Menu

ಮಾರ್ಚ್ 4 ಬೆಂಗಳೂರಿನಲ್ಲಿ ವೀರಶೈವ, ಲಿಂಗಾಯಿತ ಮುಖಂಡರ ಸಭೆ: ರೇಣುಕಾಚಾರ್ಯ

ತುಮಕೂರು: ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷ ಖಾತೆ ತೆರೆಯುವಂತಾಗಲು ಹಗಲಿರುಳು ಪಕ್ಷಕ್ಕಾಗಿ ದುಡಿದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ.ವಿಜಯೇಂದ್ರ ಅವರನ್ನು ಕೆಲ ಬಿಜೆಪಿ ಮುಖಂಡರು ಬಹಳ ಹೀನಾಯವಾಗಿ ಮಾತನಾಡುತಿದ್ದು, ಅವರಿಗೆ ಬಿ.ಎಸ್.ಯಡಿಯೂರಪ್ಪನವರ ಬಲ ಏನು ಎಂಬುದನ್ನು ತೋರಿಸುವ ಸಲುವಾಗಿ ಮಾರ್ಚ್ 4 ರ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರ ಮಂದಿರದಲ್ಲಿ ಹಳೆ ಮೈಸೂರು ಪ್ರಾಂತದ ವೀರಶೈವ,ಲಿಂಗಾಯಿತ ಮುಖಂಡ ಸಭೆ ಕೆರೆಯಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ವೀರಶೈವ-ಲಿಂಗಾಯಿತ ಮುಖಂಡರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಯಡಿಯೂರಪ್ಪನವರ ಬಲ ಪ್ರದರ್ಶನದ ಈ ಸಭೆಗೆ ವೀರ ಶೈವ ಲಿಂಗಾಯಿತ ಮಹಾ ಸಂಗಮ ಎಂದು ಹೆಸರಿಡಲಾಗಿದೆ.ಅಂದು ಹಳೆ ಮೈಸೂರು ಭಾಗಕ್ಕೆ ಸೇರಿದ ಎಲ್ಲಾ ಜಿಲ್ಲೆಗಳ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡು ಮುಂದಿನ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಲಿದ್ದೇವೆ.ಹಾಗಾಗಿ ಈ ಭಾಗದ ಎಲ್ಲಾ ವೀರಶೈವ,ಲಿಂಗಾಯಿತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿ, ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.

ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪನವರು ಎಂದಿಗೂ ಜಾತಿ ಮಾಡಿದವರಲ್ಲ. ಎಲ್ಲಾ ವರ್ಗದ ಮಠ, ಮಾನ್ಯಗಳಿಗೂ ಅನುದಾನ ನೀಡಿ, ಮಠಗಳು ಶೈಕ್ಷಣಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ನೆರವಾಗಿದ್ದಾರೆ. ಅಂತಹ ವ್ಯಕ್ತಿಯ ಕುಟುಂಬದ ವಿರುದ್ದ ಬಸರಾಜಪಾಟೀಲ್ ಯತ್ನಾಳ್ ಮತ್ತು ಕೆಲ ನಡೆಯದ ನಾಣ್ಯಗಳು ಕಳೆದ ನಾಲ್ಕು ತಿಂಗಳಿನಿಂದ ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ.

ಬಿ.ಎಸ್.ಯಡಿ ಯೂರಪ್ಪ ಲಿಂಗಾಯಿತ ನಾಯಕರೇ ಅಲ್ಲ. ಅವರ ಕುಟುಂಬದ ಹಿಂದೆ ಯಾವ ವೀರಶೈವರು ಇಲ್ಲ ಎಂಬ ಕ್ಷುಲ್ಲಕ ಹೇಳಿಕೆಗಳನ್ನು ನೀಡುತಿದ್ದಾರೆ. ಇದರಿಂದ ರಾಜ್ಯದ ವೀರಶೈವ,ಲಿಂಗಾಯಿತ ನಾಯಕರಿಗೆ ತೀವ್ರ ಬೇಸರ ಉಂಟಾಗಿದ್ದು, ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಅವರ ಶಕ್ತಿ ಏನು ಎಂದು ತೋರಿಸುವ ಸಲುವಾಗಿಯೇ ಈ ವೀರಶೈವ, ಲಿಂಗಾಯಿತ ಮಹಾಸಂಗಮ ಆಯೋಜಿಸುತಿದ್ದು, ಇದೇ ರೀತಿಯ ಪೂರ್ವಭಾವಿ ಸಭೆ ಉತ್ತರ ಕರ್ನಾಟಕದಲ್ಲಿ ಆದ ನಂತರ,ಒಂದು ಬೃಹತ್ ಸಮಾವೇಶ ನಡೆಸುವ ಆಲೋಚನೆ ಇದೆ ಎಂದು ಎಂ.ಪಿ..ರೇಣುಕಾಚಾರ್ಯ ನುಡಿದರು.

ಅಖಿಲ ಕರ್ನಾಟಕ ವೀರಶೈವ,ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಪರಮೇಶ್ ಮಾತನಾಡಿ, ಬಿ.ಎಸ್.ಯಡಿ ಯೂರಪ್ಪ ಕರ್ನಾಟಕದ ವೀರಶೈವ ಲಿಂಗಾಯಿತರ ಪ್ರಶ್ನಾತೀತ ನಾಯಕರು, ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರನ್ನು ಪಕ್ಷದಲ್ಲಿ ಕಡೆಗಣಿಸುವುದೆಂದರೆ, ಇಡೀ ಸಮುದಾಯವನ್ನೇ ಕಡೆಗಣಿಸಿದಂತೆ,ಬಿಜೆಪಿಗೆ ರಾಜ್ಯದಲ್ಲಿ ಉಳಿಗಾಲವಿಲ್ಲ.ನಮ್ಮ ನಾಯಕರಿಗೆ ಈ ರೀತಿಯ ಕಿರುಕುಳ ನೀಡುವುದು ಸಲ್ಲದು ಎಂದರು.

ತುಮಕೂರು ನಗರ ವೀರಶೈವ ಸೇವಾ ಸಮಾಜದ ಅಧ್ಯಕ್ಷ ಚಂದ್ರಮೌಳಿ ಮಾತನಾಡಿ, ಬಿ.ಎಸ್.ವೈ. ಮುಖ್ಯಮಂತ್ರಿಗಳಾಗಿದ್ದಾಗ ನೀಡಿದ ಹಲವಾರು ಯೋಜನೆಗಳಿಂದ ತುಮಕೂರು ಜಿಲ್ಲೆ ಅಭಿವೃದ್ದಿ ಕಂಡಿದೆ.ಹಾಗಾಗಿ ಅವರನ್ನು ಪಕ್ಷ ಕಡೆಗಣಿಸಿದರೆ, ಸಮಾಜ ಪಕ್ಷವನ್ನು ಕಡೆಗಣಿಸುವುದು ಅನಿವಾರ್ಯವಾಗುತ್ತದೆ ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮರಿಸ್ವಾಮಿ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರ ವಿರುದ್ದ ಬಸವರಾಜ ಪಾಟೀಲ್ ಯತ್ನಾಳ್ ಹೇಳಿಕೆ ನಂತರ ಬಿ.ಎಸ.ವೈ ಪರವಾಗಿ ರಾಜ್ಯದ ವೀರಶೈವ,ಲಿಂಗಾಯಿತರು ಸ್ವಯಂ ಪ್ರೇರಿತರಾಗಿ ದ್ವನಿ ಎತ್ತುತಿದ್ದಾರೆ. ಇಡೀ ರಾಜ್ಯದ ಶೈಕ್ಷಣಿಕ, ಅರ್ಥಿಕ,ಔದ್ಯೋಗಿಕ ಬೆಳವಣಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದು,ರಾಜ್ಯದ ಸಮಗ್ರ ಅಭಿವೃದ್ದಿಗೆ ದುಡಿದವರು ಬಿ.ಎಸ್.ಯಡಿಯೂರಪ್ಪ, ಅರ ಪರವಾಗಿ ನಾವೆಲ್ಲರೂ ನಿಲ್ಲಬೇಕಾಗಿದೆ.ಬಿ.ಎಸ್.ವೈ ಹೇಗೆ ನಮ್ಮ ನಾಯಕರೋ, ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರು ಸಹ ನಮ್ಮ ನಾಯಕರೇ, ಇದರಲ್ಲಿ ಯಾವ ಅನುಮಾನವೂ ಇಲ್ಲ. ಹಾಗಾಗಿ ಅವರ ಪರವಾಗಿ ನೇವೆಲ್ಲರೂ ನಿಲ್ಲಬೇಕಾಗಿದೆ ಎಂದರು.

ಸಭೆಯಲ್ಲಿ ಮುಖಂಡರಾದ ದಿಲೀಪ್, ಚಂದ್ರಶೇಖರಬಾಬು , ಕೈಗಾರಿಕಾ ಆಸೋಸಿಯೇಷನ್‌ನ ಅಧ್ಯಕ್ಷ ಗಿರೀಶ್ ಮತ್ತಿತರರು ಮಾತನಾಡಿದರು. ವೇದಿಕೆಯಲ್ಲಿ ವೀರಶೈವ, ಲಿಂಗಾಯಿತ ಸಮುದಾಯಕ್ಕೆ ಸೇರಿದ ವಿವಿಧ ಬ್ಯಾಂಕುಗಳ ಅಧ್ಯಕ್ಷರಾದ ಓಹಿಲೇಶ್ವರ್, ಬಾವಿಕಟ್ಟೆ ಮಂಜುನಾಥ್, ರುದ್ರಪ್ಪ, ಹಿರಿಯರಾದ ಸಿ.ವಿ.ಮಹದೇವಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Related Posts

Leave a Reply

Your email address will not be published. Required fields are marked *