ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಕ್ಷಿಗಳು ನಿಗೂಢವಾಗಿ ಮೃತಪಟ್ಟಿದ್ದು, ತೆಲಂಗಾಣದಲ್ಲಿವ್ಯಾಪಿಸಿರುವ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ.
ಹೀಗಾಗಿ ಜಿಲ್ಲೆಯಲ್ಲಿ ಬರ್ಡ್ ಫ್ಲೂ ಹರಡುತ್ತಿರುವ ಆತಂಕ ಉಂಟಾಗಿದೆ. ಮಾನ್ವಿಯಲ್ಲಿ ಪ್ರತಿದಿನ ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿ ನಾನಾ ಪ್ರಭೇದದ ಪಕ್ಷಿಗಳು ಸಾಯುತ್ತಿವೆ.
ಮಕ್ಸೂದ್ ಅಲಿ ಎಂಬವರ ತೋಟದಲ್ಲಿ ಪ್ರತಿದಿನ 8-10 ಪಕ್ಷಿಗಳು ಸಾಯುತ್ತಿವೆ. ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪಕ್ಷಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿವೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಪಶುವೈದ್ಯಾಧಿಕಾರಿಗಳು, ಮರದಿಂದ ಬಿದ್ದ ಪಕ್ಷಿಗಳಿಗೆ ಇಂಜೆಕ್ಷನ್ ನೀಡಿ ರಕ್ಷಣೆ ಮಾಡಿದ್ದಾರೆ. ಮೃತ ಪಕ್ಷಿಗಳ ದೇಹವನ್ನು ಬೆಂಗಳೂರಿನ ಐಎಚ್‌ವಿವಿ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.
ಪಕ್ಷಿಗಳ ಸಾವಿಗೆ ಬೇರೆ ಬೇರೆ ಕಾರಣಗಳು ಇರುತ್ತದೆ. ಈಗಲೇ ಏನನ್ನೂ ಹೇಳಲು ಆಗದು, ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾನ್ವಿ ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಹಿರೇಮಠ ಹೇಳಿದ್ದಾರೆ.