ಆಮ್ ಆದ್ಮಿ ಪಕ್ಷದ ಮದ್ಯ ನೀತಿಯಿಂದ ರಾಜ್ಯ ಸರ್ಕಾರಕ್ಕೆ 2002 ಕೋಟಿ ರೂ. ನಷ್ಟವುಂಟಾಗಿದೆ ಎಂದು ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಕರ ವರದಿಯನ್ನು ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಯಿತು.
ಮಂಗಳವಾರ ಆರಂಭಗೊಂಡ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಎಜಿ ವರದಿಯನ್ನು ಮಂಡಿಸಿದರು. ವರದಿಯನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕಿ ಅತಿಶಿ ಸೇರಿದಂತೆ ಆಪ್ ನ 15 ಶಾಸಕರನ್ನು ಅಮಾನತು ಮಾಡಲಾಯಿತು.
ಹೊಸ ಮದ್ಯ ನೀತಿಯಿಂದ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸುತ್ತಾ ಬಂದಿದ್ದು, ಪಕ್ಷದ ವರಿಷ್ಠ ಹಾಗೂ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಡಿಸಿಎಂ ಮನೀಶ್ ಸಿಸೊಡಿಯಾ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ಮಾಜಿ ಸಿಎಂ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿತ್ತು.
2017-18ರಿಂದ 2020-21ರ ಅವಧಿ ವರೆಗಿನ ಮದ್ಯ ನೀತಿ ಕುರಿತು ಸಿಎಜಿ ವರದಿ ನೀಡಿತ್ತು. ಹಳೆಯ ಲೈಸೆನ್ಸ್ ರದ್ದು ಮಾಡಿದ್ದರಿಂದ ಸರ್ಕಾರಕ್ಕೆ 890 ಕೋಟಿ ರೂ. ಹಾಗೂ ಸೂಕ್ತ ಸಮಯದಲ್ಲಿ ಕ್ರಮ ಕೈಗೊಳ್ಳದ ಕಾರಣ 940 ಕೋಟಿ ರೂ. ನಷ್ಟವುಂಟಾಗಿದೆ ಎಂದು ವರದಿ ಹೇಳಿದೆ.