ಕಾಂಗ್ರೆಸ್ ಕಡು ದಲಿತ ವಿರೋಧಿ ಎಂಬುದನ್ನು ಕರ್ನಾಟಕ ಕಾಂಗ್ರೆಸ್ ಶಾಸಕರೇ ಒಪ್ಪಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಜನಪರ ಉತ್ಸವಕ್ಕೆ ಜಿಲ್ಲೆಯ ಪರಿಶಿಷ್ಟ ಜಾತಿ ಶಾಸಕರಾದ ಕಾಂಗ್ರೆಸ್‌ನ ಎಸ್.ಎನ್.ನಾರಾಯಣಸ್ವಾಮಿ (ಬಂಗಾರಪೇಟೆ), ರೂಪಕಲಾ ಶಶಿಧರ್ (ಕೆಜಿಎಫ್) ಹಾಗೂ ಜೆಡಿಎಸ್‌ನ ಸಮೃದ್ಧಿ ಮಂಜುನಾಥ್ (ಮುಳಬಾಗಿಲು) ಗೈರಾಗಿದ್ದು, ತಮಗೆ ಆಹ್ವಾನವೇ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಅಶೋಕ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಕಾಂಗ್ರೆಸ್ ನಾಯಕರಿಗೆ ದಲಿತರನ್ನು ಕಂಡರೆ ಈ ಪರಿ ದ್ವೇಷ ಏಕೆ, ದಲಿತರಿಗಾಗಿ ಮೀಸಲಿಟ್ಟದ್ದ ಹಣದಲ್ಲಿ ಉತ್ಸವ ನಡೆಸಲಾಗಿದ್ದು, ಜಿಲ್ಲೆಯ ಯಾವ ಪರಿಶಿಷ್ಟ ಶಾಸಕರನ್ನೂ ವಿಶಾಸಕ್ಕೆ ತೆಗೆದುಕೊಂಡಿಲ್ಲ ಎಂದು ಶಾಸಕರು ಆರೋಪಿಸಿದ್ದಾರೆ. ಬಜೆಟ್ ನಲ್ಲಿ ಜಿಲ್ಲೆಯ ಬೇಡಿಕೆಗಳೇನು ಎನ್ನುವ ಬಗ್ಗೆಯೂ ಶಾಸಕರ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಸಮುದಾಯದ ಶಾಸಕರದ್ದೆ ಈ ಗತಿಯಾದರೆ ಇನ್ನು ಪರಿಶಿಷ್ಟ ಸಮುದಾಯಗಳ ಜನಸಾಮಾನ್ಯರ ಗತಿ ಏನು ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಪರಿಶಿಷ್ಟ ಸಮುದಾಯದ ಶಾಸಕರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ದಲಿತರ ವೋಟು ಬೇಕು, ಆದರೆ ದಲಿತರ ಅಭಿವೃದ್ಧಿ ಬೇಡ. ಇದು ಕಾಂಗ್ರೆಸ್ ಪಕ್ಷದ ಅಸಲಿಯತ್ತು ಎಂದಿದ್ದಾರೆ.
ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿದ್ಯಾಕೆ: ಬಿರು ಬೇಸಿಗೆಯನ್ನೂ ಲೆಕ್ಕಿಸದೆ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ 1.24 ಟಿಎಂಸಿ ನೀರನ್ನು ತೆಲಂಗಾಣ ರಾಜ್ಯಕ್ಕೆ ಹರಿಸುತ್ತಿದೆ ಎಂದು ಅಶೋಕ್ ಟೀಕಿಸಿದ್ದಾರೆ.
ಈಗ ನೀರು ಬಿಟ್ಟರೆ ರಾಜ್ಯಕ್ಕೆ ತೊಂದರೆ ಆಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಟ್ಟಮೇಲೂ, ರೈತ ಪರ ಸಂಘಟನೆಗಳ ವಿರೋಧದ ನಡುವೆಯೂ ರಾಜಕೀಯ ಸ್ವಾರ್ಥಕ್ಕಾಗಿ ತೆಲಂಗಾಣಕ್ಕೆ ನೀರು ಹರಿಸಿದ್ದೀರಿ. ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ಹೈಕಮಾಂಡ್ ಬಳಿ ನಿಮ್ಮ ಪರ ಲಾಭಿ ಮಾಡಲು ತೆಲಂಗಾಣ ಕಾಂಗ್ರೆಸ್ ನಾಯಕರೊಂದಿಗೆ ಏನಾದರೂ ಒಳ ಒಪ್ಪಂದ ಮಾಡಿಕೊಂಡಿದ್ದೀರಾ, ನಾಡಿನ ರೈತರು, ಜನಸಾಮಾನ್ಯರ ಹಿತರಕ್ಷಣೆಗಿಂತ ತಮ್ಮ ರಾಜಕೀಯ ಸ್ವಾರ್ಥವೇ ಹೆಚ್ಚಾಯ್ತಾ, ಇಷ್ಟಕ್ಕೂ ಯಾರನ್ನ ಕೇಳಿ ಕರ್ನಾಟಕದ ನೀರನ್ನು ತೆಲಂಗಾಣಕ್ಕೆ ಹರಿಸಲು ಅನುಮತಿ ಕೊಟ್ಟಿರಿ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.