ರಾಜ್ಯದ ಅಭಿವೃದ್ಧಿಯ ವೇಗವನ್ನು ಚುರುಕುಗೊಳಿಸುವುದರಲ್ಲಿ ಮತ್ತು ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಸದೃಢಗೊಳಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಸೋಮವಾರ ಆರಂಭಗೊಂಡ ಬಜೆಟ್ ಅಧಿವೇಶನದ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಮಹಾತ್ಮಾ ಗಾಂಧಿಯವರು ಹೇಳಿದಂತೆ ಆಡಳಿತವನ್ನು ಅಂತಿಮ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವೆಂಬಂತೆ ಬಳಸಿಕೊಳ್ಳಲು ನನ್ನ ಸರ್ಕಾರ ಕಟಿಬದ್ಧವಾಗಿದೆ ಎಂದರು.
ರಾಜ್ಯದ ಆದಾಯ ಹೆಚ್ಚುತ್ತಿದೆ. ರಾಜ್ಯಕ್ಕೆ ಖಾಸಗಿ ಬಂಡವಾಳ ದಾಖಲೆ ಪ್ರಮಾಣದಲ್ಲಿ ಹರಿದು ಬರುತ್ತಿದೆ. ಕಲ್ಯಾಣ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನದಿಂದಾಗಿ ಅಸಮಾನತೆಯ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಜಿಎಸ್ಟಿ ಬೆಳವಣಿಗೆ ದರ ಉತ್ತಮವಾಗಿದೆ ಎಂದರು.
2024-25ನೇ ಸಾಲಿನ ಬಜೆಟ್ನಲ್ಲಿ ಆದೇಶ ಹೊರಡಿಸಬೇಕಾಗಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಘೋಷಣೆ ಮಾಡಿದ್ದ ಕಾರ್ಯಕ್ರಮಗಳೂ ಸಹ ಸಮರ್ಪಕವಾಗಿ ಅನುಷ್ಠಾನವಾಗುತ್ತಿವೆ. ಇನ್ನುಳಿದ ಘೋಷಣೆಗಳೂ ಆದೇಶ ಹೊರಡಿಸುವ ಹಂತದಲ್ಲಿವೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ತೀವ್ರರೂಪದ ಅತಿವೃಷ್ಟಿ ಅನಾವೃಷ್ಟಿಗಳಿಲ್ಲದ ಕಾರಣ ರೈತರ ಕೈಗೆ ಉತ್ತಮ ಫಸಲು ಸಿಕ್ಕಿದೆ. ಮುಂಗಾರು ಮತ್ತು ಹಿಂಗಾರು ಹಂಗಾಮುಗಳಿಂದ ಸುಮಾರು 149 ಲಕ್ಷ ಟನ್ನುಗಳಷ್ಟು ಕೃಷಿ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ರಾಜ್ಯಪಾಲರು ಹೇಳಿದರು.
ಸರ್ಕಾರವು ತೆಗೆದುಕೊಂಡ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತ ಕುಟುಂಬಗಳಲ್ಲಿ ಆತ್ಮಹತ್ಯೆಗಳ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ. ನನ್ನ ಸರ್ಕಾರವು ರಚನೆಯಾದಾಗಿಂದಲೂ ತೊಗರಿ ಮತ್ತು ಕೊಬ್ಬರಿಗೆ ಬೆಲೆಗಳು ಕುಸಿದಾಗ ರೈತರ ನೆರವಿಗೆ ನಿಂತು ಪ್ರೋತ್ಸಾಹ ಧನವನ್ನು ನೀಡಿದೆ. ಕೃಷಿಭಾಗ್ಯ ಯೋಜನೆಯನ್ನು ಮುಂದುವರೆಸುವ ಮೂಲಕ ಅಗತ್ಯ ಇರುವ ಕಡೆಗಳಲ್ಲೆಲ್ಲಾ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಕಲ್ಯಾಣ ಕಾರ್ಯಕ್ರಮಗಳಿಗಾಗಿ ವರ್ಷಕ್ಕೆ ಒಟ್ಟಾರೆ 90 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗುತ್ತಿದೆ. ಸಾಮಾಜಿಕ ಪಿಂಚಣಿಗಳು, ರೈತರ ಪಂಪು ಸೆಟ್ಟುಗಳಿಗೆ ಉಚಿತ ವಿದ್ಯುತ್, ಕೃಷಿ-ತೋಟಗಾರಿಕೆ, ರೇಷ್ಮೆ, ಪಶುಪಾಲನೆ, ಮೀನುಗಾರಿಕೆ, ಆಹಾರ ಮತ್ತು ನಾಗರಿಕ ಸರಬರಾಜು, ಕೈಮಗ್ಗ ಮತ್ತು ಜವಳಿ, ವಸತಿ, ಶಿಕ್ಷಣ, ಕೈಗಾರಿಕೆ, ಕೌಶಲ್ಯಾಭಿವೃದ್ಧಿ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಹಲವಾರು ಇಲಾಖೆಗಳ ವತಿಯಿಂದ ನೀಡುವ ನೇರ ನಗದು ಯೋಜನೆಗಳು ಮತ್ತು ಸಬ್ಸಿಡಿ, ಪ್ರೋತ್ಸಾಹ ಧನಗಳಿಂದ ಸುಮಾರು 1.25 ಕೋಟಿಗೂ ಹೆಚ್ಚು ಕುಟುಂಬಗಳು ಅನುಕೂಲ ಪಡೆಯುತ್ತಿವೆ. ಅಭಿವೃದ್ಧಿಯಲ್ಲಿ ಕರ್ನಾಟಕದ ವಿಶಿಷ್ಟ ಮಾದರಿಯನ್ನು ಸರ್ಕಾರವು ರೂಪಿಸುತ್ತಿದೆ ಎಂದು ಅವರು ತಿಳಿಸಿದರು.