ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಟೂರಿಸ್ಟ್ ವಾಹನಗಳಿಗೆ ಬೇಕಿದ್ದ ಸ್ಪೆಷಲ್ ಪರ್ಮಿಟ್ ನಿಯಮಗಳನ್ನು ಆರ್‌ಟಿಒ ಸರಳಗೊಳಿಸಿದೆ. ಇನ್ಮುಂದೆ ಹತ್ತೇ ಸೆಕೆಂಡ್‌ಗಳಲ್ಲಿ ಸ್ಪೆಷಲ್ ಪರ್ಮಿಟ್ ವಾಹನ ಸವಾರರಿಗೆ ಸಿಗಲಿದೆ.
ಯೆಲ್ಲೋ ಬೋರ್ಡ್ ವಾಹನಗಳು ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ ಅಥವಾ ಚಾಲಕ ಯಾವುದೇ ಜಿಲ್ಲೆಯಲ್ಲಿದ್ದರೂ ವಾಹನದ ಮೂಲ ದಾಖಲೆಗಳೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ದಾಖಲೆ ನೀಡಿ ಕಾದು ಸ್ಪೆಷಲ್ ಪರ್ಮಿಟ್ ಪಡೆಯಬೇಕಿತ್ತು. ಲಂಚ ಕೊಡಬೇಕೆಂಬ ಆರೋಪವೂ ಇತ್ತು. ಇದಕ್ಕೆಲ್ಲ ಕನಿಷ್ಠ ಮೂರು ದಿನ ಬೇಕಾಗಿತ್ತು. ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮುಂದಾಗಿ ಸೆಕೆಂಡ್ ಗಳಲ್ಲೇ ಸ್ಪೆಷಲ್ ಪರ್ಮಿಟ್ ನೀಡುವ ವ್ಯವಸ್ಥೆ ಮಾಡಿದೆ.
ವಾಹನ್-4 ಆ್ಯಪ್ ಮೂಲಕ ಮಾಲೀಕ ತನ್ನ ವಾಹನದ ಮಾಹಿತಿಯನ್ನ ಅಪ್‌ಲೋಡ್ ಮಾಡಿದರೆ ಕೆಲವೇ ಸೆಕೆಂಡ್‌ಗಳಲ್ಲಿ ಪರಿಶೀಲನೆ ಮಾಡಿ, ದಾಖಲೆ ಸರಿಯಿದ್ದಲ್ಲಿ ಹತ್ತೇ ಸೆಕೆಂಡ್‌ಗಳಲ್ಲಿ ಪರ್ಮಿಟ್ ಸಿಗಲಿದೆ. ಇದಕ್ಕೆ ತಗಲುವ ವೆಚ್ಚ 2000 ರೂಪಾಯಿಗಳು ಮಾತ್ರ. ಆರ್‌ಟಿಒದ ಹೊಸ ಯೋಜನೆಯಿಂದ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಸಮಯದ ಜೊತೆ ಹಣ ಉಳಿತಾಯವಾಗಲಿದೆ. ಇದೇ ವಾರದಿಂದ ಸಂಪೂರ್ಣ ಪ್ರಕ್ರಿಯೆ ಜಾರಿಯಾಗಲಿದೆ.