Menu

ಕೊಪ್ಪಳದಲ್ಲಿ ಹಾನಿಕಾರಕ ಕೈಗಾರಿಕೆ ಸ್ಥಾಪಿಸ ಬೇಡಿ: ಸಚಿವ ಹೆಚ್‌ಡಿ ಕೆ 

ಪರಿಸರಕ್ಕೆ ಹಾಗೂ ಸಾಮಾನ್ಯ ಜನರಿಗೆ ಹಾನಿಕಾರಕ ಕೈಗಾರಿಕಾ ಘಟಕಗಳನ್ನು ಸ್ಥಾಪಿಸುವುದು ಉಚಿತವಲ್ಲ ಎಂದು ರಾಜ್ಯ ಸರಕಾರಕ್ಕೆ ಹೇಳಿದ್ದೇನೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದ್ದ ಸಚಿವರು ಮಾಧ್ಯಮದವರ ಜೊತೆಗೆ ಮಾತನಾಡಿ, ಕೊಪ್ಪಳ ನಗರದಲ್ಲಿ ಬಲ್ದೋಟ ಸಮೂಹದ ಉದ್ದೇಶಿತ ಉಕ್ಕು ಕಾರ್ಖಾನೆ ಸ್ಥಾಪನೆಗೆ ವ್ಯಕ್ತವಾಗಿರುವ ವಿರೋಧ ಹಾಗೂ ಶ್ರೀ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಯವರ ನಿಲುವಿನ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಹೇಳಿದ್ದಿಷ್ಟು:” ರಾಜ್ಯ ಸರಕಾರ ಹಾಗೂ ಸ್ಥಳೀಯ ಕಂಪನಿಯೊಂದು ಒಪ್ಪಂದ ಮಾಡಿಕೊಂಡಿವೆ. ಅದು ಕೇಂದ್ರದ ಯೋಜನೆ ಅಲ್ಲ. ಈ ಒಪ್ಪಂದದ ಕುರಿತು ವ್ಯಾಪಕವಾದ ವಿರೋಧ ವ್ಯಕ್ತವಾಗಿದೆ. ಗವಿಸಿದ್ದೇಶ್ವರ ಸ್ವಾಮೀಜಿಯವರು ವಿರೋಧಿಸಿದ್ದಾರೆ. ಪರಿಸರ ಹಾಗೂ ಜನರಿಗೆ ಹಾನಿ ಉಂಟು ಮಾಡುವ ಘಟಕಗಳನ್ನು ಸ್ಥಾಪಿಸಬಾರದು.‌ ಇದನ್ನು ರಾಜ್ಯ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೇನೆ.‌ ಕೊಪ್ಪಳದಲ್ಲಿ ಕೈಗಾರಿಕಾ ಘಟಕದ ಸ್ಥಾಪನೆಯ ವಿರೋಧಕ್ಕೆ ನಮ್ಮ ಪಕ್ಷದ ಸಹಮತವೂ ಇದೆ.‌ ರಾಜ್ಯ ಸರ್ಕಾರ ಕೊಪ್ಪಳದ ಜನತೆ ಹಾಗೂ ಸ್ವಾಮೀಜಿಯವರ ಜೊತೆ ಸಭೆ ನಡೆಸಿ ಈ ವಿಷಯದ ಕುರಿತಂತೆ ಮುಂದುವರೆಯಬೇಕು.”

ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುತ್ತಾ ಕೇಂದ್ರ ಸರಕಾರವನ್ನು ಟೀಕಿಸುತ್ತಾ ಒಂದುವರೆ ವರ್ಷ ಹಾಳು ಮಾಡಿದೆ. ಈ ಸರ್ಕಾರದಿಂದ ಹೆಚ್ಚಿನ ನಿರೀಕ್ಷೆ ಇಲ್ಲ. ರಾಜ್ಯ ಸರಕಾರದ ಬೊಕ್ಕಸದಲ್ಲಿ ಹಣವಿದೆ. ಆದರೆ ವ್ಯಾಪಕ ಪ್ರಮಾಣದ ದುರ್ಬಳಕೆಯಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನವೇ ಇಲ್ಲ. ಕಲ್ಯಾಣ ಕರ್ನಾಟಕ ಭಾಗಕ್ಕೆ 5000 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.‌ ಅದರಲ್ಲಿ ಒಂದು ನಯಾ ಪೈಸಾ ಬಿಡುಗಡೆಯಾಗಿಲ್ಲ. ಕಾಂಗ್ರೆಸ್ ಸರಕಾರ ಗುತ್ತಿಗೆದಾರರಿಂದ ಹೆಚ್ಚಿನ ಕಮಿಷನ್ ವಸೂಲಿ ಮಾಡುತ್ತಿದೆ ಎಂಬ ಆರೋಪಗಳು ಇವೆ‌ ಎಂದು ಟೀಕಿಸಿದರು.

ಮೇಕೆದಾಟು ಯೋಜನೆ ಹಾಗೂ ಚಿತ್ರ ನಗರಿ ಯೋಜನೆಗಳ ಕುರಿತಂತೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದಾಗ, ರಾಜ್ಯದ ಜನತೆ ಅವರ ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಜನರ ಆಶಯದಂತೆ ಅವರು ಕೆಲಸ ಮಾಡಲಿ. ನಟ್ ಹಾಗೂ ಬೋಲ್ಟ್ ರಿಪೇರಿ ಮಾಡಲು ತಜ್ಞರಿದ್ದಾರೆ.‌ ಅದು ಶಿವಕುಮಾರ್ ಅವರ ಕೆಲಸವಲ್ಲ ಎಂದು ವ್ಯಂಗ್ಯವಾಡಿದರು.

ಅಕ್ಟೋಬರ್ ವೇಳೆಗೆ ರಾಜ್ಯ ಸರಕಾರದಲ್ಲಿ ಬದಲಾವಣೆಯಾಗಲಿದೆ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಬಿ ವೈ ವಿಜಯೇಂದ್ರ ಹೇಳಿಕೆ ಕುರಿತಂತೆ , “ಅವರು ಯಾವ ಅರ್ಥದಲ್ಲಿ ಆ ಹೇಳಿಕೆ ನೀಡಿದ್ದಾರೆಯೋ ನನಗೆ ಗೊತ್ತಿಲ್ಲ.”ಎಂದರು.

Related Posts

Leave a Reply

Your email address will not be published. Required fields are marked *