ಕೊಪ್ಪಳ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ಯಾರನ್ನು ಕೇಳಿ ಬಸ್ ಟಿಕೆಟ್ ದರ ಹೆಚ್ಚಿಸಿದ್ದೀರಿ ಎಂದು ನಿರ್ವಾಹಕನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಗಂಗಾವತಿ ಡಿಪೋಕ್ಕೆ ಸೇರಿರುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ಹನುಮಪ್ಪ ಎಂಬವರ ಮೇಲೆ ಹಲ್ಲೆ ನಡೆದಿದೆ. ವಿಜಯನಗರ ಜಿಲ್ಲೆಯ ನಿವಾಸಿ ಶ್ರೀಧರ್ ಹಲ್ಲೆ ಮಾಡಿದ ವ್ಯಕ್ತಿ. ಕೊಪ್ಪಳ ತಾಲೂಕಿನ ಹುಲಗಿ ಗ್ರಾಮದಿಂದ ಗಂಗಾವತಿಗೆ ಹೋಗುತ್ತಿದ್ದ ಬಸ್‌ಗೆ ಶ್ರೀಧರ್ ಕುಡಿದ ಮತ್ತಿನಲ್ಲಿ ಹತ್ತಿ ಗಂಗಾವತಿ ತಾಲೂಕಿನ ಹನುಮನಹಳ್ಳಿಗೆ ಹೋಗಬೇಕು ಅಂತ ಹೇಳಿದ್ದ, ನಿರ್ವಾಹಕ ಹನುಮಪ್ಪ 30 ರೂಪಾಯಿ ಟಿಕೆಟ್ ನೀಡಿದ್ದಾರೆ.
ಮೊದಲು ಹುಲಗಿಯಿಂದ ಗಂಗಾವತಿಗೆ 26 ರೂಪಾಯಿ ಇತ್ತು, 30 ರೂಪಾಯಿ ಟಿಕೆಟ್ ಯಾಕೆ ಅಂತ ಕೇಳಿದ್ದಾನೆ. ಬಸ್ ದರ ಹೆಚ್ಚಳವಾಗಿದೆ ಅಂತ ನಿರ್ವಾಹಕ ಹೇಳಿದ್ದಾರೆ. ಯಾರನ್ನು ಕೇಳಿ ಟಿಕೆಟ್ ದರ ಹೆಚ್ಚಳ ಮಾಡಿದ್ದೀರಿ ಎಂದು ನಿರ್ವಾಹಕರ ಜೊತೆ ಶ್ರೀಧರ್ ಜಗಳ ಆರಂಭಿಸಿದ್ದಾನೆ. ವಿರುಪಾಪುರ ಗಡ್ಡಿ ಬಳಿ ಬಸ್ ನಿಲ್ಲಿಸಿದಾಗ ಶ್ರೀಧರ್ ನಿರ್ವಾಹಕ ಹನುಮಂತರನ್ನು ಎಳೆದುಕೊಂಡು ಕೆಳಗೆ ಇಳಿದ್ದಾನೆ. ಬಳಿಕ ಕೈಗೆ ಸಿಕ್ಕ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ.
ಘಟನೆಯಲ್ಲಿ ಹನಮಪ್ಪನ ಬಲಗಣ್ಣು ಮತ್ತು ಹಣೆಗೆ ಪೆಟ್ಟು ಬಿದ್ದು, ರಕ್ತಸ್ರಾವವಾಗಿದ್ದರಿಂದ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾ ಗಿದೆ . ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಹನುಮಪ್ಪ ಆರೋಪಿ ಶ್ರೀಧರ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶ್ರೀಧರ್ನನ್ನು ವಶಕ್ಕೆ ಪಡೆದಿದ್ದಾರೆ. ಕುಡಿದ ಮತ್ತಿನಲ್ಲಿ ಪ್ರಯಾಣಿಕ ಹನುಮಪ್ಪನ ಮೇಲೆ ಹಲ್ಲೆ ಮಾಡಿರುವುದನ್ನು ಸಾರಿಗೆ ಸಂಸ್ಥೆ ಸಿಬ್ಬಂದಿ ಖಂಡಿಸಿದ್ದಾರೆ.