ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕರಕಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಲಿತ ಮಕ್ಕಳು ಬಿಸಿಯೂಟ ಮಾಡಿದ್ದ ತಟ್ಟೆಗಳನ್ನು ತೊಳೆಯಲು ನಿರಾಕರಿಸಿದ್ದ ಅಡುಗೆ ಸಹಾಯಕಿಯನ್ನು ಜಿಲ್ಲಾಡಳಿತ ಮನೆಗೆ ಕಳಿಸಿ ಪರ್ಯಾಯ ವ್ಯವಸ್ಥೆ ಮಾಡಿದೆ.
ಅಡುಗೆ ಸಹಾಯಕಿಯ ಈ ಕಾರ್ಯವೈಖರಿಯಿಂದ ಮಧ್ಯಾಹ್ನದ ಬಿಸಿಯೂಟ ಸ್ಥಗಿತರೊಂಡು, ಮಕ್ಕಳು ಉಪ್ಪಿಟ್ಟು ರಾಗೀಗಂಜಿ ಕುಡಿದು ಮನೆಗೆ ಮರಳುತ್ತಿರು ವುದು ಮಾಧ್ಯಮದಲ್ಲಿ ವರದಿಯಾಗಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ, ಕೂಡಳೇ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಸಮಸ್ಯೆ ಬಗೆಹರಿಸಿದೆ.
ಡಿಸಿ ಡಾ. ಸುಶೀಲಾ ಘಟನೆಯ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ. ಸುರಪುರ ಡಿವೈಎಸ್ಪಿ ಜಾವೀದ್ ಇನಾಂದಾರ್, ಸರ್ಕಲ್ ಇನ್ಸಪೆಕ್ಟರ್ ಶರಣಗೌಡ ನ್ಯಾಮಣ್ಣೋರ್, ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ಸೇರಿ ಇಲಾಖೆಗಳ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ತೊಂದರೆಗಳನ್ನು ಆಲಿಸಿದರು.
ದಲಿತ ಮಕ್ಕಳ ಬಿಸಿಯೂಟ ತಟ್ಟೆ ತೊಳೆಯಲು ನಿರಾಕರಿಸಿದ ಅಡುಗೆ ಸಹಾಯಕಿಯನ್ನು ಬದಲಾಯಿಸಿ ತಾತ್ಕಾಲಿಕವಾಗಿ ಅಲ್ಲಿ ಅಡುಗೆ ಮಾಡುವ ಸಿಬ್ಬಂದಿ ಗಳನ್ನೇ ನೇಮಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಹೀಗಾಗಿ ಯಾವುದೇ ತೊಂದರೆಯಿಲ್ಲದಂತೆ ಎಲ್ಲ ಮಕ್ಕಳೂ ಬಿಸಿಯೂಟ ಮಾಡಿದ್ದಾರೆ ಎಂದು ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಲ್ಲನಗೌಡ ಬಿರಾದರ್ ಹೇಳಿದ್ದಾರೆ.