ಗಡಿ ಭಾಗದಲ್ಲಿ ಮರಾಠಿ ಭಾಷಿಗರ ಪುಂಡಾಟಿಕೆ ಖಂಡಿಸಿ ಕನ್ನಡಿಗರ ಸ್ವಾಭಿಮಾನಕ್ಕಾಗಿ ಮಾರ್ಚ್ 22ರಂದು ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಕನ್ನಡ ಪರ ಸಂಘಟನೆಗಳ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಕನ್ನಡಿಗರ ಸ್ವಾಭಿಮಾನಕ್ಕಾಗಿ, ಕನ್ನಡಿಗರ ರಕ್ಷಣೆಗಾಗಿ ಹಾಗೂ ಕರ್ನಾಟಕದಲ್ಲಿ ಕನ್ನಡಿಗರ ವಿರುದ್ಧ ದೌರ್ಜನ್ಯ ಖಂಡಿಸಿ ಕರ್ನಾಟಕ ಬಂದ್ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬೆಳಗಾವಿಯಲ್ಲಿ ಕೆಎಸ್ಸಾರ್ಟಿಸಿ ಬಸ್ ಕಂಡಕ್ಟರ್ ಮೇಲೆ ನಡೆದ ಮರಾಠಿಗರ ದೌರ್ಜನ್ಯ ನಂತರ ಮಹಾರಾಷ್ಟ್ರದಲ್ಲಿ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ಹಲವಾರು ದೌರ್ಜನ್ಯ ಪ್ರಕರಣಗಳು ವರದಿ ಆಗಿವೆ. ಈ ಹಿನ್ನೆಲೆಯಲ್ಲಿ ಇದನ್ನು ಹಲವಾರು ರೀತಿಯ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಮಾರ್ಚ್ 7ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 3ರಂದು ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾರ್ಚ್ ೧೬ ರಂದು ಹೊಸಕೋಟೆ ಟೋಲ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು.
ಮಾರ್ಚ್ 22ರಂದು ನಾಲ್ಕನೇ ಶನಿವಾರದಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ಪ್ರಕಟಿಸಿದರು.
ಸಭೆಯಲ್ಲಿ ಸಾರಾ ಗೋವಿಂದು, ಪ್ರವೀಣ್ ಶೆಟ್ಟಿ ಬಣದ ಮುಖಂಡರು ಸೆರದಂತೆ ಹಲವರು ಪಾಲ್ಗೊಂಡಿದ್ದರು. ನಾರಾಯಣ ಗೌಡ ನೇತೃತ್ವದ ಕನ್ನಡ ಪರ ಸಂಘಟನೆ ಗೈರು ಹಾಜರಾಗಿತ್ತು.