ಕೇಂದ್ರ ಸರ್ಕಾರ ಮತ್ತು ತಮಿಳುನಾಡು ನಡುವೆ ನಡೆಯುತ್ತಿರುವ ತ್ರಿಭಾಷಾ ವಿವಾದ ಇದೀಗ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಕಳೆದ 100 ವರ್ಷಗಳಲ್ಲಿ ಉತ್ತರ ಭಾರತದ 25 ಭಾಷೆಗಳನ್ನು ಹಿಂದಿ ಭಾಷೆ ಧ್ವಂಸಗೊಳಿಸಿದೆ ಎಂಬ ಗಂಭೀರ ಆರೋಪದಿಂದ ಮತ್ತೊಂದು ತಿರುವು ಪಡೆದಿದೆ.
ಉತ್ತರ ಪ್ರದೇಶ ಮತ್ತು ಬಿಹಾರ ಹಿಂದಿ ಭಾಷಾ ರಾಜ್ಯಗಳೇ ಆಗಿರಲಿಲ್ಲ. ಆದರೆ ಇದೀಗ ಕೇಂದ್ರದ ಹಿಂದಿ ಹೇರಿಕೆಯಿಂದಾಗಿ ಆ ರಾಜ್ಯಗಳು ಹಿಂದಿ ರಾಜ್ಯಗಳಾಗಿ ಬದಲಾಗಿವೆ. ಹಿಂದಿ ಹೇರಿಕೆಯಿಂದಾಗಿ 25ಕ್ಕೂ ಹೆಚ್ಚು ದೀರ್ಘ ಇತಿಹಾಸ ಹೊಂದಿದ್ದ ಭಾಷೆಗಳು ನಾಶವಾಗಿವೆ ಎಂದು ಸ್ಟಾಲಿನ್ ಆರೋಪಿಸಿದರು.
ಅತ್ಯಂತ ಪ್ರಬಲ ಹಾಗೂ ಸುದೀರ್ಘ ಇತಿಹಾಸ ಹೊಂದಿರುವ ಭಾಷೆಗಳು ಹಿಂದಿ ಹೇರಿಕೆ ವಿರುದ್ಧ ಸೆಡ್ಡು ಹೊಡೆಯುವ ಕಾಲ ಬಂದಿದೆ. ನಾವು ಭಾಷಾ ಹೇರಿಕೆ ವಿರುದ್ಧ ಹೋರಾಟ ಮಾಡದೇ ಇದ್ದರೆ ಮುಂದೊಂದು ದಿನ ನಮ್ಮ ಮಾತೃಭಾಷೆಯನ್ನು ಕೂಡ ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಗುರುವಾರ ಬೆಳಿಗ್ಗೆ ಎಕ್ಸ್ ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸ್ಟಾಲಿನ್, ತಮಿಳು ನಾಯಕರು 2026 ಚುನಾವಣೆ ಹಿನ್ನೆಲೆಯಲ್ಲಿ ಹಿಂದಿ ಹೇರಿಕೆ ಕುರಿತು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ ಎಂಬ ಬಿಜೆಪಿಯ ಆರೋಪ ಪ್ರಸ್ತಾಪಿಸಿರುವ ಅವರು, ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ಹಾಳು ಮಾಡಲು ಯತ್ನಿಸಲಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ತ್ರಿ ಭಾಷಾ ಸೂತ್ರದಡಿ ಯಾವುದೇ ವಿದ್ಯಾರ್ಥಿ ದೇಶದ ಯಾವುದೇ ಭಾಗದಲ್ಲಿ ಯಾವುದೇ ಭಾಷೆಯನ್ನು ಕಲಿಕೆಯಾಗಿ ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಿದೆ. ಆದರೆ ತಮಿಳು ಭಾಷೆಯನ್ನು ತಮಿಳುನಾಡು ಹೊರತುಪಡಿಸಿ ಯಾವುದೇ ರಾಜ್ಯದಲ್ಲಿ ಕಲಿಸುವುದೇ ಇಲ್ಲ. ಹಿಂದಿಯನ್ನೇ ಆಯ್ಕೆ ಮಾಡುವ ಪರಿಸ್ಥಿತಿಗೆ ವಿದ್ಯಾರ್ಥಿಗಳನ್ನು ತಳ್ಳಲಾಗುತ್ತದೆ ಎಂದು ಸ್ಟಾಲಿನ್ ವಿವರಿಸಿದ್ದಾರೆ.
ಸ್ಟಾಲಿನ್ ಆರೋಪದ ಬೆನ್ನಲ್ಲೇ ಬಿಜೆಪಿ ಇದೊಂದು ಕ್ಷುಲಕ ವಿಷಯ ಎಂದು ಪ್ರತಿಕ್ರಿಯಿಸಿದೆ. ಅಲ್ಲದೇ ಚುನಾವಣಾ ತಂತ್ರಗಾರಿಕೆಗೆ ಭಾಷಾ ನೀತಿಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದೆ.