Menu

ಡಿಕೆ ಶಿವಕುಮಾರ್ ಸಿಎಂ ಮಾಡುವ ಕನಸು ಇದೆ: ಸೋದರ ಡಿಕೆ ಸುರೇಶ್

dk suresh

ಅಣ್ಣ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಕನಸು ಇದೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಆಗಬೇಕು ಎಂಬ ಕನಸು ಇದೆ. ಆದರೆ ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನ ಖಾಲಿ ಇದ್ದಾಗ ಪ್ರಯತ್ನ ಪಡೋಣ ಎಂದರು.

ಸಿಎಂ ಸ್ಥಾನದಲ್ಲಿ ಈಗ ಇರುವವನ್ನು ಕಿತ್ತು ಸಿಎಂ ಆಗಲು ಸಾಧ್ಯವಿಲ್ಲ. ನಮಗೆ ನಮ್ಮ ಪ್ರಯತ್ನದ ಮೇಲೆ ನಂಬಿಕೆ ಇದೆ. ನಂಬಿಕೆಯೇ ಜೀವನ ಎಂದು ಅವರು ಮಾರ್ಮಿಕವಾಗಿ ನುಡಿದರು.

ಶಿವಕುಮಾರ್ ಅವರು ಪಕ್ಷವನ್ನು ನಂಬಿದ್ದಾರೆ. ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಈಗ ಸಿಎಂ ಹುದ್ದೆ ಬಗ್ಗೆ ಚರ್ಚೆ ಮಾಡುವುದರಲ್ಲಿ ಅರ್ಥವಿಲ್ಲ. ಆ ಕಾಲ ಬರುತ್ತದೆಯೋ ಇಲ್ಲವೋ ನನಗೇನು ಗೊತ್ತು, ನಾನು ಹೇಗೆ ಹೇಳಲು ಸಾಧ್ಯ ಎಂದು ಹೇಳಿದರು.

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಈಗಲೂ ಹೇಳುತ್ತೇನೆ. ನಾನು ನನ್ನ ಆಸೆ ಮುಚ್ಚಿಟ್ಟಿಲ್ಲ. ಅದಕ್ಕೂ ಕಾಲ ಬರಬೇಕು. ಈಗ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಅವರು ಕೂತಿದ್ದಾರೆ. ಅವರನ್ನು ಎಳೆದು ಇವರನ್ನು ಕೂರಿಸಬೇಕು. ಅದು ಹೇಗಾಗುತ್ತದೆ. ಸಿದ್ದರಾಮಯ್ಯ ಅವರು ಆ ಸ್ಥಾನದಲ್ಲಿ ಕೂತಿರುವಾಗ ಅವರ ಗೌರವ, ಘನತೆ, ಅವರ ಮೇಲೆ ಇರುವ ನಂಬಿಕೆ ಎಲ್ಲವನ್ನು ಚಿಂತನೆ ಮಾಡಬೇಕು. ಇದೆಲ್ಲವನ್ನು ಪಕ್ಷ ಮಾಡುತ್ತದೆ ಎಂದರು.

ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಮುಂದೆ ಸಿಎಂ ಸ್ಥಾನಕ್ಕೆ ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ ಎಂಬ ಬಗ್ಗೆ ಕೇಳಿದಾಗ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಶಿವಕುಮಾರ್ ಅವರು ದೆಹಲಿಗೆ ಹೋಗಿದ್ದಾರೆ ಎಂದರೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಅವರು ಪಕ್ಷದ ಅಧ್ಯಕ್ಷರು. ಪ್ರತಿ ತಿಂಗಳು, ಹದಿನೈದು ದಿನಕ್ಕೊಮ್ಮೆ ದೆಹಲಿಗೆ ಹೋಗುತ್ತಾರೆ. ಅಧ್ಯಕ್ಷ ಸ್ಥಾನ ಇದ್ದಾಗ, ಇಲ್ಲದಿದ್ದಾಗಲೂ ಅವರು ಹೈಕಮಾಂಡ್ ನಾಯಕರ ಜತೆ ನಿರಂತರ ಒಡನಾಟ ಇಟ್ಟುಕೊಂಡಿರುತ್ತಾರೆ ಎಂದು ಅವರು ಹೇಳಿದರು.

ಅವರು ಸರ್ಕಾರಿ ಅಥವಾ ಖಾಸಗಿ ಕೆಲಸದ ಮೇಲೆ ದೆಹಲಿಗೆ ಹೋದರೂ ಅವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಪ್ರವೃತ್ತಿ ಹೊಂದಿದ್ದಾರೆ. ಹೀಗಾಗಿ ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸರ್ಕಾರದ ಉತ್ತಮ ಆಡಳಿತ, ಪಕ್ಷ ಸಂಘಟನೆ ಹೊರತಾಗಿ ಶಿವಕುಮಾರ್ ಅವರಿಗೆ ಬೇರೆ ಯಾವುದೇ ಅಜೆಂಡಾ ಇಲ್ಲ. ಅವರು ಈಗ ಉಪಮುಖ್ಯಮಂತ್ರಿಯಾಗಿದ್ದು, ಹಕ್ಕು ಪ್ರತಿಪಾದಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ನಲ್ಲಿ ಅಜಿತ್ ಪವಾರ್, ಏಕನಾಥ ಶಿಂಧೆ ಹುಟ್ಟುಕೊಂಡಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿ ನಾಯಕರ ಮಾತಿಗೆ ನಾನು ಉತ್ತರಿಸುವ ಅಗತ್ಯವಿಲ್ಲ. ಅವರು ಮೊದಲು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಅನಗತ್ಯವಾಗಿ ಕಾಂಗ್ರೆಸ್, ಶಿವಕುಮಾರ್ ಅವರ ಬಗ್ಗೆ ಮಾತನಾಡಿ ಸಮಯ ವ್ಯರ್ಥ ಮಾಡುವುದೇಕೆ?” ಎಂದು ಪ್ರಶ್ನಿಸಿದರು.

ಶಿವಕುಮಾರ್ ಕದ್ದುಮುಚ್ಚಿ ಯಾರನ್ನೂ ಭೇಟಿ ಮಾಡಿಲ್ಲ

ಶಿವಕುಮಾರ್ ಕದ್ದುಮುಚ್ಚಿ ಇಶಾ ಫೌಂಡೇಷನ್ ಕಾರ್ಯಕ್ರಮಕ್ಕೆ ಹೋಗಿಲ್ಲ. ಸಾರ್ವಜನಿಕವಾಗಿ ತಿಳಿಸಿಯೇ ಹೋಗಿದ್ದರು. ಸದ್ಗುರು ಅವರು ಮನೆಗೆ ಬಂದು ಆಹ್ವಾನ ನೀಡಿದ್ದರು. ಆಹ್ವಾನ ಸ್ವೀಕರಿಸಿ ಆ ಕಾರ್ಯಕ್ರಮಕ್ಕೆ ಹೋಗಿದ್ದರು ಎಂದರು.

ನಾನು ಹಾಗೂ ಶಿವಕುಮಾರ್ ಅವಕಾಶ ಸಿಕ್ಕಾಗೆಲ್ಲ ಶಿವನ ದೇವಾಲಯಕ್ಕೆ ಹೋಗುತ್ತೇವೆ. ಕಳೆದ 35 ವರ್ಷಗಳಿಂದ ರಾಜ್ಯ ಹಾಗೂ ರಾಷ್ಟ್ರದಲ್ಲಿರುವ ಧಾರ್ಮಿಕ ಕೇಂದ್ರಗಳಿಗೆ ನಿರಂತರವಾಗಿ ಭೇಟಿ ನೀಡುತ್ತಲೇ ಬಂದಿದ್ದಾರೆ. ಈಗ ಮಾಧ್ಯಮಗಳಿರುವ ಕಾರಣ ದೇವಾಲಯ ಭೇಟಿ ಬಗ್ಗೆ ಪ್ರಚಾರ ಆಗುತ್ತಿದೆ. ಅವರು ಕೊಲ್ಲೂರು, ಕುಕ್ಕೆ ಸುಬ್ರಹ್ಮಣ್ಯ ವರ್ಷಕ್ಕೆ ಎರಡು ಮೂರು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಾರೆ. ಇದರ ಜತೆಗೆ ಶೃಂಗೇರಿ ಮಠ, ಕೇರಳ, ತಮಿಳುನಾಡು, ಉತ್ತರ ಭಾರತದ ದೇವಾಲಯಕ್ಕೆ ಹೋಗುತ್ತಾರೆ. ಇದರಲ್ಲಿ ವಿಶೇಷ ಅರ್ಥವಿಲ್ಲ. ಒಬ್ಬ ಹಿಂದೂವಾಗಿ ತನ್ನ ಸಂಸ್ಕೃತಿ, ಸಂಸ್ಕಾರ ಪಾಲಿಸುತ್ತಿದ್ದಾರೆ ಎಂದು ಅವರು ವಿವರಿಸಿದರು.

ನಾವು ಎಲ್ಲಾ ಜಾತಿ, ಧರ್ಮಗಳನ್ನು ಗೌರವಿಸುತ್ತೇವೆ. ಶಿವಕುಮಾರ್ ತಮ್ಮ ಗುರುಗಳಿಂದ ದೀಕ್ಷೆ ಪಡೆದಿದ್ದು, ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂದು. ಈ ದೀಕ್ಷೆ ಅಡಿಯಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಡಿಕೆ ಸುರೇಶ್ ತಿಳಿಸಿದರು.

ನಾನು ದೇವಾಲಯಗಳಿಗೆ ಹೋಗುತ್ತೇನೆ. ಆದರೆ ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ. ಏನು ಮಾಡಲು ಸಾಧ್ಯ? ನಾನು ನಿಮ್ಮನ್ನೇ ದೇವರೆಂದು ಭಾವಿಸಿದ್ದೇನೆ. ನೀವು ಕೂಡ ಪ್ರಜೆಗಳು. ಜನರೇ ದೇವರು. ಕಾಯಕವೇ ಕೈಲಾಸ ಎಂದು ನಂಬಿದ್ದೇನೆ ಎಂದು ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಸತೀಶ್ ಜಾರಕಿಹೊಳಿ ಭೇಟಿ

ಸತೀಶ್ ಜಾರಕಿಹೊಳಿ ಅವರ ಭೇಟಿ ಬಗ್ಗೆ ಕೇಳಿದಾಗ, “ರಾಮನಗರ ಜಿಲ್ಲೆ ಹಾಗೂ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಲು ಭೇಟಿ ಮಾಡಿದ್ದೆ. ಸಿಎಂ ಜತೆ ಚರ್ಚಿಸಿ ಫೆಬ್ರವರಿ ಕೊನೆಯಲ್ಲಿ ಚರ್ಚೆ ಮಾಡುವುದಾಗಿ ಹೇಳಿದ್ದರು. ಬಜೆಟ್ ಮುಗಿದ ನಂತರ ಮಾಡುವುದಾಗಿ ಹೇಳಿದ್ದಾರೆ. ನಾನು ಹೊಸದಾಗಿ ಅವರನ್ನು ಭೇಟಿ ಮಾಡಿಲ್ಲ. ಸುಮಾರು ಹತ್ತಾರು ಬಾರಿ ಭೇಟಿ ಮಾಡಿದ್ದೇನೆ. ಕ್ಷೇತ್ರದ ಕೆಲಸದ ವಿಚಾರವಾಗಿ ಎಲ್ಲರ ಜತೆಗೂ ಚರ್ಚೆ ಮಾಡುತ್ತೇನೆ. ಪರಮೇಶ್ವರ್, ಮಹದೇವಪ್ಪ, ಎಂ.ಬಿ ಪಾಟೀಲ್, ಹೆಚ್.ಕೆ ಪಾಟೀಲ್, ಶಿವರಾಜ್ ತಂಗಡಗಿ, ಜಮೀರ್, ಕೃಷ್ಣ ಭೈರೇಗೌಡ ದಿನೇಶ್ ಗುಂಡೂರಾವ್, ರಹೀಮ್ ಖಾನ್, ಹಾಗೂ ಸಿಎಂ ಸೇರಿ ಎಲ್ಲರನ್ನು ಭೇಟಿ ಮಾಡುತ್ತೇನೆ. ನಾನು ಚುನಾವಣೆಯಲ್ಲಿ ಸೋತಿದ್ದರೂ ಕೆಲಸ ಕಾರ್ಯಕ್ಕಾಗಿ ಜನ ನನ್ನನ್ನು ಹುಡುಕಿಕೊಂಡು ಬರುತ್ತಾರೆ. ಸ್ಥಳೀಯವಾಗಿ ಅವರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದೆ ಇದ್ದಾಗ, ಮಂತ್ರಿಗಳ ಅವಶ್ಯಕತೆ ಬಿದ್ದಾಗ ಅವರನ್ನು ಭೇಟಿ ಮಾಡುತ್ತೇನೆ” ಎಂದು ಹೇಳಿದರು.

ಈ ಭೇಟಿಗೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ ಎಂದು ಕೇಳಿದಾಗ, “ಮಾಧ್ಯಮಗಳಿಗೆ ಇದೊಂದು ಸುದ್ದಿ. ವಿಶ್ಲೇಷಣೆ ಮಾಡುವವರಿಗೆ ಒಂದು ವಿಚಾರಕ್ಕೆ ಯಾವೆಲ್ಲಾ ಆಯಾಮ ನೀಡಬಹುದು ಅದನ್ನು ನೀಡುವುದು ಅವರ ಕೆಲಸ. ಆದರೆ ನಮ್ಮ ಗುರಿ ಸ್ಪಷ್ಟವಾಗಿದೆ. ಎಲ್ಲಾ ಸಚಿವರಿಗೂ ನಿಮ್ಮ ಮೇಲೆ ವಿಶೇಷ ಕಾಳಜಿ ಇದೆ ಎಂದು ಕೇಳಿದಾಗ, “ನಾನು ಮೊದಲಿನಿಂದಲೂ ಕಾಯಕವೇ ಕೈಲಾಸ ಎಂದು ನಂಬಿ ಕೆಲಸ ಮಾಡುತ್ತಿದ್ದೇನೆ ಎಂದರು.

 

Related Posts

Leave a Reply

Your email address will not be published. Required fields are marked *