ಐಎಂಎ (ಐ-ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವ ಎಲ್ಲ ಸಂತ್ರಸ್ತರಿಗೂ ರಂಜಾನ್ ಹಬ್ಬಕ್ಕೂ ಮೊದಲು ನಿಗದಿತ ಪರಿಹಾರ ಹಣ ನೀಡಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಈ ಸಂಬಂಧ ವಿಕಾಸಸೌಧ ಕಚೇರಿಯಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ. ಸಭೆಯಲ್ಲಿ ಸಚಿವರಾದ ಜಮೀರ್ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಅವರ ಜೊತೆಗೆ ಐಎಂಎ ಹಗರಣದಿಂದ ಹಣ ಕಳೆದುಕೊಂಡ ಹಲವರು ಭಾಗಿಯಾಗಿದ್ದರು. ಈ ವೇಳೆ ಸಂತ್ರಸ್ತರಿಗೆ ಭರವಸೆ ನೀಡಿದ ಸಚಿವರು, ರಂಜಾನ್ ಹಬ್ಬಕ್ಕೂ ಹತ್ತು ದಿನ ಮೊದಲೇ ಐಎಂಎನಲ್ಲಿ ಹಣ ಹೂಡಿ ಮೋಸ ಹೋದವರಿಗೆ ಅವರ ಹೂಡಿಕೆಯ ಅನುಪಾತದ ಆಧಾರದಲ್ಲಿ ಪರಿಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಒಂದು ಲಕ್ಷಕ್ಕೂ ಅಧಿಕ ಠೇವಣಿದಾರರು 3213.58 ಕೋಟಿ ರೂ.ಗಳನ್ನು ಐಎಂಎ ಕಂಪೆನಿಯಲ್ಲಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ. ಕಂಪೆನಿಯ ಒಟ್ಟು ಠೇವಣಿದಾರರ ಸಂಖ್ಯೆ 69069. 1400 ಕೋಟಿ ರೂ.ಗಳನ್ನು ಲಾಭಾಂಶದ ಮಾದರಿಯಲ್ಲಿ ಐಎಂಎ ಠೇವಣಿದಾರರಿಗೆ ನೀಡುತ್ತಾ ಬಂದಿದೆ. ಹಗರಣ ಬೆಳಕಿಗೆ ಬಂದ ನಂತರ ವಿಶೇಷ ನ್ಯಾಯಾಲಯದ ಆದೇಶದಂತೆ ಕಂಪೆನಿ ಖಾತೆಯಲ್ಲಿದ್ದ 87.43 ಕೋಟಿ ರೂ.ಗಳನ್ನು 60902 ಜನ ಸಂತ್ರಸ್ತರ ಖಾತೆಗಳಿಗೆ ಈವರೆಗೆ ಜಮೆ ಮಾಡಲಾಗಿದೆ ಎಂದು ಸಭೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಯಿತು.
ಐಎಂಎ ಕಂಪೆನಿಗೆ ಸಂಬಂಧಿಸಿದ ಹತ್ತಕ್ಕೂ ಹೆಚ್ಚು ಆಸ್ತಿಗಳನ್ನು ಸರ್ಕಾರ ವಶಕ್ಕೆ ಪಡೆದಿದೆ. ಚರಾಸ್ಥಿಗಳ ಮೌಲ್ಯ 106.92 ಕೋಟಿ ಹಾಗೂ ಸ್ಥಿರಾಸ್ತಿಗಳ ಮೌಲ್ಯ 401.92 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಕಂಪೆನಿಗೆ ಸಂಬಂಧಿಸಿದ ವಿವಿಧ ಬ್ಯಾಂಕ್ ಖಾತೆಗಳಿಂದ 2.88 ಕೋಟಿ ರೂ. ನಗದು , ಹೂಡಿಕೆ ಪತ್ರ 11.06 ಕೋಟಿ ರೂ. ಸೇರಿದಂತೆ 534.5 ಕೋಟಿ ರೂ.ಗಳನ್ನು ಸರ್ಕಾರ ಮುಟ್ಟುಗೋಲು ಹಾಕಿದೆ.
ನ್ಯಾಯಮೂರ್ತಿ ಜಸ್ಟೀಸ್ ನಾಗಪ್ರಸನ್ನ ಪೀಠದ ಆದೇಶದಂತೆ ಶೀಘ್ರವೇ ಈ ಆಸ್ತಿಗಳನ್ನು ಹರಾಜು ಮಾಡಿ ಬಂದ ಹಣವನ್ನು ಹೂಡಿಕೆದಾರರಿಗೆ ಹಿಂತಿರುಗಿಸಲಾ ಗುವುದು ಎಂದು ತಿಳಿಸಿದ್ದಾರೆ. ಐಎಂಎ ಹಗರಣ ಬೆಳಕಿಗೆ ಬಂದಾಗಲೇ ಸರ್ಕಾರ ಸಂತ್ರಸ್ತರನ್ನು ಗುರುತಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶ ನೀಡಿತ್ತು. ಐಎಂಎ ಜೊತೆ ಆರ್ಥಿಕ ವ್ಯವಹಾರ ಮಾಡಿದ ಬ್ಯಾಂಕ್ ಖಾತೆ ಚಾಲ್ತಿಯಲ್ಲಿದ್ದರೆ ಅದನ್ನೇ ಅಧಿಕೃತ ಎಂದು ಪರಿಗಣಿಸಲಾಯಿತು. ಖಾತೆ ನಿಷ್ಕ್ರಿಯವಾಗಿ ದ್ದರೆ ಠೇವಣಿಪತ್ರ, ಷೇರುಪ್ರಮಾಣ ಪತ್ರದಂತಹ ದಾಖಲಾತಿಗಳನ್ನು ಕೋರಿತ್ತು.
ಅರ್ಜಿ ಸಲ್ಲಿಸುವವರ ಮಾಹಿತಿಗಳನ್ನು ಐಎಂಎ ಸಂಸ್ಥೆಯಲ್ಲಿರುವ ದತ್ತಾಂಶಗಳೊಂದಿಗೆ ಹೊಂದಾಣಿಕೆ ಮಾಡಿ ಹಾಗೂ ಆಧಾರ್ ಕಾರ್ಡ್, ಇತರ ಮಾಹಿತಿಗಳನ್ನು ಸಮೀಕರಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸಲಾಗಿದೆ. ಫಲಾನುಭವಿಗಳು ಮೃತಪಟ್ಟಿದ್ದರೆ ಸೂಚಿಸಿರುವ ನಾಮನಿರ್ದೇಶಿತ ವ್ಯಕ್ತಿಗಳಿಗೆ ಆ ಹಣವನ್ನು ನೀಡಲು ಕ್ರಮ ವಹಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.