ನೆಲ, ಜಲ, ಭಾಷೆಯ ವಿಚಾರದಲ್ಲಿ ಕಲಾವಿದರಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಕೆಯ ಮಾತುಗಳನ್ನು ಆಡಿರುವುದರಲ್ಲಿ ತಪ್ಪೇನಿದೆ ಎಂದು ನಟಿ ಹಾಗೂ ಕಾಂಗ್ರೆಸ್ ನಾಯಕಿ ರಮ್ಯಾ ಪ್ರಶ್ನಿಸುವ ಮೂಲಕ ಡಿಸಿಎಂ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ವಿಜಯನಗರದಲ್ಲಿ ನಡೆದ ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಕ್ಕೂ ಮೊದಲು ಹಂಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಹೇಬ್ರು ಹೇಳಿರುವುದರಲ್ಲಿ ತಪ್ಪೇನಿಲ್ಲ. ನೆಲ, ಜಲದ ವಿಚಾರ ಬಂದಾಗ ಕಲಾವಿದರೆಲ್ಲರೂ ಬೆಂಬಲಿಸಬೇಕು. ಡಾ.ರಾಜ್‌ಕುಮಾರ್ ನೆಲ, ಜಲ ಭಾಷೆ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಉತ್ತರ ಕರ್ನಾಟಕದ ನದಿಗಳು, ಜಲಾಶಯಗಳ ಬಗ್ಗೆಯೂ ಕಲಾವಿದರು ಮಾತನಾಡಬೇಕು. ಡಿಸಿಎಂ ಡಿ.ಕೆ.ಶಿವಕುಮಾರ್ ಅದನ್ನೇ ಹೇಳಿದ್ದಾರೆ. ಅದಕ್ಕೆ ನನ್ನ ಸಹಮತವಿದೆ ಎಂದು ಹೇಳಿದರು.
ಸಚಿವ ಜಮೀರ್ ಅಹಮ್ಮದ್ ಅವರು ಮತ್ತು ವಿಜಯನಗರ ಜಿಲ್ಲಾಡಳಿತ ನನಗೆ ಆಹ್ವಾನ ನೀಡಿದ್ದು, ಹಾಗಾಗಿ ಇಲ್ಲಿಗೆ ಬಂದಿದ್ದೇನೆ, ಖುಷಿಯಾಯಿತು ಎಂದರು.
“ನಾಡು, ನುಡಿ, ನೆಲ, ಜಲದ ಹೋರಾಟಕ್ಕೆ ಚಿತ್ರರಂಗದ ಸಹಕಾರ, ಬೆಂಬಲ, ಬದ್ಧತೆ ಇರಬೇಕು. ಆದರೆ ಮೇಕೆದಾಟು ಹೋರಾಟಕ್ಕೆ ಚಿತ್ರರಂಗದಿಂದ ಸರಿಯಾದ ಸಹಕಾರ ಸಿಗದೇ ಹೋದದ್ದರ ಬಗ್ಗೆ ನೋವು ಮತ್ತು ಸಿಟ್ಟು ಇದೆ” ಎಂದು ಡಿ.ಕೆ. ಶಿವಕುಮಾರ್ ವಿಧಾನಸೌಧದ ಮುಂಭಾಗದಲ್ಲಿ ನಡೆದ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದರು.
“ನನಗೆ ಸಿನಿಮಾರಂಗದವರ ಮೇಲೆ ಕೋಪ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ, ನಟರ ಮೇಲೆ ಸಿಟ್ಟಿದೆ. ನಾವು ಕಷ್ಟ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ದೊರಕಿಸಲು “ನಮ್ಮ ನೀರು, ನಮ್ಮ ಹಕ್ಕು ಎಂದು ಮೇಕೆದಾಟು ಪಾದಯಾತ್ರೆ ಮಾಡಿದೆವು. ಕೋವಿಡ್ ಸಮಯದಲ್ಲಿ ನಾನು, ಸಿದ್ದರಾಮಯ್ಯ ಅವರು ಸುಮಾರು 150 ಕಿ.ಮೀ ಪಾದಯಾತ್ರೆ ಮಾಡಿದೆವು. ನಾವು ನಮ್ಮ ಸ್ವಂತಕ್ಕಾಗಿ ಈ ಹೋರಾಟ ಮಾಡಲಿಲ್ಲ. ರಾಜ್ಯದ ಹಿತಕ್ಕಾಗಿ ನಡೆದೆವು. ಆದರೆ ಖುದ್ದು ಆಹ್ವಾನ ಕೊಟ್ಟರೂ ಒಂದಿಬ್ಬರನ್ನು ಹೊರತುಪಡಿಸಿ ಚಿತ್ರರಂಗದವರು ತಿರುಗಿ ನೋಡಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದರು. ಡಿ.ಕೆ. ಶಿವಕುಮಾರ್ ಅವರ ಈ ಮಾತುಗಳಿಗೆ ಪ್ರತಿಪಕ್ಷ ನಾಯಕರು ಸೇರಿದಂತೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.