Menu

ಮೊದಲೇ ತೂಕಡಿಸುವ ಜನಪ್ರತಿನಿಧಿಗಳಿಗೆ ಊಟದ ನಂತ್ರ ರಿಕ್ಲೈನರ್ ಚೇರ್‌ ಬೇರೆ ಕೊಡ್ಬೇಕಾ

ಅಧಿವೇಶನಗಳಿಗೆ ಹಾಜರಾಗುವುದಕ್ಕಿಂತ ಮಹತ್ವದ ಕೆಲಸ ಶಾಸಕರಿಗೆ ಬೇರಾವುದಿದೆ,  ಅದಕ್ಕೂ ಗೈರು ಹಾಜರಾಗಿ ಕಲಾಪಗಳಿಗೆ ಚಕ್ಕರ್ ಹೊಡೆಯುತ್ತಾರೆಂದರೆ ಇವರನ್ನು ಆರಿಸಿ ಕಳಿಸುವ ಪ್ರಮೇಯವಾದರೂ ಏನಿದೆ,  ಪ್ರೈಮರಿ ಶಾಲೆಯ ಮಕ್ಕಳು ಕೇವಲ ಎರಡು ಮೂರು ದಿನ ಶಾಲೆಗೆ ಚಕ್ಕರ್ ಹಾಕಿದಲ್ಲಿ ಅವರಿಗೆ ನಾನಾ ರೂಪದ ಶಿಕ್ಷೆ ಇರುತ್ತದೆಯಾದರೂ ಈ ಶಾಸಕರು ಕಲಾಪಗಳಿಗೆ ಗೈರಾದಲ್ಲಿ ಅದಕ್ಕೆ ಶಿಕ್ಷೆ ಕೊಡುವ ಕ್ರಮದ ಬದಲಿಗೆ ಅವರಿಗೆ ಉಪಾಹಾರ, ಊಟ ಹಾಗೂ ನಿದ್ರೆಗಾಗಿ ರಿಕ್ಲೈನರ್ ಚೇರ್‌ಗಳ ವ್ಯವಸ್ಥೆ ಮಾಡಿ ಕಲಾಪಕ್ಕೆ ಬರಲು ಇಂತಹಾ ಕಂಫ಼ರ್ಟ್ ಜ಼ೋನ್ ಮೋಟಿವೇಟ್ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂದರೆ, ಇದಕ್ಕೆ ಏನು ಹೇಳುವುದು?

ಮಾರ್ಚ್ ೩ ರಿಂದ ವಿಧಾನಸಭೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು ವಿಧಾನಸೌಧದಲ್ಲಿ ಮಧ್ಯಾಹ್ನ ಭೋಜನದ ಬಳಿಕ ಕಿರು ನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆ ಕಲ್ಪಿಸಲು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರಂತೆ!

ಎಂತಹಾ ಅದ್ಭುತ ಆಲೋಚನೆ..!
ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಳಕ್ಕೆ ಹಾಗೂ ಬೆಳಿಗ್ಗೆ ಬೇಗ ಕಲಾಪಕ್ಕೆ ಆಗಮಿಸಲು ಅನುವಾಗುವಂತೆ ಸ್ಪೀಕರ್‌ರವರು ಶಾಸಕರಿಗೆ ವಿಧಾನಸೌಧದಲ್ಲೇ ಉಚಿತವಾಗಿ ಬೆಳಗಿನ ಉಪಾಹಾರದ ವ್ಯವಸ್ಥೆಯನ್ನೂ ಮಾಡುವ ಮೂಲಕ, ಶಾಸಕರು ಹೊರಗಡೆ ಉಪಾಹಾರ ಸೇವಿಸಿ ಕಲಾಪಕ್ಕೆ ತಡವಾಗಿ ಬರುವುದನ್ನು ತಪ್ಪಿಸಲು ಹಾಗೂ ಮಧ್ಯಾಹ್ನ ಭೋಜನಕ್ಕೆ ಹೊರಗಡೆ ಹೋಗಿ ಬಳಿಕ ಕಲಾಪಕ್ಕೆ ಗೈರಾಗುವುದನ್ನು ತಪ್ಪಿಸಲು ಇಂತಹಾ ಉತ್ತೇಜನಾಕಾರಿ ಕ್ರಮ ವಹಿಸಿ ದ್ದಾರಂತೆ..!

ಶಾಸಕರು ಭೋಜನದ ಬಳಿಕ ನಿದ್ರೆ ಮಾಡಲು ಹೊರಗೆ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆಯ ಮೊಗಸಾಲೆಯಲ್ಲೇ ರಿಕ್ಲೈನರ್ ಚೇರ್‌ಗಳ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಸಾಹೇಬರು ತೀರ್ಮಾನಿಸಿದ್ದಾರಂತೆ. ಛೇ ಎಂತಹಾ ಅದ್ಭುತಾ ಐಡಿಯಾಗಳು, ತೀರ್ಮಾನಗಳು .

ಬಹುಶಃ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹೆಚ್ಚಿನ ಹಾಜರಾತಿಗಾಗಿ ಆರಂಭಿಸಿದ ಬಿಸಿಯೂಟವನ್ನು ಇದು ನೆನಪಿಸುತ್ತದೆ. ಇದನ್ನೆಲ್ಲಾ ನೋಡಿದಾಗ ಶಾಸಕರಿಗೆ ಲಾಲಿಪಾಪ್ ಕೊಟ್ಟು, ಲಾಲಿಸಿ, ಮುದ್ದಿಸಿ ರತ್ನಗಂಬಳಿ ಹಾಸಿ ವಿಧಾನಸಭಾ ಅಧಿವೇಶನಕ್ಕೆ ಕರೆ ತರುವ ಕ್ರಮಗಳು ಮುಂದೆ ಎಂದಾದರೂ ಜಾರಿಗೆ ಬಂದರೂ ಅಚ್ಚರಿಯಿಲ್ಲ.

ಅಲ್ಲಾ ಸ್ವಾಮಿ. ಈ ಶಾಸಕರನ್ನು ಚುನಾಯಿಸಿ ಕಳಿಸಿರುವುದು, ಅವರೇ ಚುನಾವಣಾ ಭಾಷಣಗಳಲ್ಲಿ ಹೇಳಿದಂತೆ ಜನಸೇವೆ ಮಾಡಲು ಅಲ್ಲವೇ? ತಮ್ಮ ಕ್ಷೇತ್ರದ ಹಾಗೂ ರಾಜ್ಯದ ಜನರ ಸಮಸ್ಯೆಗಳನ್ನು ಸಮರ್ಥವಾಗಿ ವಿಧಾನಸಭಾ ಅಧಿವೇಶನಗಳಲ್ಲಿ ಮಂಡಿಸಿ, ಆಳವಾಗಿ ಚರ್ಚಿಸಿ ಅವುಗಳಿಗೆ ಸೂಕ್ತ ಪರಿಹಾರ, ಕಾಯಿದೆ , ಕಾನೂನುಗಳನ್ನು ಕಂಡುಹಿಡಿಯುವ ಜವಾಬ್ದಾರಿ ಇವರ ಮೇಲಿದೆ. ಅದು ಅವರ ಕರ್ತವ್ಯವೂ ಹೌದು.

ಮೇಲಾಗಿ ಅಧಿವೇಶನಗಳು ನಡೆಯುವುದು ಮೂರ್ನಾಲ್ಕು ತಿಂಗಳಿಗೆ ಒಮ್ಮೆ, ಅದೂ ಗರಿಷ್ಠ ಎರಡು ಮೂರು ವಾರಗಳ ಕಾಲ ಮಾತ್ರ. ಇಂತಹ ಅಧಿವೇಶನಗಳಿಗೆ ಹಾಜರಾಗುವುದಕ್ಕಿಂತ ಮಹತ್ವದ ಕೆಲಸ ಶಾಸಕರಿಗೆ ಬೇರಾವುದಿದೆ? ಅದಕ್ಕೂ ಗೈರು ಹಾಜರಾಗಿ ಕಲಾಪಗಳಿಗೆ ಚಕ್ಕರ್ ಹೊಡೆಯುತ್ತಾರೆಂದರೆ ಇವರನ್ನು ಆರಿಸಿ ಕಳಿಸುವ ಪ್ರಮೇಯವಾದರೂ ಏನಿದೆ?

ಪ್ರೈಮರಿ ಶಾಲೆಯ ಮಕ್ಕಳು ಕೇವಲ ಎರಡು ಮೂರು ದಿನ ಶಾಲೆಗೆ ಚಕ್ಕರ್ ಹಾಕಿದಲ್ಲಿ ಅವರಿಗೆ ನಾನಾ ರೂಪದ ಶಿಕ್ಷೆ ಇರುತ್ತದೆಯಾದರೂ ಈ ಶಾಸಕರು ಕಲಾಪಗಳಿಗೆ ಗೈರಾದಲ್ಲಿ ಅದಕ್ಕೆ ಶಿಕ್ಷೆ ಕೊಡುವ ಕ್ರಮದ ಬದಲಿಗೆ ಅವರಿಗೆ ಉಪಾಹಾರ, ಊಟ ಹಾಗೂ ನಿದ್ರೆಗಾಗಿ ರಿಕ್ಲೈನರ್ ಚೇರ್‌ಗಳ ವ್ಯವಸ್ಥೆ ಮಾಡಿ ಕಲಾಪಕ್ಕೆ ಬರಲು ಇಂತಹಾ ಕಂಫ಼ರ್ಟ್ ಜ಼ೋನ್ ಮೋಟಿವೇಟ್ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆಂದರೆ…. ಇದಕ್ಕೆ ಏನು ಹೇಳುವುದು? ಇವರೆಲ್ಲಾ ನಮ್ಮ ಜನಪ್ರತಿನಿಧಿಗಳು ಹಾಗೂ ಕಾನೂನು ರೂಪಿಸುವವರು.

ಮಾನ್ಯ ಅಧ್ಯಕ್ಷರೇ, ದಯಮಾಡಿ ಇಂತಹಾ ಸಾಫ಼್ಟ್ ಕ್ರಮಗಳಿಂದ ಹಾಜರಾತಿ ಹೆಚ್ಚಿಸುವ ದರ್ದು ಬೇಕಿಲ್ಲ. ನೀವೆಲ್ಲಾ ಕಲಾಪ ನಡೆಸುತ್ತಿರುವುದು ಜನರ ತೆರಿಗೆ ಹಣದಿಂದಲೇ ಹೊರತು ಯಾವ ಶಾಸಕರ ಜೇಬಿನಿಂದ ತೆಗೆದಿರಿಸಿದ ಹಣದಿಂದಲ್ಲ. ವಿಧಾನಸಭೆಯಲ್ಲಿ ನೀವು ವ್ಯರ್ಥ ಮಾಡುವ ಪ್ರತೀ ನಿಮಿಷಕ್ಕೂ ಲಕ್ಷಾಂತರ ರೂಪಾಯಿ ಜನರ ಹಣ ಪೋಲಾಗುತ್ತದೆ ಎಂಬ ಅರಿವು ಎಲ್ಲರಲ್ಲೂ ಇರಬೇಕಾಗಿರುವುದು ಅಪೇಕ್ಷಣೀಯ. ಕಲಾಪಗಳಿಗೆ ಗೈರು ಹಾಜರಾದರೆ ಅಂಥವರನ್ನು ಪಕ್ಷಾ ತೀತವಾಗಿ ಶಿಕ್ಷೆಗೆ ಒಳಪಡಿಸಿ. ಅವರನ್ನು ಮುಂದಿನ ಅಧಿವೇಶನಗಳಿಗೆ ಬ್ಯಾನ್ ಮಾಡಿ. ಆಗ ಆಯಾ ಕ್ಷೇತ್ರದ ಜನರೇ ಅವರನ್ನು ವಿಚಾರಿಸಿಕೊಳ್ಳುತ್ತಾರೆ. ಕಲಾಪ ಗಳಿಗೆ ಹಾಜರಾಗದ ಶಾಸಕನಿಂದ ಕ್ಷೇತ್ರಕ್ಕೆ, ರಾಜ್ಯಕ್ಕೆ ಎಂತಹಾ ಉಪಯೋಗವಾಗಲಿಕ್ಕೆ ಸಾಧ್ಯ ಹೇಳಿ?

ಸರ್ಕಾರಿ ನೌಕರರು, ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಕೇವಲ ಒಂದು ದಿನ ತಮ್ಮ ತಮ್ಮ ಕರ್ತವ್ಯಗಳಿಗೆ ಗೈರು ಆದಲ್ಲಿ ಅವರಾರಿಗೂ ಇಲ್ಲದ ಈ ರೀತಿಯ ಬೆಣ್ಣೆ ಸವರುವ ಸೌಲಭ್ಯ ಸವಲತ್ತುಗಳು ಜನರ ದುಡ್ಡಿನಿಂದ ನಡೆಸುವ ಅಧಿವೇಶನಗಳಿಗೆ ಗೈರು ಆಗುವವರಿಗೆ ಯಾಕೆ ಬೇಕು?

ಮಾನ್ಯ ಸ್ಪೀಕರ್ ಸಾಹೇಬರೇ… ದಯಮಾಡಿ ಇಂತಹ ಕ್ರಮಗಳು ಕೇವಲ ಅಸಹಾಯಕತೆಯ ಜಗಜ್ಜಾಹೀರಂತೆ ತೋರುತ್ತದೆಯೇ ವಿನಃ ಉತ್ತೇಜನಕಾರಿಯಾಗಿ ಸ್ವೀಕರಿಸಲಾಗದು. ಓಟು ಕೊಟ್ಟ ಜನರೆಲ್ಲಾ ಈ ಬಗ್ಗೆ ಟೀಕೆ ಟಿಪ್ಪಣಿ ಮಾಡುವ ಮೊದಲು ಈಗ ಘೋಷಿಸಿರುವ ಸೌಲಭ್ಯಗಳನ್ನು ಹಿಂದಕ್ಕೆ ಪಡೆದು ಕಲಾಪಗಳಿಗೆ ಶಾಸಕರ ಸಂಪೂರ್ಣ ಹಾಜರಾತಿಗಾಗಿ ಕಠಿಣ ನಿಯಮಗಳನ್ನು ಜಾರಿಗೆ ತನ್ನಿ. ಸತತ ಗೈರು ಆಗುವ ಶಾಸಕರನ್ನು ಇಡೀ ಅಧಿವೇಶನಕ್ಕೆ ಬಹಿಷ್ಕರಿಸುವ ದಿಟ್ಟತನ ತೋರಿ. ಆಗ ಶಿಸ್ತು ತಾನೇ ತಾನಾಗಿ ಮೂಡುತ್ತದೆ. ಆಗಲೂ ಮೂಡದಿದ್ದಲ್ಲಿ ಚುನಾವಣೆಯಲ್ಲಿ ಜನರೇ ವಿಚಾರಿಸಿಕೊಳ್ಳುತ್ತಾರೆ.

ಜನರಿಂದ ಶಾಸಕರೇ ಹೊರತು, ಶಾಸಕರಿಂದ ಜನರಲ್ಲ ಎಂಬ ವಾಸ್ತವ ಪ್ರಜ್ಞೆ ಮೂಡಿಸಲು ಯತ್ನಿಸಿದಲ್ಲಿ ಬಹುಶಃ ಅದುವೇ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಕೊಡುವ ಗೌರವ.

ಮರೆಯುವ ಮುನ್ನ
ಅನೇಕ ಬಾರಿ, ರಾಜ್ಯದ ಗಂಭೀರ ಸಮಸ್ಯೆಗಳ ಮೇಲೆ, ಮಹತ್ತರ ವಿಷಯಗಳ ಮೇಲೆ ಚರ್ಚೆ ನಡೆಯುವಾಗಲೂ ಇಡೀ ವಿಧಾನಸಭೆ, ಸದಸ್ಯರಿಲ್ಲದೇ, ಸಂಬಂಧಿ ಸಿದ ಸಚಿವರಿಲ್ಲದೇ ಬಣಗುಟ್ಟುತ್ತಿರುವುದನ್ನು ನೋಡಿರಬಹುದು. ಒಬ್ಬ ಜನಪ್ರತಿನಿಧಿಯಾಗಿ ರಾಜ್ಯದ ಆಗುಹೋಗುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು, ತನ್ನ ಕ್ಷೇತ್ರದ ಸಮಸ್ಯೆಗಳನ್ನು ಪರಿಪೂರ್ಣವಾಗಿ ತಿಳಿದು ಅಧಿವೇಶನದಲ್ಲಿ ಆ ಬಗ್ಗೆ ಚರ್ಚಿಸದೇ ತಪ್ಪಿಸಿಕೊಂಡಲ್ಲಿ ಅಂಥವರು ಜನರ ಪ್ರತಿನಿಧಿ ಎನಿಸಿಕೊಳ್ಳಲು ಸಾಧ್ಯವೇ?

ವರ್ಷಕ್ಕೆ ಸರಾಸರಿ ಅರವತ್ತರಿಂದ ಎಪ್ಪತ್ತು ದಿನಗಳು ಮಾತ್ರ ಅಸೆಂಬ್ಲಿ ಸೆಷನ್ಸ್ ನಡೆದರೆ, ಊಟ, ತಿಂಡಿ ನಿದ್ದೆ, ಮನರಂಜನೆ, ರಾಜಕೀಯ ಹಾಗೂ ಜನಸೇವೆ ಮಾಡಲು ಹೆಚ್ಚು ಕಡಿಮೆ ಉಳಿದ ಮುನ್ನೂರು ದಿನಗಳು ನಮ್ಮ ಜನಪ್ರತಿನಿಧಿಗಳಿಗೆ ಸಿಗಲಿವೆ. ಕೊನೇಪಕ್ಷ ಮಹತ್ವದ ಅಧಿವೇಶನಗಳಲ್ಲೂ ಸರಿಯಾಗಿ ಭಾಗವಹಿ ಸದೇ ಇವರು ತಪ್ಪಿಸಿಕೊಂಡಲ್ಲಿ, ವಿಧಾನಸಭಾ ಅಧಿವೇಶನ ನಡೆಸುವ ಬದಲು ಪರ್ಯಾಯ ಮಾರ್ಗ ಹುಡುಕುವುದೇ ಸೂಕ್ತ. ಕೊನೇಪಕ್ಷ ಆಗ ಜನರ  ತೆರಿಗೆ ಹಣವಾದರೂ ಪೋಲಾಗುವುದು ತಪ್ಪೀತು!

ವಿಧಾನಸಭಾ ಅಧಿವೇಶನಗಳಲ್ಲಿ ಗೈರು ಹಾಜರಾದ ಶಾಸಕರನ್ನು ಬರುವ ಚುನಾವಣೆಯಲ್ಲಿ ಪ್ರಶ್ನಿಸಿ ಅಂಥವರನ್ನು ಮುಲಾಜಿಲ್ಲದೇ ಸೋಲಿಸಿ ಮನೆಗೆ ಕಳಿಸುವುದಕ್ಕಿಂತ ದೊಡ್ಡ ಶಿಕ್ಷೆ ಬೇರಾವುದೂ ಇರದು. ಜನರು ಈ ಬಗ್ಗೆ ಯೋಚಿಸುವಂತಾದಲ್ಲಿ ಜನಪ್ರತಿನಿಧಿಗಳೂ ಬದಲಾಗಬಹುದು!

-ಹಿರಿಯೂರು ಪ್ರಕಾಶ್
ಲೇಖಕರು

Related Posts

Leave a Reply

Your email address will not be published. Required fields are marked *