ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಫೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವಂತೆ ಬೆಂಗಳೂರಿನ ೧ನೇ ತ್ವರಿತ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಯಡಿಯೂರಪ್ಪ ಅವರಿಗೆ ಮತ್ತೆ ಸಂಕಷ್ಟ ಶುರುವಾಗಿದೆ.
ಫೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ಕುರಿತು ಪೊಲೀಸರು ಸಲ್ಲಿಸಿದ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯ ವಿಚಾರಣೆಗೆ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸೇರಿದಂತೆ ಪ್ರಕರಣ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಖುದ್ದು ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.
ಮಾರ್ಚ್ 15ರಂದು ವಿಚಾರಣೆಯನ್ನು ಮುಂದೂಡಿರುವ ನ್ಯಾಯಾಲಯ ಅಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿಎಸ್. ಯಡಿಯೂರಪ್ಪ, ಎಸ್. ಮರಿಸ್ವಾಮಿ, ವೈಎಂ ಅರುಣ್ ಮತ್ತು ರುದ್ರೇಶ ಮರುಳಸಿದ್ದಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಪೋಕ್ಸೋ ಪ್ರಕರಣದಲ್ಲಿ ಯಡಿಯೂರಪ್ಪಗೆ ಕೆಲವೇ ದಿನಗಳ ಹಿಂದಷ್ಟೇ ಕರ್ನಾಟಕ ಹೈಕೋರ್ಟ್ನಲ್ಲಿ ರಿಲೀಫ್ ದೊರೆತಿತ್ತು. ಪ್ರಕರಣ ರದ್ದತಿ ಕೋರಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಧಾರವಾಡ ಪೀಠ, ನಿರೀಕ್ಷಣಾ ಜಾಮೀನು ನೀಡಿತ್ತು.
ಪ್ರಕರಣ ರದ್ದು ಮಾಡಲು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬಂಧನ ಭೀತಿಯಿಂದ ಪಾರಾದರೂ ವಿಚಾರಣೆ ಎದುರಿಸಲೇಬೇಕಾಗಿದೆ.
ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ಹಿನ್ನೆಲೆ ಯಡಿಯೂರಪ್ಪ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 2024 ರ ಮಾರ್ಚ್ನಲ್ಲಿ ಸಂತ್ರಸ್ತೆಯ ತಾಯಿ ಆರೋಪ ಮಾಡಿದ್ದರು.
ಬಳಿಕ ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.