Wednesday, February 26, 2025
Menu

ಶಿವರಾತ್ರಿ ಪುಣ್ಯಸ್ನಾನದೊಂದಿಗೆ ಮಹಾಕುಂಭ ಮೇಳ ಇಂದು ಸಂಪನ್ನ!

kumba mela

ಲಕ್ನೋ:ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ಬುಧವಾರ ಮಹಾಶಿವರಾತ್ರಿ ದಿನದಂದೇ ಸಂಪನ್ನಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಅಮೃತಸ್ನಾನ ಮಾಡಲು ಭಕ್ತರು ಕೋಟ್ಯಂತರ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.

ಮಹಾಕುಂಭ ಮೇಳ ಇಂದು ಕೊನೆಗೊಳ್ಳುವುದರಿಂದ ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ ವಿಶೇಷ ಮಾರ್ಗಸೂಚಿಗಳನ್ನು ಕೂಡ ಜಾರಿ ಮಾಡಲಾಗಿದೆ.ಇಲ್ಲಿಯವರೆಗೆ 63 ಕೋಟಿ ಮಂದಿ ಮಹಾಕುಂಭ ಮೇಳದಲ್ಲಿ ಪಾಲ್ಗೊಂಡು ಹೊಸ ಇತಿಹಾಸ ಬರೆದಿದ್ದಾರೆ.

ಫೆಬ್ರವರಿ 26ರಂದು ಮಹಾಶಿವರಾತ್ರಿ ಅಂತಿಮ ಪುಣ್ಯಸ್ನಾನದ ಸಿದ್ಧತೆಗಾಗಿ ಮಂಗಳವಾರ ಸಂಜೆ 4 ಗಂಟೆಯಿಂದಲೇ ಮಹಾ ಕುಂಭಮೇಳದ ಆವರಣದಲ್ಲಿ ಯಾವುದೇ ರೀತಿಯ ವಾಹನ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಭಕ್ತಾದಿಗಳ ಹೆಚ್ಚಿನ ಒಳಹರಿವಿಗೆ ಅವಕಾಶ ಕಲ್ಪಿಸಲು ಸಂಜೆ 6 ಗಂಟೆಯಿಂದ ಪ್ರಯಾಗರಾಜ್ ನಗರದಾದ್ಯಂತ ಇದೇ ರೀತಿಯ ಸಂಚಾರ ನಿರ್ಬಂಧ ಇರಲಿದೆ.

ಈ ಬೃಹತ್‌ ಆಧ್ಯಾತ್ಮಿಕ ಕೂಟದ ಸಮಯದಲ್ಲಿ ಜನಸಂದಣಿಯನ್ನು ಸುಗಮವಾಗಿ ನಿರ್ವಹಿಸಲು ಮತ್ತು ದಟ್ಟಣೆಯನ್ನು ತಪ್ಪಿಸಲು ಅಧಿಕಾರಿಗಳು ಈ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ನಿರ್ಬಂಧಿತ ಅವಧಿಯಲ್ಲಿ ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ಮಾತ್ರವೇ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.

ಮೇಳದಲ್ಲಿ ಏನೆಲ್ಲ ವ್ಯವಸ್ಥೆ?

ಅತಿ ಜನದಟ್ಟಣೆ ಉದ್ದೇಶದಿಂದ ಈ ಸಂಚಾರ ನಿರ್ಬಂಧಗಳು ಜಾರಿಯಲ್ಲಿರುತ್ತವೆ. ಆದರೆ ಅಗತ್ಯ ಸೇವೆಗಳ ಪೂರೈಕೆಗೆ ಯಾವುದೇ ಅಡ್ಡಿ ಇರುವುದಿಲ್ಲ. ಹಾಲು, ತರಕಾರಿಗಳು, ಔಷಧಗಳು, ಇಂಧನ ಮತ್ತು ತುರ್ತು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶವಿರಲಿದೆ. ವೈದ್ಯರು, ಪೊಲೀಸ್ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಗೂ ಪ್ರವೇಶ ಇರಲಿದೆ.

ಭಕ್ತರಿಗೆ ವಿಶೇಷ ಸೂಚನೆ:

ಭಕ್ತಾದಿಗಳು ತಮ್ಮ ನಿಯೋಜಿತ ಘಾಟ್‌ಗಳಲ್ಲಿ ಮಾತ್ರವೇ ಸ್ನಾನ ಮಾಡಲು ಮತ್ತು ಪ್ರಾರ್ಥನೆಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಆಯಾ ಸೂಚಿತ ಶಿವನ ದೇವಾಲಯಗಳಿಗೆ ತೆರಳುವುದರಿಂದ ಈ ಭಾಗದಲ್ಲಿ ಜನಸಂದಣಿ ಕೂಡ ಕಡಿಮೆಯಾಗಲಿದೆ.

ದಕ್ಷಿಣಿ ಜುನ್ಸಿ ಮಾರ್ಗದಿಂದ ಆರೈಲ್ ಘಾಟ್, ಉತ್ತರಿ ಜುನ್ಸಿ ಮಾರ್ಗದಿಂದ ಹರಿಶ್ಚಂದ್ರ ಘಾಟ್ ಮತ್ತು ಹಳೆ ಜಿಟಿ ಘಾಟ್, ಪಾಂಡೆ ಕ್ಷೇತ್ರದ ಮಾರ್ಗವಾಗಿ ಭಾರದ್ವಾಜ್ ಘಾಟ್, ನಾಗವಾಸುಕಿ ಘಾಟ್, ಮೋರಿ ಘಾಟ್, ಕಾಳಿ ಘಾಟ್, ರಾಮ್ ಘಾಟ್ ಮತ್ತು ಹನುಮಾನ್ ಘಾಟ್, ಆರೈಲ್ ವಲಯದಿಂದ ಆರೈಲ್ ಘಾಟ್ ಕಡೆಗೆ ಭಕ್ತರು ಆಗಮಿಸಲು ವ್ಯವಸ್ಥೆ ಮಾಡಲಾಗಿದೆ.

ಜನವರಿ 13ರಂದು ಶುರುವಾದ ಮಹಾ ಕುಂಭಮೇಳವು ಫೆಬ್ರವರಿ 26ರ ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತಿದೆ. ಕುಂಭಮೇಳ ಪ್ರತಿ 12 ವರ್ಷಗಳಿಗೊಮ್ಮೆ ನಡೆದರೆ, ಈಗ ನಡೆಯುತ್ತಿರುವುದು 144 ವರ್ಷಗಳಿಗೊಮ್ಮೆ ಸಂಭವಿಸುವ ಮಹಾಕುಂಭ ಮೇಳ. ಈಗಾಗಲೇ 63 ಕೋಟಿಗೂ ಹೆಚ್ಚು ಭಕ್ತರು ಮತ್ತು ಪ್ರವಾಸಿಗರು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ಇಲ್ಲಿನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ನೇತೃತ್ವದಲ್ಲಿ ಈ ಮಹಾಕುಂಭ ಮೇಳ ನಡೆಯುತ್ತಿದೆ. ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಮಹಾ ಕುಂಭಮೇಳದ ಮಹಾಶಿವರಾತ್ರಿಯ ಅಂತಿಮ ಅಮೃತ ಸ್ನಾನದಲ್ಲಿ ಬುಧವಾರ 1 ಕೋಟಿಗೂ ಹೆಚ್ಚು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Related Posts

Leave a Reply

Your email address will not be published. Required fields are marked *