ಕೊಪ್ಪಳ: ಸರಕಾರದಲ್ಲಿ ಅತ್ಯಂತ ಪ್ರಭಾವಿಗಳಾದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ನೀವ ಏನ್ ಮಾಡ್ತಿರೊ ಗೊತ್ತಿಲ್ಲ, ಆದೇಶ ತಗೊಂಡ ಕೊಪ್ಪಳಕ್ಕ ಬರ್ರಿ” ಎಂದು ಕೊಪ್ಪಳದ ಸಂಸ್ಥಾನ ಶ್ರೀ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜನಪ್ರತಿನಿಧಿಗಳಿಗೆ ತಾಕೀತು ಮಾಡಿದರು.
ನಗರದಲ್ಲಿ ಎಂಎಸ್ಪಿಎಲ್ ಫ್ಯಾಕ್ಟರಿ ವಿಸ್ತರಣೆ ವಿರೋಧಿಸಿ ಸೋಮವಾರ ಕರೆ ನೀಡಲಾಗಿದ್ದ ಕೊಪ್ಪಳ ಬಂದ್ ಪ್ರತಿಭಟನಾ ರ್ಯಾಲಿ ನಂತರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಫ್ಯಾಕ್ಟರಿ ಬರುವುದಕ್ಕೆ ಬರಲು ನಮ್ಮ ವಿರೋಧವಿಲ್ಲ. ಆದರೆ ಈಗಾಗಲೇ ಬಂದಿರುವ ಫ್ಯಾಕ್ಟರಿಗಳಿಂದ ಜನರಿಗಾಗಿರುವ ತೊಂದರೆ, ಅವುಗಳ ನಿವಾರಣೆಯ ನಂತರ ಜನ-ಜಾನುವಾರು ಜೀವಹಾನಿಯಾಗದೇ, ಪರಿಸರಕ್ಕೆ ಧಕ್ಕೆಯಾಗದೇ ಇರುವ ಭರವಸೆ ನೀಡಿದ ಬಳಿಕ ಜನಾಭಿಪ್ರಾಯ ಪಡೆದು ಮುಂದುವರಿಯಿರಿ ಎಂದರು.
ಸದ್ಯಕ್ಕಂತು ಕೊಪ್ಪಳ ಸುತ್ತಮುತ್ತ ಯಾವ ಫ್ಯಾಕ್ಟರಿಗಳು ಬರುವುದು ಬೇಡ. ಈಗ ಸರಕಾರದ ಹೊಣೆ ದೊಡ್ಡದು, ಸರಕಾರದಲ್ಲಿ ಪ್ರಭಾವ ಇರುವ ಜಿಲ್ಲೆಯ ಜನಪ್ರತಿನಿಧಿಗಳ ಜವಾಬ್ದಾರಿಯೂ ದೊಡ್ಡದು. ಬರೀ ಈ ಮೂವರು ಮಾತ್ರವಲ್ಲ, ಎಲ್ಲ ಜನಪ್ರತಿನಿಧಿಗಳು ಸಹ ಜನರ ಜೀವ-ಜೀವನಕ್ಕಾಗಿ ಯೋಚಿಸಬೇಕು ಎಂದು ಸಲಹೆ ನೀಡಿದರು.
ದೇಶದ ಪ್ರಗತಿಗೆ ಕಾರ್ಖಾನೆಗಳು ಬೇಕು. ಆದರೆ ಯಾವ ಭಾಗದಲ್ಲಿ ಎಷ್ಟು ಮುಖ್ಯ ಅಂತ ನೋಡಬೇಕು. ಕೊಪ್ಪಳ ತಾಲೂಕಿನಲ್ಲಿ 202 ಪ್ಯಾಕ್ಟರಿಗಳಿವೆ. ಸುತ್ತ ಪ್ಯಾಕ್ಟರಿಯಾದ್ರೆ ಜನ ಇರೋದಾದ್ರು ಎಲ್ಲಿ? ಇದೇ ರೀತಿ ಪ್ಯಾಕ್ಟರಿ ಆರಂಭವಾದ್ರೆ ಕೊಪ್ಪಳ ನರಕವಾಗುತ್ತದೆ. ತೊಟ್ಟಿಲ ಕಾರ್ಯಕ್ರಮಕ್ಕೆ ಹೋಗೋರು ಕಡಿಮೆಯಾಗುತ್ತಾರೆ. ಹೆಣಕ್ಕೆ ಹೋಗೋರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯ ಕೊಪ್ಪಳ ತಿಪ್ಪೆ ಆದಂತಾಗಿದೆ. ಸುತ್ತಮುತ್ತಲಿನ ಜನರ ಸ್ಥಿತಿ ನೋಡಿದರೆ ಕಣ್ಣೀರು ಬರುತ್ತೆ. ಸಣ್ಣ ಮಕ್ಕಳಿಗೆ ಕ್ಯಾನ್ಸರ್, ಅಸ್ತಮಾ ಬರುತ್ತಿದೆ ಎಂದು ಅವರು ಭಾವುಕರಾಗಿ ನುಡಿದರು.
ಕೊಪ್ಪಳ ಸಾಂಸ್ಕೃತಿಕ ರಾಜಧಾನಿಯಾಗಿದೆ. ಬಿಳಿಯರಳೆಯಂತಿರುವ ಕೊಪ್ಪಳ ಎಣದು ಬಣ್ಣಿಸಿಕೊಂಡ ಕೊಪ್ಪಳ ಇದೀಗ ಕರಿ ಅರಳೆಯಂತಾಗಿದೆ. ಬಲ್ಡೋಟಾ ಸೇರಿದಂತೆ ಕೊಪ್ಪಳದಲ್ಲಿ ಯಾವುದೇ ಪ್ಯಾಕ್ಟರಿ ಆರಂಭಕ್ಕೆ ನನ್ನ ವಿರೋಧವಿದೆ. ಇರೋ ಪ್ಯಾಕ್ಟರಿಗಳ ವಿಸ್ತರಣೆ ಗೆ ಅವಕಾಶ ಕೊಡಬಾರದು. ನಾಲೆಜ್ ಪಾರ್ಕ್ ಬೆಂಗಳೂರಿಗೆ, ಹೊಗೆ ಉಗಳೋ ಪ್ಯಾಕ್ಟರಿ ನಮಗೆ ಕಳಿಸೋ ಕೆಲಸ ಸರ್ಕಾರ ಮಾಡಬಾರದು ಎಂದು ಸರಕಾರದ ನಡೆಯನ್ನು ತಿದ್ದುವ ಪ್ರಯತ್ನ ಮಾಡಿದರು.
ಸರ್ಕಾರ ಬಂಡವಾಳ ಶಾಹಿಗಳ ಪರವಾಗಿರಬಾರದು. ಸರ್ಕಾರ ಬಡವರ ಪರ ಇರಬೇಕು. ಸರ್ಕಾರ ಕೊಪ್ಪಳ ಜನರನ್ನು ಜೋಪಾನ ಮಾಡಬೇಕಿದೆ. ಸರ್ಕಾರ ತಾಯಿಯಿದ್ದಂತೆ. ಇದೀಗ ವಿಷ ಹಾಕ್ತಿರೋ ಅಮೃತ ಹಾಕ್ತಿರೋ ಸರಕಾರ ಹಾಗೂ ಜನಪ್ರತಿನಿಧಿಗಳಿಗೆ ಬಿಟ್ಟಿದ್ದು. ಕೊಪ್ಪಳ ಜನರಿಗೆ ಆರೋಗ್ಯ, ಬದುಕಲು ಅವಕಾಶ ನೀಡಿ. ಕಾರ್ಖಾನೆಯ ಓಡಿಸಿ, ಮನುಷ್ಯನನ್ನು ಉಳಿಸಿ ಎಂದು ಶ್ರೀಗಳು ಸಂದೇಶ ನೀಡಿದರು.
ಜಾತ್ರೆಯ ವೇಳೆ ಮಠದ ಆವರಣ ಬಿಟ್ಟು ಎಲ್ಲೂ ಹೊರಗೆ ಕರೆಯಬೇಡಿ ಎಂದು ವಿನಂತಿಸಿದ್ದೆ. ಮಠ ಬಿಟ್ಟು ಹೋಗೋದಿಲ್ಲ ಎಂದಿದ್ದೆ. ಮಠದ ಭಕ್ತರ ಕಷ್ಟಕ್ಕೆ ಹೋಗಲಿಲ್ಲ ಎಂದರೆ ಹೇಗೆ ಎಂದು ಆತ್ಮಸಾಕ್ಷಿ ಪ್ರಶ್ನೆ ಮಾಡಿತೆಂದು ಭಾವುಕರಾಗಿ ಕಣ್ಣೀರು ಹಾಕಿದ ಸ್ವಾಮೀಜಿ, ಈ ವಿಷಯದಲ್ಲಿ ಯಾರಿಗೂ ಸೆಡ್ಡು ಹೊಡೆದಿಲ್ಲ, ಯಾರ ವಿರುದ್ಧವೂ ಗುಡುಗಿಲ್ಲ. ಜನರ ದನಿಯಾಗಿದ್ದೇನೆ. ಪ್ರೀತಿಯಿಂದ ಹೃದಯ ಗೆದ್ದಿದ್ದೇನೆ ಎಂದರು.