ಕಾಂಗ್ರೆಸ್‌ನ ಗ್ಯಾರಂಟಿ ಹಣ ಫಲಾನುಭವಿಗಳ ಕೈಗೆ ಸಿಗದೆ ನಾಲ್ಕೈದು ತಿಂಗಳಾಯ್ತು , ಹಣನೇ ಬಂದಿಲ್ಲ . ಯಾವುದಾದರು ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆ ಆಗುತ್ತೆ, ಕಾರಣ ಬೇಡ, ತಕ್ಷಣ ಹಣ ವರ್ಗಾಯಿಸಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಸಚಿವರು ಆಗಿರುವ ಶ್ರೀ ಸಿದ್ದರಾಮಯ್ಯ ನವರು ಬಜೆಟ್ ರೂಪಿಸುವಲ್ಲಿ ನಿರತರಾಗಿದ್ದಾರೆ. ವಿಪರ್ಯಾಸವೆಂದರೆ, ಗ್ಯಾರಂಟಿ ಯೋಜನೆಗಳ ಫಲಾನುಭವಿಗಳು ಹಣಕ್ಕಾಗಿ 3-4 ತಿಂಗಳು ಕಾಯಬೇಕಾಗಿದೆ. ಯಾವುದಾದರೂ ಚುನಾವಣೆಗಳು ಸಮೀಪಿಸಿದಾಗ ಮಾತ್ರ ಮ್ಯಾಜಿಕ್ ಆಗಿ ಹಣ ಜಮೆ ಆಗುತ್ತೆ ಎಂದು ನಿಖಿಲ್ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷವು ಗೃಹಲಕ್ಷ್ಮಿ ಮತ್ತು ಯುವ ನಿಧಿ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳ ಭರವಸೆಯೊಂದಿಗೆ ಅಧಿಕಾರಕ್ಕೆ ಏರಿತ್ತು, ಪ್ರತೀ ತಿಂಗಳು ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಬಣ್ಣದ ಮಾತುಗಳನ್ನ ಹೇಳಿತ್ತು. ಪ್ರತಿ ಬಾರಿಯೂ ತಾಂತ್ರಿಕ ಸಮಸ್ಯೆಯ ನೆಪ ಒಡ್ಡುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ. ಬೆಂಗಳೂರು ಭಾರತದ ಸಿಲಿಕಾನ್ ಕ್ಯಾಪಿಟಲ್, ಜಾಗತಿಕ ತಂತ್ರಜ್ಞಾನ ಕೇಂದ್ರದಲ್ಲಿ ಡಿಬಿಟಿ ವರ್ಗಾವಣೆ ಸರಿಪಡಿಸಲಾಗುವುದಿಲ್ಲವೇ ಎಂದು ಪ್ರಶ್ನಿಸಿದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಗ್ಯಾರಂಟಿ ಕ್ಯಾಲೆಂಡರ್ ಬಿಡುಗಡೆ ಮಾಡಿ, ಹಣ ಜಮಾ ಮಾಡುವ ದಿನಾಂಕವನ್ನು ನಿಗದಿ ಮಾಡಿ, ಸಮಯಕ್ಕೆ ಸರಿಯಾಗಿ ಡಿಬಿಟಿ ವರ್ಗಾವಣೆ ಖಚಿತಪಡಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದರು.