Thursday, February 27, 2025
Menu

ಕೆಲಸದ ವೇಳೆ ನಿದ್ದೆ ಮಾಡಿದ್ದಕ್ಕೆ ಅಮಾನತು: ಆದೇಶ ರದ್ದುಗೊಳಿಸಿದ ಹೈಕೋರ್ಟ್‌

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕೊಪ್ಪಳದ ಕುಕನೂರು ಡಿಪೋದಲ್ಲಿ ಕೆಎಸ್‌ಟಿ ಕಾನ್ಸ್‌ಟೆಬಲ್‌ ಚಂದ್ರಶೇಖರ್‌ ಎಂಬವರನ್ನು ಕೆಲಸದ ವೇಳೆ ನಿದ್ರೆ ಮಾಡುತ್ತಿದ್ದರೆಂಬ ಕಾರಣಕ್ಕೆ ಸೇವೆಯಿಂದ ಅಮಾನತುಗೊಳಿಸಿದ್ದ ನಿಗಮದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ನಿದ್ರೆ ಮನುಷ್ಯನಿಗೆ ಅತ್ಯಗತ್ಯ. ನಿದ್ರೆ ಮತ್ತು ಕೆಲಸದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಬಿಡುವಿಲ್ಲದೆ 60 ದಿನ ದಿನಕ್ಕೆ 16 ಗಂಟೆ ಕೆಲಸ ಮಾಡಿಸಿದ್ದರಿಂದ ಸಹಜವಾಗಿಯೇ ನಿದ್ರೆ ಮಾಡಿರಬಹುದು. ಅಮಾನತು ಕ್ರಮ ಸರಿಯಲ್ಲ ಎಂದು ಕೋರ್ಟ್‌ ಹೇಳಿದೆ.

ಅಮಾನತು ಆದೇಶ ರದ್ದು ಕೋರಿ ಕಾನ್ಸ್‌ಟೆಬಲ್‌ ಚಂದ್ರಶೇಖರ್‌ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ಉದ್ಯೋಗಿಗಳಿಗೆ ಸರಿಯಾದ ನಿದ್ರೆ ಮತ್ತು ಕೆಲಸ ಅವಶ್ಯಕತೆಯಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಕೆಲಸ ಮಾಡಲು ಉದ್ಯೋಗಿಯನ್ನು ಕೇಳಿದರೆ, ದೇಹವು ಆ ಉದ್ಯೋಗಿಯನ್ನು ನಿದ್ರೆಗೆ ಜಾರಿಸುತ್ತದೆ. ನಿದ್ರೆ ಕೊರತೆಯಾದಲ್ಲಿ ಯಾವುದೇ ಮನುಷ್ಯ, ಎಲ್ಲಿಬೇಕಾದರೂ ನಿದ್ರೆಗೆ ಜಾರುತ್ತಾನೆ. ಕೆಲಸ ಮತ್ತು ಜೀವನದ ನಡುವಿನ ಸಮತೋಲನದ ಪ್ರಮುಖ ಅಂಶವೆಂದರೆ ನಿದ್ರೆ ಮತ್ತು ವಿರಾಮ ಎಂದು ಅಭಿಪ್ರಾಯ ಪಟ್ಟಿದೆ.

ವೈದ್ಯರ ಸಲಹೆಯಂತೆ ಔಷಧ ಸೇವಿಸಿದ್ದೆ. ನಿರಂತರವಾಗಿ ಎರಡು ಮತ್ತು ಮೂರನೇ ಪಾಳಿಯಲ್ಲಿ ಕೆಲಸ ಮಾಡುತ್ತಿ ದ್ದರಿಂದ ನಿದ್ರೆ ಕೊರತೆಯಾಗಿ ಕರ್ತವ್ಯದ ಸಮಯದಲ್ಲಿ ನಿಮಿಷ ಕಾಲ ನಿದ್ರೆ ಮಾಡಿದ್ದೆ. ಇದಕ್ಕಾಗಿ ನಿಗಮ ಸೇವೆಯಿಂದ ಅಮಾನತುಪಡಿಸಿದೆ ಎಂದು ಕಾನ್ಸ್‌ಟೆಬಲ್‌ ಚಂದ್ರಶೇಖರ್‌ ತಿಳಿಸಿದ್ದರು.

ಸಂವಿಧಾನದ ಪರಿಚ್ಛೇದ 24ರಡಿ ಘೋಷಣೆಯಾಗಿರುವ ಮಾನವ ಹಕ್ಕುಗಳ ಪ್ರಕಾರ ಪ್ರತಿಯೊಬ್ಬರೂ ವಿಶ್ರಾಂತಿ, ವಿರಾಮದ ಹಕ್ಕು ಹೊಂದಿದ್ದಾರೆ. ಕೆಲಸದ ಸಮಯವು ಸಮಂಜಸವಾದ ಮಿತಿ ಮತ್ತು ವೇತನದೊಂದಿಗೆ ಆವರ್ತಕ ರಜಾ ದಿನ ಒಳಗೊಂಡಿರಬೇಕು ಎಂದು ಪೀಠ ತಿಳಿಸಿದೆ.

Related Posts

Leave a Reply

Your email address will not be published. Required fields are marked *