ಅವುಗಳು ಸೋಮಾರಿತನ ಮೈಗೂಡಿಸಿಕೊಂಡಂತೆ ಕಂಡವು. ಒಂದು ವೇಳೆ ಜನರು ತಾವು ತಿನ್ನುತ್ತಿದ್ದ ತಿಂಡಿ ತಿನಿಸುಗಳನ್ನು ಕೊಡದೆ ತಿನ್ನುತ್ತಿದ್ದರೆ, ದಾಳಿ ಮಾಡಿ ಕಸಿದುಕೊಳ್ಳುವ ದಾಳಿಕೋರ ಬುದ್ಧಿ ಸಹ ಕಲಿತಿರುವ ಅವು ಕಾಡಿ ನಲ್ಲಿ ಆಹಾರ ಹುಡುಕಿ ತಿಂದು ಬದುಕುವ ತಮ್ಮ ಸಹಜ ಜೀವನ ಕ್ರಮವನ್ನೇ ಮರೆತಿವೆ ಅನಿಸಿತು ಎಂದು ಲೇಖಕರು ಹೇಳಿರುವುದನ್ನು ನೋಡಿದಾಗ ಇಲ್ಲಿ ಭಾವ ಕ್ಕಿಂತ ಬುದ್ಧಿ ಮೇಲುಗೈ ಸಾಧಿಸಿದೆ ಎಂದು ನನಗನಿಸುತ್ತದೆ.
ಓದಿದಾ ಓದು ತಾ ಮೇದ ಕಬ್ಬಿನ ಸಿಪ್ಪೆ, ಓದಿನ ಒಡಲನರಿದಿಹರೆ ಸಿಪ್ಪೆ ಕಬ್ಬಾದಂತೆ ಎಂಬ ಸರ್ವಜ್ಞನ ಮಾತು ಇವರ ಬರವಣಿಗೆಯಲ್ಲಿ ಸಾಕಾರಗೊಂಡಿದೆ. ತಾವು ಓದಿದ, ಓದಿನ ಒಡಲರಿತು ಅದನ್ನು ಕಬ್ಬಾಗಿಸಿ ಓದುಗರ ಕೈಗಿತ್ತಿರುವ ಲೇಖಕರು ಸಾಹಿತ್ಯ ಕ್ಷೇತ್ರಕ್ಕೆ ಮೊದಲ ಪ್ರವೇಶಿಕೆ ಪಡೆಯುತ್ತಲೇ ಓದುಗರನ್ನೂ ಸಾಹಿತ್ಯ ಓದಿನ ಪ್ರವೇಶಿಕೆಗೆ ಅಣಿಗೊಳಿಸುತ್ತಾರೆ. ಉತ್ತಮ ಹವ್ಯಾಸಗಳು ವ್ಯಕ್ತಿಯ ಆರೋಗ್ಯಕರ ಬದುಕಿಗೆ ಅವಶ್ಯಕವಾಗಿವೆ ಎಂಬುದು ನಾವೆಲ್ಲರೂ ಒಪ್ಪುವ ಮಾತು. ಅದೇ ಹವ್ಯಾಸಗಳನ್ನು ಜೀವನ ಶೋಧನೆಯ ಮಾರ್ಗವಾಗಿ ನೋಡಿ, ಅದನ್ನು ಅಕ್ಷರ ರೂಪಕ್ಕಿಳಿಸಿ ತಾನು ಸವಿದ ರುಚಿಯನ್ನು ಇತರರಿಗೂ ಹಂಚುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿರುವುದು ಇವರ ವಿಶೇಷ.
ಲೇಖಕರಾದವರು ಸಮಾಜದ ಆಗುಹೋಗುಗಳನ್ನು ಬಾಹ್ಯವೀಕ್ಷಕರಾಗಿ ನೋಡದೆ ತನ್ನನ್ನೂ ಒಳಗೊಂಡು ಮನುಷ್ಯ ಸಮಾಜದ ಬಗ್ಗೆ ಚಿಂತಿಸಲು ಪ್ರಯತ್ನಿಸ ಬೇಕು. ಜೊತೆಗೆ ಸಮಾಜವನ್ನು ಸಿನಿಕತನದಿಂದ ನೋಡದೆ ವಿಷಾದದ ಹೃದಯಗಣ್ಣಿನಿಂದ ನೋಡಬೇಕು. ಜೊತೆಗೆ ಕೃತಿಗಳ ಒಳಜಗತ್ತನ್ನು ಗ್ರಹಿಸಿ ಅದನ್ನು ಸಮಕಾಲೀನ ಸಂದರ್ಭಗಳ ಜೊತೆಗಿಟ್ಟು ಪರಿಶೋಧಿಸುವ ಪ್ರಯತ್ನ ಮಾಡಬೇಕು. ಇವೆಲ್ಲವೂ ಇವರ ಕೃತಿಯಲ್ಲಿ ಸಾಧಿತವಾಗಿವೆ. ತನ್ನೊಳಗಿನ ಸದ್ಭಾವನೆ ಗಳನ್ನು ಜಾಗೃತಗೊಳಿಸಿದ ವಿಷಯಗಳ ಅಕ್ಷರ ರೂಪವೇ ಈ ಕೃತಿ, ಸಮಾಜವನ್ನು ನೋಡುವ ಗ್ರಹಿಸುವ ಅರಿವು ನನ್ನಲ್ಲಿ ಬಿತ್ತಿದವರು ಸಂಸ್ಕೃತಿ ಚಿಂತಕ ರಹಮತ್ ತರೀಕೆರೆಯವರು ಎಂಬ ಲೇಖಕರ ಮಾತುಗಳು, ಎದೆಗೆ ಬಿದ್ದ ಅಕ್ಷರ-ಭೂಮಿಗೆ ಬಿದ್ದ ಬೀಜ ಇಂದ ನಾಳೆ ಫಲ ಕೊಡುತ್ತದೆ ಎಂಬ ದೇವನೂರರ ಮಾತುಗಳನ್ನು ಸಾಕ್ಷೀಕರಿಸುತ್ತವೆ.
ಕೃತಿಯಲ್ಲಿನ ಲೇಖನಗಳನ್ನು ಓದಿದಾಗ ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ, ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ ಎಂಬ ಕವಿವಾಣಿಯ ಆಶಯ ಲೇಖಕರಲ್ಲಿ ಸಾಕಾರಗೊಂಡಿರುವುದನ್ನು ಕಾಣಬಹುದು. ಇಂದು ನಮಗೆ ಹರ್ಷಿಸಲು, ಸಂಭ್ರಮಿಸಲು ಅನೇಕ ಒಳ್ಳೆಯ ಸಂಗತಿಗಳಿದ್ದರೂ ಅವುಗಳಿಗೆ ಬೆನ್ನು ಮಾಡಿ ದೂರುವುದನ್ನೇ ಕಾಯಕ ಮಾಡಿಕೊಂಡಿದ್ದೇವೆ. ಸಂಬಂಧಗಳ ಗೆರೆ ಅಳಿಯದಿರಲಿ ಎಂಬ ಕೃತಿಯಲ್ಲಿನ ಸಾಲುಗಳು, ಜೀವನದ ಪ್ರತಿಬಿಂಬವಾದ ಸಾಹಿತ್ಯ ಗತಿಬಿಂಬವಾಗುವ ಪರಿಗೆ ಕೆಲವು ಉದಾಹರಣೆಗಳಾಗಿವೆ. ಇಂತಹ ಎಷ್ಟೋ ಸಾಲುಗಳು ಓದುಗರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ, ಶಿಕ್ಷಕರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಬಲ್ಲವು ಎಂದರೆ ತಪ್ಪಾಗಲಾರದು. ಕೃತಿಯಲ್ಲಿ ಯಾವುದನ್ನು, ಯಾರನ್ನೂ ದೂರೀಕರಿಸದೆ, ನಿಂದಿಸದೆ, ತುಚ್ಛೀಕರಿಸದೆ ತಮ್ಮ ಸುತ್ತಲ ಸಮಾಜ ವನ್ನು ವಿಮರ್ಶಿಸಿ ನೋಡಿರುವ ಲೇಖಕರ ಬರವಣಿಗೆಯ ಹಿಂದೆ, ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ ಎಂಬ ಕವಿಮಾತು ಪ್ರೇರಣೆ ಯಾಗಿದ್ದಿರಬಹುದು.
ಜನಮಾನಸದಿಂದ ಮರೆಯಾಗುತ್ತಿರುವ ಮಹಾಕಾವ್ಯಗಳು; ಇದಕ್ಕೆ ಯಾರು ಹೊಣೆ? ಎಂಬ ಲೇಖನದಲ್ಲಿ ಶಿಕ್ಷಕರು ಶಿಕ್ಷಕ ವೃತ್ತಿಯನ್ನು ಗಂಭೀರವಾಗಿ ಪರಿಗಣಿ ಸಿಲ್ವಾ ಎಂದು ಪ್ರಶ್ನಿಸುತ್ತಾ ಶಿಕ್ಷಕರು ಪಾಠ ಪ್ರವಚನಗಳ ಚರ್ಚೆಗಿಂತ ಹಣಮುಖಿ ಚಿಂತನೆ, ರಾಜಕೀಯ ಚಟುವಟಿಕೆಗಳ ಹೆಚ್ಚು ತೊಡಗಿಸಿಕೊಂಡಿರು ವುದು ಜನರ ಕಣ್ಣಲ್ಲಿ ಬೆತ್ತಲಾಗದೆ ಉಳಿದಿಲ್ಲ ಎಂದು ಹೇಳಿರುವ ಲೇಖಕರು, ಇನ್ನೊಂದು ಲೇಖನದಲ್ಲಿ ಶಿಕ್ಷಕರಿಗೆ ಅವಮಾನ; ವಿದ್ಯಾರ್ಥಿಗಳಿಗೆ ಸಲ್ಲದ ಗುಣ, ಶಿಕ್ಷಕ ರ ಬಗೆಗಿನ ಕೇವಲ ಭಾವನೆ ದೂರವಾಗಲಿ ಎಂದು ಕರೆಕೊಟ್ಟಿರುವುದು ಮೆಚ್ಚುವಂತಹದ್ದು. ಇವು ಶಿಕ್ಷಕರನ್ನು ಆತ್ಮವಿಮರ್ಶೆಗೆ ಒಳಪಡಿಸುವ ಮಾತುಗಳಾದರೂ, ಇಂದು ಮಾನವೀಯ ಮೌಲ್ಯಗಳು ಸಮಾಜದಲ್ಲಿ ಅಲ್ಪಸ್ವಲ್ಪವಾದರೂ ಚಲಾವಣೆಯಲ್ಲಿವೆ ಎನ್ನುವುದಾದರೆ ಅದಕ್ಕೆ ಕಾರಣ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಎಷ್ಟೋ ಶಿಕ್ಷಕ ಬಂಧುಗಳು ಎಂಬುದನ್ನು ನಾವುಗಳು ಒಪ್ಪಿಕೊಳ್ಳಲೇಬೇಕಾಗುತ್ತದೆ. ಜಾಗತಿಕರಣ ಪ್ರಕ್ರಿಯೆಯು ನಮ್ಮ ಸಾಮಾಜಿಕ ವಿದ್ಯಮಾನಗಳಲ್ಲಿ ಅನೇಕ ಬದಲಾ ವಣೆಗಳನ್ನು ತಂದೊಡ್ಡಿದ್ದು ಇವು ಜೀವನ ವಿಧಾನಗಳನ್ನು ಬದಲಿಸುತ್ತಿರುವುದು ಸತ್ಯ. ಹಾಗಾಗಿ ಶಿಕ್ಷಕರಾದವರು ಇಂದಿನ ಸಾಮಾಜಿಕ ಸನ್ನಿವೇಶಗಳನ್ನು ಸರಿ ಯಾಗಿ ಗ್ರಹಿಸಿಕೊಂಡು, ವಿದ್ಯಾರ್ಥಿಗಳೊಡನೆ ಸಂವಾದಿಸಲು ಬೇಕಾದ ಹೊಸ ಕಾಲದ ಟೂಲ್ಸ್ ತಯಾರಿಸಿಕೊಳ್ಳಬೇಕಾದುದು ಈ ಹೊತ್ತಿನ ತುರ್ತು ಎಂಬುದು ಕೃತಿಯನ್ನು ಓದಿದ ಮೇಲೆ ಅರಿವಿಗೆ ಬರುತ್ತದೆ.
ಚಾರಣವೆಂದರೆ ಬರಿ ದಣಿವಲ್ಲ! ಎಂಬ ಲೇಖನದಲ್ಲಿ ಕೋತಿಗಳ ನಡವಳಿಕೆಯ ಪ್ರಸ್ತಾಪ ಮಾಡುತ್ತಾ, ಜನರು ಕೊಡುವ ತಿಂಡಿ ತಿಂದು ತಿಂದು ಅವುಗಳು ಸೋಮಾರಿತನ ಮೈಗೂಡಿಸಿಕೊಂಡಂತೆ ಕಂಡವು. ಒಂದು ವೇಳೆ ಜನರು ತಾವು ತಿನ್ನುತ್ತಿದ್ದ ತಿಂಡಿ ತಿನಿಸುಗಳನ್ನು ಕೊಡದೆ ತಿನ್ನುತ್ತಿದ್ದರೆ, ದಾಳಿ ಮಾಡಿ ಕಸಿದು ಕೊಳ್ಳುವ ದಾಳಿಕೋರ ಬುದ್ಧಿ ಸಹ ಕಲಿತಿರುವ ಅವು ಕಾಡಿನಲ್ಲಿ ಆಹಾರ ಹುಡುಕಿ ತಿಂದು ಬದುಕುವ ತಮ್ಮ ಸಹಜ ಜೀವನ ಕ್ರಮವನ್ನೇ ಮರೆತಿವೆ ಅನಿಸಿತು ಎಂದು ಲೇಖಕರು ಹೇಳಿರುವುದನ್ನು ನೋಡಿದಾಗ ಇಲ್ಲಿ ಭಾವಕ್ಕಿಂತ ಬುದ್ಧಿ ಮೇಲುಗೈ ಸಾಧಿಸಿದೆ ಎಂದು ನನಗನಿಸುತ್ತದೆ. ಏಕೆಂದರೆ, ವನ್ಯಜೀವಿಗಳನ್ನು ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಒಕ್ಕಲೆಬ್ಬಿಸಿ, ಭೂಮಿ ತನ್ನೊಬ್ಬನ ಆಸ್ತಿಯೆಂದು ಬೀಗುತ್ತಿದ್ದಾನೆ. ಇದರ ಫಲವಾಗಿ ವನ್ಯಜೀವಿಗಳ ಆವಾಸಸ್ಥಾನಗಳು ಅವಸಾನ ವಾಗಿ ಬದುಕು ದೂಡಲು ಅವು ಅನ್ಯ ಮಾರ್ಗವಿಲ್ಲದೆ ತಮ್ಮ ಸಹಜ ಸ್ವಭಾವ ಬಿಟ್ಟುಕೊಟ್ಟು ಅಸಹಾಯಕತೆಯಿಂದ ದಿನದೂಡುತ್ತಿವೆ. ಈ ಬಗ್ಗೆ ನಮಗೆ ಅನುಕಂಪ ಮತ್ತು ಪಶ್ಚಾತ್ತಾಪ ಇರಬೇಕು ಎಂದು ನನಗನಿಸುತ್ತದೆ.
ಲೇಖಕರು ಹೇಳುವ ಪ್ರಕೃತಿಯು ಅಮೂರ್ತವಾಗಿ ತಿಳಿಸುವ ತಾತ್ವಿಕತೆಯು ಕೇವಲ ನೋಡುವ ತಾತ್ವಿಕತೆಯಲ್ಲ, ಬದುಕುವ ಬಾಳು ಎಂದು ಪ್ರತಿಯೊಬ್ಬರೂ ಅರಿತು ನಡೆಯಬೇಕು ಎಂಬ ಮಾತುಗಳು ಇಂದು ಪ್ರತಿಯೊಬ್ಬ ಓದುಗನ ಹೃನ್ಮನಗಳನ್ನು ಮುಟ್ಟುವಂತಾಗಬೇಕು. ಸಾಹಿತ್ಯಾಸಕ್ತಿ ಉಂಟು ಮಾಡುವ, ಪುಸ್ತಕ ಪ್ರೀತಿ-ನಿಸರ್ಗ ಪ್ರೀತಿಗೆ ಓದುಗರನ್ನು ತೆರೆದುಕೊಳ್ಳುವಂತೆ ಮಾಡುವ ಒಂದೊಳ್ಳೆಯ ಕೃತಿ ಕೊಟ್ಟು,ಸಾಹಿತ್ಯ ಲೋಕದ ಭೂಮಿಕೆಯಲ್ಲಿ,ಲೇಖಕರು ಬಿತ್ತಿರುವ ಭಾವಗಳೆಂಬ ಬೀಜಗಳು ಓದುಗರ ಮನದಲ್ಲಿ ಮೊಳಕೆಯೊಡೆದು ಚಿಗುರೊಡೆಯಲೆಂದು ಶುಭಹಾರೈಸೋಣ.
– ರೇವಣ್ಣ ಎಂ.ಜಿ.
ಕನ್ನಡ ಉಪನ್ಯಾಸಕ
ಸರ್ಕಾರಿ ಪದವಿಪೂರ್ವ ಕಾಲೇಜು
ಕೃಷ್ಣರಾಜಪೇಟೆ, ಮಂಡ್ಯ ಜಿಲ್ಲೆ
ಮೊ: 973193 8324