ಬೆಂಗಳೂರು: ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ICAR) ಯನ್ನು ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರದ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರ ಜತೆ ಕೂಡಲೇ ಚರ್ಚೆ ನಡೆಸುವುದಾಗಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಹಮ್ಮಿಕೊಂಡಿದ್ದ ರಾಷ್ಟ್ರೀಯ ತೋಟಗಾರಿಕಾ ಮೇಳ – 2025 ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಬಗ್ಗೆ ಕೃಷಿ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೂ ಚರ್ಚೆ ನಡೆಸುವುದಾಗಿ ಸಚಿವರು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಾವಲಂಬನೆ ಸಾಧಿಸಬೇಕು ಎನ್ನುವುದು ಕೇಂದ್ರ ಸರ್ಕಾರದ ಗುರಿ ಆಗಿದ್ದು, ಪ್ರಧಾನಿಗಳಾದ ನರೇಂದ್ರ ಮೋದಿ ಅವರ ವಿಕಸಿತ ಭಾರತ-2047, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನು ಇಡಲಾಗಿದೆ. ಅವರ ಒತ್ತಾಸೆ ಫಲವಾಗಿ 2025-26ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೃಷಿಗೆ ₹1,52,000 ಕೋಟಿ ಮೀಸಲು ಇಡಲಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಈ ನಿಟ್ಟಿನಲ್ಲಿ ಕೃಷಿ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಆ ದಿಕ್ಕಿನಲ್ಲಿ ಕೃಷಿ ಸಂಶೋಧನಾ ಸಂಸ್ಥೆಗಳಿಗೆ ಹೆಚ್ಚು ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಇದರ ಭಾಗವಾಗಿ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ಡೀಮ್ಡ್ ವಿವಿ ಸ್ಥಾನಮಾನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವರು ಹೇಳಿದರು.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನಾನು ಹಲವಾರು ಸಲ ಭೇಟಿಯಾಗಿ ರಾಜ್ಯದ ರೈತರ ಹಿತದ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೇಂದ್ರ ಸರ್ಕಾರದ ಕಾರ್ಯಕ್ರಮಗಳಲ್ಲಿ ಅನೇಕ ಸಬ್ಸಿಡಿ ಯೋಜನೆಗಳಿವೆ, ಅದನ್ನು ಯುವ ರೈತರು ಬಳಕೆ ಮಾಡಿಕೊಳ್ಳಬೇಕು ಎಂದ ಸಚಿವರು; ಭಾರತೀಯ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹುದೊಡ್ಡ ಬೇಡಿಕೆ ಇದೆ. ಯುವ ಜನರು ನಗರಗಳಿಗೆ ವಲಸೆ ಬರುವ ಬರುವ ಬದಲು ಹಳ್ಳಿಯಲ್ಲಿಯೇ ಉತ್ತಮ ಜೀವನ ಕಂಡುಕೊಳ್ಳಬೇಕು. ಅರ್ಧ ಎಕರೆ ಭೂಮಿ ಇದ್ದರೆ ಲಕ್ಷಾಂತರ ರೂಪಾಯಿ ದುಡಿಮೆ ಮಾಡಬಹುದು ಎಂದು ಕಿವಿಮಾತು ಹೇಳಿದರು.
ಗ್ಯಾರಂಟಿ ಹಣ ಕೃಷಿಗೆ ಕೊಟ್ಟರೆ ಅದೇ 100 ಗ್ಯಾರೆಂಟಿಗೆ ಸಮ:
ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ನಾನು ಗ್ಯಾರಂಟಿಗಳನ್ನು ವಿರೋಧ ಮಾಡುವುದಿಲ್ಲ. ಆದರೆ, ಗ್ಯಾರೆಂಟಿ ಕೊಟ್ಟು ಅದೇ ಗ್ರಾಮೀಣ ಜನರ ಜೀವನಾಡಿ ಆಗಿರುವ ಕೃಷಿಯನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಹೇಳಿದ್ದೇನೆ. ರಾಜ್ಯದ ಜನರು ಕಷ್ಟಕಾಲದಲ್ಲಿಯೂ ತೆರಿಗೆ ಕಟ್ಟಿ ಖಜಾನೆ ಮಾಡಿದ್ದಾರೆ. ವರ್ಷಕ್ಕೆ ರಾಜ್ಯ ಸರ್ಕಾರ ₹52,000 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ವೆಚ್ಚ ಮಾಡುತ್ತಿದೆ. ಅಷ್ಟು ಹಣವನ್ನು ಒಂದು ವರ್ಷದ ಮಟ್ಟಿಗೆ ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿ. ಎರಡೂ ಕ್ಷೇತ್ರಗಳಿಗೆ ಕಾಯಕಲ್ಪ ಮಾಡಿದರೆ ಕರ್ನಾಟಕ ಇಡೀ ದೇಶಕ್ಕೆ ಮಾದರಿ ಆಗಲಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಗ್ಯಾರಂಟಿ ಹಣದಿಂದ ಕೃಷಿಕರ ಬದುಕು ಹಸನು ಆಗುವುದಿಲ್ಲ. ಆದರೆ, ಕೃಷಿ, ತೋಟಗಾರಿಕೆಗೆ ಶಕ್ತಿ ಈ ತುಂಬಿದರೆ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಇಂಥ ನೂರು ಗ್ಯಾರಂಟಿ ಕೊಡುವುದಕ್ಕೆ ಸಮವಾಗುತ್ತದೆ. ಇದರ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು. ರೈತರ ಬದುಕು ಶಾಶ್ವತವಾಗಿ ಹಸನು ಮಾಡುವ ಬಗ್ಗೆ ಸರ್ಕಾರ ಆಲೋಚನೆ ಮಾಡಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ತೋಟಗಾರಿಕೆಯಿಂದ ರೈತರು ಹೆಚ್ಚು ಆದಾಯ ಗಳಿಸುವ ಅಗತ್ಯ ಇದೆ. ವೈವಿಧ್ಯಮಯ ಬೆಳೆ ತೆಗೆಯಬೇಕು, ಅಧಿಕಾರಿಗಳು, ತಜ್ಞರು ರೈತರಿಗೆ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಮಾಡಬೇಕು. ಯುವ ರೈತರನ್ನು ಇಂಥ ಸಂಸ್ಥೆಗಳಿಗೆ ಕರೆದುಕೊಂಡು ಬಂದು, ಕೊನೆಪಕ್ಷ ಹದಿನೈದು ದಿನಗಳ ಕಾಲ ತರಬೇತಿ ಕೊಡಬೇಕು. ಆಧುನಿಕ ರೀತಿಯಲ್ಲಿ ತೋಟಗಾರಿಕೆ ಕೃಷಿ ಮಾಡಿದರೆ ಹೇಗೆ ಲಾಭ ಬರುತ್ತದೆ ಎನ್ನುವುದನ್ನು ಹೇಳಬೇಕು. ತಂತ್ರಜ್ಞಾನ ಹೇಗೆ ಬೆಳೆಯುತ್ತಿದೆ, ಜಗತ್ತನ್ನ ಬೇರೆ ಬೇರೆ ಭಾಗಗಳಲ್ಲಿ ಹೇಗೆ ಕೃಷಿ ಮಾಡಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆಯುವುದು ಹೇಗೆ ಎಂಬ ಬಗ್ಗೆ ಯುವ ರೈತರಿಗೆ ತಿಳಿ ಹೇಳಬೇಕು ಎಂದು ಸಚಿವರು ಸಲಹೆ ನೀಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸಂಸದ ಡಾ. ಸಿ ಎನ್ ಮಂಜುನಾಥ್, ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ. ಅಶೋಕ್ ದಲ್ವಾಲ್, ಭಾರತೀಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಅಧ್ಯಕ್ಷ ಡಾ. ಮೇಜರ್ ಸಿಂಗ್, ರಾಜ್ಯದ ಕೃಷಿ ಆಯುಕ್ತ ವೈ.ಎಸ್. ಪಾಟೀಲ್, ತೋಟಗಾರಿಕಾ ಇಲಾಖೆ ನಿರ್ದೇಶಕ ಡಿ.ಎಸ್. ರಮೇಶ್, ಮೇಳದ ಸಂಘಟನಾ ಕಾರ್ಯದರ್ಶಿ ಡಾ. ಶಂಕರ್ ಹೆಬ್ಬಾರ್ ಹಾಗೂ ICAR ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹರಾ ಅವರು ಉಪಸ್ಥಿತರಿದ್ದರು.