ಭಾರತ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಪಾಕಿಸ್ತಾನ ವಿರುದ್ಧ ಭಾನುವಾರ ನಡೆದ ಹೈವೋಲ್ಟೇಜ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಕಟ್ಟಿದ ವಾಚ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಬೆಲೆ ಕುರಿತು ಚರ್ಚೆಗಳು ನಡೆದಿವೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಪ್ರಮುಖ ಆಕರ್ಷಣೆ ಆಗಿದ್ದೂ ಅಲ್ಲದೇ ಭಾರೀ ಚರ್ಚೆಗೆ ಕಾರಣವಾಗಿದ್ದರೆ, ಹಾರ್ದಿಕ್ ಪಾಂಡ್ಯ ಆಟಕ್ಕಿಂತ ಅವರು ಕಟ್ಟಿದ ವಾಚ್ ನಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.
ಹಾರ್ದಿಕ್ ಪಾಂಡ್ಯ 8 ಓವರ್ ಎಸೆದಿದ್ದು, 31 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಆದರೆ ಅವರು ಕಟ್ಟಿದ ವಾಚ್ ಚರ್ಚೆಗೆ ಕಾರಣವಾಗಿದ್ದು, ಇಷ್ಟೊಂದು ದುಬಾರಿ ವಾಚ್ ಪಂದ್ಯದ ವೇಳೆ ಕಟ್ಟಿಕೊಳ್ಳಬೇಕಿತ್ತಾ ಎಂಬ ಪ್ರಶ್ನೆಗಳು ಕೇಳಿ ಬಂದಿವೆ.
ಹೌದು, ಪಾಂಡ್ಯ ಕಟ್ಟಿದ್ದ ವಾಚ್ ಅಲ್ಟ್ರಾ ಐಷಾರಾಮಿ ರಿಚರ್ಡ್ ಮಿಲೆ ಆರ್ ಎಂ-27-02 ವಾಚ್ ಆಗಿದೆ. ಇದರ ಬೆಲೆ 8 ಲಕ್ಷ ಅಮೆರಿಕನ್ ಡಾಲರ್ ಆಗಿದ್ದು, ಭಾರತೀಯ ರೂಪಾಯಿ ಪ್ರಕಾರ 6.92 ಕೋಟಿ ಅಂದರೆ ಸುಮಾರು 7 ಕೋಟಿ ರೂ. ಮೌಲ್ಯದ್ದಾಗಿದೆ.
ಈ ವಾಚ್ ಅತ್ಯಂತ ಅಪರೂಪವಾಗಿದ್ದು, ಜಗತ್ತಿನಾದ್ಯಂತ ಕೇವಲ 50 ವಾಚ್ ಗಳು ಮಾತ್ರ ಇವೆ. ಇದರಲ್ಲಿ ಟೆನಿಸ್ ದಂತಕತೆ ರಾಫಲ್ ನಡಾಲ್ ಅಂತಹ ಕೆಲವೇ ಮಂದಿಯ ಬಳಿ ಇದೆ.
ಹಾರ್ದಿಕ್ ಪಾಂಡ್ಯ ನಿರೀಕ್ಷಿತ ಪ್ರದರ್ಶನ ನೀಡದೇ ಇದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ ಸಾಧನೆ ಮಾಡಿದರು. ಭಾರತದ 215 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಹಾರ್ದಿಕ್ ಪಾಂಡ್ಯ 200 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 24ನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಹಾರ್ದಿಕ್ 11 ಟೆಸ್ಟ್ ಗಳಲ್ಲಿ 17 ವಿಕೆಟ್ ಗಳಿಸಿದ್ದರೆ, 91 ಏಕದಿನ ಪಂದ್ಯಗಳಲ್ಲಿ 89 ವಿಕೆಟ್ ಪಡೆದಿದ್ದಾರೆ. 114 ಟಿ-20 ಯಲ್ಲಿ 94 ವಿಕೆಟ್ ಕಬಳಿಸಿದ್ದಾರೆ.