ಕೇಣಿ ಗ್ರೀನ್ ಫೀಲ್ಡ್ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯರ ವಿರೋಧ ತೀವ್ರಗೊಂಡಿದ್ದು, ಕೇಣಿ ಗ್ರಾಮದಲ್ಲಿ ಪೊಲೀಸ್ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ.
ನಾಗರಿಕರ ವಿರೋಧದ ನಡುವೆಯೂ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿ ಪ್ರದೇಶದ ಭೌಗೋಳಿಕ ತಾಂತ್ರಿಕ ಅಧ್ಯಯನ ಕಾಮಗಾರಿಗಾಗಿ ಗುತ್ತಿಗೆ ಕಂಪನಿ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ಸರ್ವೆ ನಡೆಸದಂತೆ ಗ್ರಾಮಸ್ಥರು ಸಮುದ್ರ ದಂಡೆ ಮೇಲೆ ಪ್ರತಿಭಟನೆ ಕೈಗೊಳ್ಳಲು ನಿರ್ಧರಿಸಿದ್ದರು. ಅದನ್ನು ತಡೆಯುವು ದಕ್ಕಾಗಿ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳು ಮತ್ತು ಪುರಸಭೆ ಅಂಕೋಲಾ ವ್ಯಾಪ್ತಿಗೊಳಪಟ್ಟ ಕೇಣಿ ಗ್ರಾಮದಲ್ಲಿ ಫೆ.24ರ ಬೆಳಗ್ಗೆ 6 ಗಂಟೆಯಿಂದ ಫೆ. 25 ರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯ ಆದೇಶಿಸಿದ್ದಾರೆ.
ಸರ್ವೆ ನಡೆಸುವ ಸಂದರ್ಭದಲ್ಲಿ ಭದ್ರತೆಗಾಗಿ 500ಕ್ಕೂ ಅಧಿಕ ಪೊಲೀಸರನ್ನು ಕೇಣಿ ಗ್ರಾಮಕ್ಕೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಲಪ್ರಯೋಗಕ್ಕೆ ಹೆದರುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಹೊನ್ನಾವರದಲ್ಲಿಯೂ ಖಾಸಗಿ ಬಂದರು ವಿರೋಧಿಸಿ ಸ್ಥಳೀಯರ ಸಭೆ ನಡೆದಿದೆ. ಅಂಕೋಲಾದಲ್ಲಿ ಭದ್ರತೆಗೆ ನಿಯೋಜಿಸಿರುವ ಪೊಲೀಸರಿಗೆ ಅಗತ್ಯ ಇದ್ದರೆ ಹೊನ್ನಾವರಕ್ಕೆ ಕರ್ತವ್ಯಕ್ಕೆ ಹೋಗುವುದಕ್ಕೂ ಸಿದ್ಧರಾಗುವಂತೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತ ಮೀನುಗಾರರು ಮತ್ತು ಉದ್ದೇಶಿತ ಬಂದರು ಯೋಜನಾ ಪ್ರದೇಶದ ಸ್ಥಳೀಯರ ವಿರುದ್ಧ ಬಲಪ್ರಯೋಗಕ್ಕೆ ಕೈ ಹಾಕಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಈ ಹಿಂದೆ ಹೊನ್ನಾವರದಲ್ಲಿ ಖಾಸಗಿ ಬಂದರು ನಿರ್ಮಾಣಕ್ಕಾಗಿ ಚುನಾವಣೆ ನೀತಿ ಸಂಹಿತೆ ಇರುವಾಗ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿ ಕಾಮಗಾರಿ ನಡೆಸಲು ಅವಕಾಶ ಕೊಟ್ಟಿತ್ತು. ವಿರೋಧಿಸಿದ್ದಕ್ಕೆ ಮಹಿಳೆಯರು ಸೇರಿ 60 ಕ್ಕೂ ಹೆಚ್ಚು ಜನರ ವಿರುದ್ಧ ರೌಡಿಶೀಟ್ ತೆರೆಯಲಾಗಿದೆ ಎಂದು ಹೋರಾಟಗಾರರು ಆರೋಪಿಸಿ ದ್ದಾರೆ.