“ನಾನು ಹುಟ್ಟುತ್ತಲೇ ಕಾಂಗ್ರೆಸಿಗ. ನನ್ನ ವೈಯಕ್ತಿಕ ನಂಬಿಕೆ, ನಾನು ಪಾಲಿಸುತ್ತೇನೆ. ಇದಕ್ಕೆ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.
ಕೆ.ಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷರಾಗಿ ನೀವೇ ಮುಂದುವರಿಯಬೇಕು ಎಂದು ಮನವಿ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಕೇಳಿದಾಗ, “ಇದು ಸುಳ್ಳು. ಇದೆಲ್ಲವೂ ಸೃಷ್ಟಿ ಮಾಡಲಾಗಿರುವ ಸುದ್ದಿ. ಇನ್ನು ಅನೇಕ ವಿಚಾರಗಳಲ್ಲಿ ಸುದ್ದಿಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಸದ್ಗುರು ಅವರು ನನ್ನ ಮನೆಗೆ ಬಂದು ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ನೀಡಿದರು. ಅವರು ನಮ್ಮ ಮೈಸೂರಿನವರು. ಅವರ ಜ್ಞಾನವನ್ನು ನಾನು ಮೆಚ್ಚುತ್ತೇನೆ. ಕಳೆದ ವರ್ಷ ನನ್ನ ಮಗಳು ಆ ಕಾರ್ಯಕ್ರಮಕ್ಕೆ ಹೋಗಿದ್ದಳು. ಈ ಬಾರಿ ಅವರು ನಮ್ಮ ಮನೆಗೆ ಬಂದು ನನ್ನ ಹಾಗೂ ನನ್ನ ಕುಟುಂಬಕ್ಕೆ ಆಹ್ವಾನ ನೀಡಿದ್ದಾರೆ. ಈಗ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಇಷ್ಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು.
“ನಾನು ಹಿಂದು, ಎಲ್ಲಾ ಸಂಸ್ಕೃತಿಯನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಸಿದ್ಧಾಂತ ಹೊಂದಿದೆ. ಮಹಾತ್ಮಾ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರು ಇದನ್ನೇ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರು ಯುಗಾದಿ ಹಬ್ಬ ಆಚರಣೆ ಮಾಡುವುದನ್ನು ನೋಡಿದ್ದೇನೆ. ಅವರು ನಮಗಿಂತ ಹೆಚ್ಚಾಗಿ ಭಾರತೀಯತೆಯನ್ನು ಅಳವಡಿಸಿಕೊಂಡಿದ್ದಾರೆ. ನಾವು ಅಂತಹ ನಾಯಕತ್ವವನ್ನು ಹೊಂದಿದ್ದೇವೆ. ನಮ್ಮ ಅಧ್ಯಕ್ಷರ ಹೆಸರು ಮಲ್ಲಿಕಾರ್ಜುನ ಖರ್ಗೆ. ಮಲ್ಲಿಕಾರ್ಜುನ ಎಂದರೆ ಶಿವ. ಅವರು ತಮ್ಮ ಹೆಸರು ಬದಲಿಸಿಕೊಂಡಿದ್ದಾರಾ?” ಎಂದು ಹೇಳಿದರು.
ನಾನು ಜನ್ಮತಃ ಹಿಂದು. ಹಿಂದೂವಾಗಿಯೇ ಸಾಯುತ್ತೇನೆ. ನಾನು ಎಲ್ಲಾ ಧರ್ಮಗಳನ್ನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ. ನಾನು ಜೈಲಲ್ಲಿ ಇದ್ದಾಗ ಸಿಖ್ ಧರ್ಮದ ಬಗ್ಗೆ ಕಲಿತೆ. ಜೈನರ ಮಠದ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಲ್ಲಾ ಧರ್ಮದವರು ನನಗೆ ಆಶೀರ್ವಾದ ಮಾಡುತ್ತಾರೆ. ನಾನು ದರ್ಗಾ, ಚರ್ಚ್ ಗೆ ಹೋಗುತ್ತೇನೆ. ಎಲ್ಲಾ ಸಮುದಾಯಗಳು ನನ್ನನ್ನು ಪ್ರೀತಿಸುತ್ತವೆ” ಎಂದು ತಿಳಿಸಿದರು.
ಮಹಾಕುಂಭ ಮೇಳದಲ್ಲಿ ನಿಮ್ಮ ಅನುಭವ ಹೇಗಿತ್ತು ಎಂದು ಕೇಳಿದಾಗ, “ನನ್ನ ಅನುಭವ ಅತ್ಯುತ್ತಮವಾಗಿತ್ತು. ಮಹಾಕುಂಭಮೇಳದ ಆಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಸಾಮಾನ್ಯದ ಕೆಲಸವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನಿಭಾಯಿಸುವುದು ಸುಲಭವಲ್ಲ. ಒಂದೆರಡು ಸಣ್ಣಪುಟ್ಟ ತೊಂದರೆಗಳು ಆಗಿರಬಹುದು. ತಪ್ಪು ಹುಡುಕಲು ಹೋಗುವುದಿಲ್ಲ. ಧರ್ಮದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧವಿರುತ್ತದೆ. ಕೆಲವರು ದೇವರ ಜತೆ ನೇರವಾಗಿ ವ್ಯವಹಾರ ನಡೆಸಿದರೆ ಮತ್ತೆ ಕೆಲವರು ಅರ್ಚಕರ ಮೂಲಕ ವ್ಯವಹಾರ ಮಾಡುತ್ತಾರೆ” ಎಂದು ತಿಳಿಸಿದರು.
“ಕಾಂಗ್ರೆಸ್ ಪಕ್ಷ ಶ್ರೇಷ್ಠವಾದ ಪಕ್ಷ. ಇದಕ್ಕೆ ತನ್ನದೇ ಆದ ಇತಿಹಾಸವಿದೆ. ಕಾಂಗ್ರೆಸ್ ಪಕ್ಷದ ತತ್ವ, ಸಂಸ್ಕೃತಿಯೇ ಬೇರೆ. ಕೆಲವರು ಆತುರದಲ್ಲಿ ನಿರ್ಧಾರ ಕೈಗೊಳ್ಳಬಹುದು. ಪಕ್ಷಕ್ಕೆ ಏನು ಆಗುವುದಿಲ್ಲ. ನೂರು ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ. ಶಶಿ ತರೂರ್ ಅವರು ಕೇಂದ್ರದ ಮಾಜಿ ಸಚಿವರಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ಆಸ್ತಿ. ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ನನ್ನನ್ನು ಇನ್ನು ಸಮರ್ಥವಾಗಿ ಬಳಸಿಕೊಳ್ಳಿ ಎಂಬುದಷ್ಟೇ ಅವರ ಬೇಡಿಕೆ. ಅದರ ಹೊರತಾಗಿ ಬೇರೇನೂ ಇಲ್ಲ” ಎಂದು ತಿಳಿಸಿದರು.
ಎಐಸಿಸಿ ಕಚೇರಿ ನನ್ನ ಪಾಲಿನ ದೇವಾಲಯ
ನಾನು ಪಕ್ಷದ ಅಧ್ಯಕ್ಷ. ಎಐಸಿಸಿ ಕಚೇರಿ ನನಗೆ ದೇವಾಲಯವಿದ್ದಂತೆ, ಯಾರನ್ನೂ ಭೇಟಿ ಮಾಡದಿದ್ದರೂ ಎಐಸಿಸಿ ಕಚೇರಿಗೆ ಭೇಟಿ ನೀಡಿ ಬರುತ್ತೇನೆ. ಅದೇ ಕಚೇರಿ ನನ್ನನ್ನು ಈ ಸ್ಥಾನದಲ್ಲಿ ಕೂರಿಸಿದೆ. ನಾನು ಕಾಂಗ್ರೆಸ್ ಕಚೇರಿಗೆ ಹೋಗದೇ ಬಿಜೆಪಿ ಕಚೇರಿಗೆ ಹೋಗಲು ಸಾಧ್ಯವೇ? ಕೇಶವಕೃಪಾಕ್ಕೆ ಹೋಗಲು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಆ ದೇವಾಲಯಕ್ಕೆ ಹೋಗಿ ಏನು ಪ್ರಾರ್ಥನೆ ಮಾಡಿಕೊಂಡಿರಿ ಎಂದು ಕೇಳಿದಾಗ, “ನಾನು ಯಾವ ಪ್ರಾರ್ಥನೆ ಮಾಡುವ ಅವಶ್ಯಕತೆ ಇಲ್ಲ. ನಾನು ಯಾರ ಸಮಯವನ್ನು ಕೇಳಿರಲಿಲ್ಲ. ನನ್ನ ಪಾಡಿಗೆ ನಾನು ಹೋಗಿ ಅಲ್ಲಿರುವ ಸಿಬ್ಬಂದಿಯನ್ನು ಮಾತನಾಡಿಸಿಕೊಂಡು ಬರುತ್ತೇನೆ” ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ತಮಿಳುನಾಡು ಸರ್ಕಾರ ಹೋರಾಟ ಮಾಡುತ್ತಿದ್ದು ಸರ್ವಪಕ್ಷಗಳ ಸಭೆ ಕರೆದಿದ್ದು, ನೀವು ಅದೇ ರೀತಿ ಆಲೋಚನೆ ಮಾಡುತ್ತೀರ ಎಂದು ಕೇಳಿದಾಗ, “ಇದೊಂದು ಗಂಭೀರ ವಿಚಾರವಾಗಿದ್ದು, ನಮ್ಮ ರಾಷ್ಟ್ರೀಯ ನಾಯಕರು ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆ ಮಾಡುತ್ತಿದ್ದಾರೆ. ಹೀಗಾಗಿ ನಾನು ಇದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇದರ ಕುರಿತು ನಾನು ಇನ್ನಷ್ಟು ಅಧ್ಯಯನ ಮಾಡಬೇಕಿದೆ” ಎಂದು ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಮುಂದೆ ಸಾಗುತ್ತೇವೆ
ನಿಮ್ಮ ನಾಯಕತ್ವದಲ್ಲಿ ಮುಂದಿನ ಚುನಾವಣೆ ಎಂಬ ಹೇಳಿಕೆ ನಂತರ ಚರ್ಚೆ ಹೆಚ್ಚಾಗಿದೆ ಎಂದು ಕೇಳಿದಾಗ, “ಪಕ್ಷ ನನ್ನನ್ನು 90ರ ದಶಕದಿಂದಲೇ ಮಂತ್ರಿ ಮಾಡಿ ಬೆಳೆಸಿದೆ. ಐದು ವರ್ಷ ನನ್ನನ್ನು ಪಕ್ಷ ಅಧ್ಯಕ್ಷನನ್ನಾಗಿ ಮಾಡಿ, ಈಗ ಡಿಸಿಎಂ ಹುದ್ದೆ ನೀಡಿದೆ. ಇಷ್ಟಾದ ಮೇಲೆ ನಾನು ನನ್ನ ಮುಖ ತೋರಿಸಿ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡದಿದ್ದರೆ ನನ್ನ ನಾಯಕತ್ವ ನೀಡದಿದ್ದರೆ ಹೇಗೆ? ನಾನು ಮನೆಯಲ್ಲಿ ಕೂರಲು ಕಾಂಗ್ರೆಸ್ ಪಕ್ಷ ನನಗೆ ಇಷ್ಟು ಶಕ್ತಿ ನಿಡಿದೆಯೇ? ನಾನು ಯಾವುದೇ ಹುದ್ದೆಯಲ್ಲಿದ್ದರೂ ನಾನು ಪಕ್ಷ ಮುನ್ನಡೆಸಬೇಕು. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ದೆಹಲಿ, ಅಸ್ಸಾಂ, ಬಿಹಾರ, ಹಿಮಾಚಲ ಪ್ರದೇಶಕ್ಕೆ ನನ್ನನ್ನು ಕರೆಯುತ್ತಾರೆ. 2013ರಲ್ಲಿ ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೆ ಕಳೆದ ಚುನಾವಣೆಯಲ್ಲಿ ಪಕ್ಷದ ಅದ್ಯಕ್ಷನಾಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ನನಗಿರುವ ಸಾಮರ್ಥ್ಯ, ಅನುಭವ ಬಳಸಿಕೊಳ್ಳಬೇಕು. ಸಿದ್ದರಾಮಯ್ಯ ಅವರು ಕೂಡ ಪಕ್ಷವನ್ನು ಮುನ್ನಡೆಸಲಿದ್ದಾರೆ. ಅವರು ಎರಡು ಅವಧಿಗೆ ವಿರೋಧ ಪಕ್ಷದ ನಾಯಕರಾಗಿ, ಎರಡು ಅವಧಿಗೆ ಸಿಎಂ ಆಗಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ನಾವು ಮುಂದೆ ಸಾಗುತ್ತೇವೆ” ಎಂದು ತಿಳಿಸಿದರು.
ಪಕ್ಷದ ತೀರ್ಮಾನ ಗೌರವಿಸುವೆ
ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆವರೆಗೂ ಸಿಎಂ ಆಗಿ ಮುಂದುವರಿಯುತ್ತಾರಾ ಎಂದು ಕೇಳಿದಾಗ, “ನಮ್ಮ ಪಕ್ಷ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದೆ. ನಾನು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿದ್ದು, ನಾನು ಪಕ್ಷದ ತೀರ್ಮಾನವನ್ನು ಗೌರವಿಸುತ್ತೇವೆ” ಎಂದು ತಿಳಿಸಿದರು.
ಪಕ್ಷದಲ್ಲಿ ಕೆಲವರು ಒಬ್ಬರ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಳಿದಾಗ, “ಅದಕ್ಕೆಲ್ಲಾ ಎಐಸಿಸಿ ನಾಯಕರು ಉತ್ತರ ನೀಡುತ್ತಾರೆ” ಎಂದರು.
ನಿಮಗೆ ಏನಾದರೂ ಸಂದೇಶ ನೀಡಿದ್ದಾರಾ ಎಂದು ಕೇಳಿದಾಗ, “ನಾನು ಯಾರಿಗೂ ಮಾತನಾಡುವುದಿಲ್ಲ. ನನಗೆ ಕೆಲಸ ಮಾಡಬೇಕಿದ್ದು, ಗಾಂಧಿ ನಗರದಲ್ಲಿರುವ ಕಾಂಗ್ರೆಸ್ ಕಟ್ಟಡ ನೆಲಸಮ ಮಾಡಿದ್ದು, ಅಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿದೆ. ಇದರ ಜತೆಗೆ ನೂರು ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ತಯಾರಿ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಜಮೀನು ಇದ್ದರೆ ಮಾತ್ರ ಅಲ್ಲಿ ಪಕ್ಷದ ಕಚೇರಿಗೆ ಶಂಕುಸ್ಥಾಪನೆ ಮಾಡಲಾಗುವುದು. ಬೇರೆಯವರ ಹೆಸರಿನಲ್ಲಿದ್ದರೆ ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಶಿವಾಜಿನಗರ, ಯಶವಂತಪುರ ಸೇರಿದಂತೆ ಮೂರು ಕಡೆ ಶಂಕುಸ್ಥಾಪನೆ ನೆರವೇರಲಿದೆ. ರಾಮನಗರದ ಕಚೇರಿಗೆ ನಾನು ನನ್ನ ಸ್ವಂತ ಹಣದಲ್ಲಿ ಖರೀದಿ ಮಾಡಿ ಪಕ್ಷದ ಹೆಸರಿನಲ್ಲಿ ನೋಂದಣಿ ಮಾಡಲಾಗುವುದು. ಅಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ಹೊರೆ ಎಂಬ ಪರಮೇಶ್ವರ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಶಕ್ತಿ ಯೋಜನೆ ಬಗ್ಗೆ ಮಾತನಾಡಿದಾಗ ಮಾಧ್ಯಮಗಳು ಅದನ್ನು ಬೇರೆ ರೀತಿ ಬಿಂಬಿಸಿದವು. ಪರಮೇಶ್ವರ್ ಅವರು ನೇತೃತ್ವದ ಪ್ರಣಾಳಿಕೆ ಸಮಿತಿ ಸಲಹೆ ಮೇರೆಗೆ ಪಕ್ಷ ಪ್ರಣಾಳಿಕೆ ತಯಾರಿಸಿದೆ. ಅವರು ಏನು ಹೇಳಿದ್ದಾರೆ ಎಂದು ನನಗೆ ಗೊತ್ತಿಲ್ಲ. ಈ ವಿಚಾರವಾಗಿ ಚರ್ಚೆ ಮಾಡಿ ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ನಿಗಮ ಮಂಡಳಿ ನೇಮಕದಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಆದ್ಯತೆ
ನಿಗಮ ಮಂಡಳಿ ನೇಮಕದಲ್ಲಿ ಪಟ್ಟಿ ಬಿಡುಗಡೆಯಾಗಿಲ್ಲ ಎಂದು ಕೇಳಿದಾಗ, “ನಾನು ಪಟ್ಟಿ ತರಿಸಿಕೊಂಡಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೆ ಆದ್ಯತೆ ನೀಡಬೇಕು ಎಂಬ ಉದ್ದೇಶ ನನ್ನದು. ಬ್ಲಾಕ್ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರುಗಳಿಗೆ ಸ್ಥಾನಮಾನ ನೀಡಬೇಕು ಎಂದು ಎಲ್ಲಾ ಶಾಸಕರಿಗೆ ಹೇಳಿದ್ದೇನೆ. ಮುಖ್ಯಮಂತ್ರಿಗಳು ಬಜೆಟ್ ತಯಾರಿಯಲ್ಲಿ ನಿರತರಾಗಿದ್ದು, ನನ್ನ ಹಾಗೂ ಸಣ್ಣ ನೀರಾವರಿ ಇಲಾಖೆ ಜತೆ ಸಭೆ ಮಾತ್ರ ಬಾಕಿ ಇದೆ. ನಮ್ಮ ಅಧಿಕಾರಿಗಳು ದೆಹಲಿಯಲ್ಲಿದ್ದ ಕಾರಣ ಸಭೆ ಮಾಡಲು ಆಗಿರಲಿಲ್ಲ” ಎಂದು ತಿಳಿಸಿದರು.
ಮಾಧ್ಯಮಗಳ ಮುಂದೆ ಕೊಟ್ಟ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ
ವಿಧಾನಸಭೆ ಚುನಾವಣೆ ಟಿಕೆಟ್ ತೆಗೆದುಕೊಂಡಿರುವವರ ಹೊರತಾಗಿ ಬೇರೆವರಿಗೆ ಜಿಲ್ಲಾಧ್ಯಕ್ಷರನ್ನಾಗಿ ಮಾಡಬೇಕು ಎಂಬ ರಾಜಣ್ಣ ಅವರ ಬೇಡಿಕೆ ಬಗ್ಗೆ ಕೇಳಿದಾಗ, “ಅವರು ನನ್ನ ಬಳಿ ಮಾತನಾಡಿಲ್ಲ. ಮಾಧ್ಯಮಗಳ ಮುಂದೆ ಮಾತನಾಡಿರುವ ವಿಚಾರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ಬಳಿ ಚರ್ಚೆ ಮಾಡಿದರೆ ನಾನು ಪ್ರತಿಕ್ರಿಯೆ ನೀಡುತ್ತೇನೆ” ಎಂದರು.
ಕೆಲಸ ಮಾಡುವವರಿಗೆ ಪಕ್ಷದ ಜವಾಬ್ದಾರಿ
ಪದಾಧಿಕಾರಿಗಳ ಪಟ್ಟಿಯಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ನಮ್ಮ ಪಕ್ಷದಲ್ಲಿ ಮೂರು ಹಂತಗಳಿವೆ. ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು. ಕಾರ್ಯದರ್ಶಿಗಳ ಪಟ್ಟಿಯನ್ನು ನೀಡಿದ್ದೆ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಹೀಗಾಗಿ ಅವರನ್ನು ಕರೆದು ಚರ್ಚೆ ಮಾಡಿದ್ದೆ. ಈಗ ಸಚಿವರ ಜತೆ ಚರ್ಚೆ ಮಾಡಿದ್ದು, ಅವರ ಜಿಲ್ಲೆಯಲ್ಲಿ ಪಕ್ಷಕ್ಕೆ ಸಮಯ ಕೊಟ್ಟು ದುಡಿಯುವವರಿದ್ದರೆ ಹೆಸರು ನೀಡಿ ಎಂದು ಹೇಳಿದ್ದೇನೆ. ನನ್ನ ಹಿಂದೆ ತಿರುಗುವವರಿಗೆ ಹುದ್ದೆ ನೀಡುವುದಲ್ಲ. ನಾವು ನೇಮಕ ಮಾಡಿದರೆ ಮುಂದಿನ ಮೂರು ವರ್ಷ ಕೆಲಸ ಮಾಡಬೇಕು. ಅಂತಹವರ ಹೆಸರು ನೀಡಿ ಎಂದು ಕೇಳಿದ್ದೇನೆ” ಎಂದರು.
ವಿಧಾನ ಪರಿಷತ್ ನಾಮನಿರ್ದೇಶನದ ವಿಚಾರವಾಗಿ ಕೇಳಿದಾಗ, “ಈ ವಿಚಾರವಾಗಿ ನಾನು ಹಾಗೂ ಸಿಎಂ ದೆಹಲಿಗೆ ಹೋಗಬೇಕು. ಬಜೆಟ್ ತಯಾರಿ ಮುಗಿದ ಬಳಿಕ ಈ ವಿಚಾರದ ಬಗ್ಗೆ ಗಮನಹರಿಸುತ್ತೇವೆ. ಮುಖ್ಯಮಂತ್ರಿಗಳು ಚೇತರಿಸಿಕೊಂಡಿದ್ದು, ಇನ್ನು ನಡೆದಾಡಲು ಸಾಧ್ಯವಾಗಿಲ್ಲ” ಎಂದು ತಿಳಿಸಿದರು.
ಖರ್ಗೆ ಅವರ ಎಚ್ಚರಿಕೆ ಹೊರತಾಗಿಯೂ ಜಮೀರ್ ಅಹ್ಮದ್ ಖಾನ್ ಅವರು ಹೇಳಿಕೆ ನೀಡಿರುವ ಬಗ್ಗೆ ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ನಿಮ್ಮ ಮಾತಿನ ಮೇಲೆ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
ನೀವು ಬಹಳ ನಾಜೂಕಾಗಿ ಉತ್ತರ ನೀಡುತ್ತಿದ್ದೀರಿ ಎಂದು ಕೇಳಿದಾಗ, “ನೀವು (ಮಾಧ್ಯಮದವರು) ನನ್ನನ್ನು ಆ ರೀತಿ ಮಾಡಿದ್ದೀರಿ” ಎಂದು ಚಟಾಕಿ ಹಾರಿಸಿದರು.