Menu

2028ರ ಚುನಾವಣೆಗೆ ಸಜ್ಜಾಗುವಂತೆ ಪರಾಜಿತ ಅಭ್ಯರ್ಥಿಗಳಿಗೆ ಡಿಕೆ ಶಿವಕುಮಾರ್ ಸೂಚನೆ

dk shivakumar

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳ ಪೈಕಿ ಸುಮಾರು 60 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುವ ಸಾಧ್ಯತೆಗಳಿವೆ ಎಂದು ನಮ್ಮ ಆಂತರಿಕ ಸಮೀಕ್ಷೆಗಳು ವರದಿ ನೀಡಿವೆ. ಈ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿಗಳ ಕಷ್ಟ ಆಲಿಸಿ, ಮುಂದಿನ 2028ರ ಚುನಾವಣೆಗೆ ಸಜ್ಜಾಗಿ ಎಂದು ಸೂಚನೆ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪರಾಜಿತ ಅಭ್ಯರ್ಥಿಗಳ ಜತೆ ಸಭೆ ನಡೆಸಿದ ಬಳಿಕ ಶಿವಕುಮಾರ್ ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“ನಾವು ಸೋತಿದ್ದ 86 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಕರೆಸಿ ಅವರ ಕಷ್ಟ ಆಲಿಸಿ, ಮುಂದಿನ ಚುನಾವಣೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡಿದ್ದೇವೆ. ಪರಾಜಿತ ಅಭ್ಯರ್ಥಿಗಳು ಸುಮ್ಮನೆ ಕೂರದೆ ಕಾರ್ಯಪ್ರವೃತ್ತರಾಗಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ. ಎಐಸಿಸಿ ಜತೆ ಚರ್ಚೆ ಮಾಡಿ ಪಕ್ಷಕ್ಕೆ ಹಿನ್ನಡೆ ಇರುವ ಉಳಿದ 20 ಕ್ಷೇತ್ರಗಳಲ್ಲಿ ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದು ಕಾರ್ಯಯೋಜನೆ ಸಿದ್ಧಪಡಿಸುತ್ತೇವೆ” ಎಂದು ತಿಳಿಸಿದರು.

“ಲೋಕಸಭೆ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರನ್ನು ಮತ್ತೊಂದು ದಿನ ಕರೆದು ಸಭೆ ಮಾಡಲಿದ್ದೇನೆ. ಚುನಾವಣೆಯಲ್ಲಿ ಸೋತ ನಂತರ ಇವರು ಲೋಕಸಭೆ ಚುನಾವಣೆ, ಸಹಕಾರಿ ಸಂಘಗಳ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ. ಅವರಿಗೆ ಶಕ್ತಿ ತುಂಬಲು ಸಲಹೆ ನೀಡಲಾಗಿದೆ. ಮುಂದಿನ ಅಧಿವೇಶನ ನಡೆಯುವಾಗ ನಾನು ಹಾಗೂ ಮುಖ್ಯಮಂತ್ರಿಗಳು ಪರಾಜಿತ ಅಭ್ಯರ್ಥಿಗಳನ್ನು ಕರೆಸಿ ಚರ್ಚೆ ಮಾಡಲು ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದ್ದೇವೆ” ಎಂದು ತಿಳಿಸಿದರು.

ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರ ಸಭೆ:

“ಮಾರ್ಚ್ 23ರಿಂದ ಏಪ್ರಿಲ್ 1ರವರೆಗೂ ನಾನು, ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಚಿವರು, ಉಸ್ತುವಾರಿ ಜಿಲ್ಲೆಗಳ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕಿದೆ. ಅದಕ್ಕೂ ಮುನ್ನವೇ ಶನಿವಾರ ಅಥವಾ ಭಾನುವಾರ ಸಮಯ ಸಿಕ್ಕರೆ ಸಭೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಅವಕಾಶ ನೀಡಲಾಗುವುದು. ನಾನು ಬೆಂಗಳೂರಿನ 28 ಕ್ಷೇತ್ರಗಳನ್ನು ದಿನಕ್ಕೆ 2-3 ಕ್ಷೇತ್ರಗಳಂತೆ ಭೇಟಿ ನೀಡಿ ಕಾರ್ಯಕರ್ತರ ಸಭೆ ಮಾಡಲು ತೀರ್ಮಾನಿಸಿದ್ದೇನೆ. ಈ ಕಾರ್ಯಕರ್ತರ ಸಭೆಯಲ್ಲಿ ಮಂಡಳಿ, ಸಂಘ, ಸಂಸ್ಥೆ, ಸಮಿತಿಗಳಲ್ಲಿ ಸರ್ಕಾರದಿಂದ ನಾಮನಿರ್ದೇಶನವಾಗಿರುವ ಕಾರ್ಯಕರ್ತರಿಗೆ ಸನ್ಮಾನ ಮಾಡಬೇಕು. ಆಮೂಲಕ ಅವರನ್ನು ಗುರುತಿಸಿ ಅವರ ಜವಾಬ್ದಾರಿ ತಿಳಿಸುವ ಕೆಲಸ ಮಾಡಲಾಗುವುದು” ಎಂದು ತಿಳಿಸಿದರು.

“ಇದರ ಒಳಗಾಗಿ ಎಲ್ಲಾ ಸಮಿತಿಗಳ ಪುನರಚನೆ ಮಾಡಬೇಕು. ಶಾಸಕರ ಮನೆಗಳಲ್ಲಿ ಪಕ್ಷದ ಸಭೆ ನಡೆಸುವಂತಿಲ್ಲ. ಪ್ರತ್ಯೇಕವಾಗಿ ಮಾಡಬೇಕಿದೆ. ಬೆಳಗಾವಿಯಲ್ಲಿ ನಡೆದ ಪಕ್ಷದ ಅಧಿವೇಶನದಲ್ಲಿ ಇಡೀ ವರ್ಷ ಪಕ್ಷದ ಸಂಘಟನೆಗೆ ಮೀಸಲಿಡಬೇಕು ಎಂದು ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿ ಅವರು ತೀರ್ಮಾನಿಸಿದ್ದು, ಈ ವರ್ಷ ಪಕ್ಷದ ಮರುಸಂಘಟನೆಯತ್ತ ಗಮನ ಹರಿಸಲಾಗುವುದು. ಬಹಳ ವರ್ಷಗಳಿಂದ ಜವಾಬ್ದಾರಿ ಹೊತ್ತಿರುವವರಿಗೆ ಬೇರೆ ಜವಾಬ್ದಾರಿ ನೀಡಿ ಅಲ್ಲಿಗೆ ಬೇರೆಯವರನ್ನು ನೇಮಿಸಲಾಗುವುದು. ನಾವು ಯಾರನ್ನೂ ಅಧಿಕಾರ ಕಸಿದು ಕಳುಹಿಸುವುದಿಲ್ಲ. ಎಲ್ಲೆಲ್ಲಿ ಪಕ್ಷದ ಸಮಿತಿಗಳು ರಚನೆಯಾಗಬೇಕೋ, ಪದಾಧಿಕಾರಿಗಳ ನೇಮಕವಾಗಬೇಕೋ ಅದೆಲ್ಲವನ್ನು ಶೀಘ್ರವೇ ಭರ್ತಿ ಮಾಡಬೇಕು” ಎಂದರು.

ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿ ಇರಬೇಕು

“ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರಿಗೆ ನೂತನ ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಿದ್ದೇನೆ. ಅವರು ಬೆಂಗಳೂರಿಗೆ ಆಗಮಿಸಿ ಶಂಕುಸ್ಥಾಪನೆ ಮಾಡಲಿದ್ದಾರೆ. ನೂರಕ್ಕೂ ಹೆಚ್ಚು ಕಡೆಗಳಲ್ಲಿ ವರ್ಚುವಲ್ ಮೂಲಕ ಶಂಕುಸ್ಥಾಪನೆ ಮಾಡಲಾಗುವುದು. ನಗರಾಭಿವೃದ್ಧಿ, ಸರ್ಕಾರದಿಂದ ಮಂಜೂರಾದ ಜಾಗಗಳಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಕೆಲವು ಕಡೆ ಜಮೀನು ಖರೀದಿ ಮಾಡಲು ಸೂಚಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ಕಚೇರಿಗಳು ಇರಬೇಕು ಎಂಬುದು ನಮ್ಮ ಗುರಿ. ಕಾಂಗ್ರೆಸ್ ಪಕ್ಷದ ಹೆಸರಿನಲ್ಲಿರುವ ಜಾಗದಲ್ಲಿ ಮಾತ್ರ ಕಾಂಗ್ರೆಸ್ ಕಚೇರಿ ಕಟ್ಟಲು ಶಂಕುಸ್ಥಾಪನೆ ಮಾಡಲಾಗುವುದು. ವೈಯಕ್ತಿಕ ಹೆಸರಿನಲ್ಲಿರುವ ಜಾಗದಲ್ಲಿ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ ಮಾಡುವುದಿಲ್ಲ. ಜಾಗ ಇಲ್ಲದ ಕಡೆ ಜಾಗ ಖರೀದಿ ಮಾಡಿ ಅದನ್ನು ಪಕ್ಷಕ್ಕೆ ದಾನ ಮಾಡಬೇಕು. ನಾನು ಕೂಡ ರಾಮನಗರ ಪಕ್ಷದ ಕಚೇರಿಗೆ ಜಾಗ ಖರೀದಿ ಮಾಡಿಕೊಟ್ಟಿದ್ದೇನೆ. ನಾವೆಲ್ಲರೂ ಪಕ್ಷದ ನಾಯಕತ್ವದ ಫಲಾನುಭವಿಗಳು ಹೀಗಾಗಿ ಪಕ್ಷಕ್ಕಾಗಿ ನಾವು ನೆರವು ನೀಡಬೇಕು” ಎಂದು ತಿಳಿಸಿದರು.

“ಕಳೆದ 5 ವರ್ಷಗಳಿಂದ ಸಂಯೋಜಕರಾಗಿ ಕೆಲಸ ಮಾಡುತ್ತಿದ್ದು, ಅವರಿಗೆ ಬಡ್ತಿ ನೀಡಲು ಮುಂದಾಗಿದ್ದೇವೆ. ಬ್ಲಾಕ್ ಅಧ್ಯಕ್ಷರಿಗೆ ಸರ್ಕಾರಿ ನಾಮನಿರ್ದೇಶನ ಮಾಡಲು ಸೂಚಿಸಲಾಗಿದೆ. ಪರಮೇಶ್ವರ್ ಅವರ ನೇತೃತ್ವದ ಸಮಿತಿ ಮಾಡಿರುವ ಪಟ್ಟಿಯಲ್ಲಿ ಬ್ಲಾಕ್ ಅಧ್ಯಕ್ಷರಿಗೆ ಆದ್ಯತೆ ನೀಡಲು ಮುಂದಾಗಿದ್ದೇನೆ. ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಒಂದು ವಾರದಲ್ಲಿ ಅಂತಿಮಗೊಳಿಸಲಾಗುವುದು” ಎಂದು ಹೇಳಿದರು.

ರಾಹುಲ್ ಗಾಂಧಿ ಅವರಿಗೆ ನಾಳೆ ಆಹ್ವಾನ ನೀಡುತ್ತೀರಾ ಎಂದು ಕೇಳಿದಾಗ “ನಾವು ಆಮಂತ್ರಣ ನೀಡುತ್ತೇವೆ. ಅವರಿಗೂ ಸಂಸತ್ ಅಧಿವೇಶನ ಇರುತ್ತದೆ. ನಮ್ಮ ನೂತನ ಕಟ್ಟಡಗಳಲ್ಲಿ ಪಕ್ಷದ ಕಚೇರಿ ಜತೆಗೆ ವಾಣಿಜ್ಯ ಉದ್ದೇಶದಿಂದ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

ಪಕ್ಷ ಸಂಘಟನೆ ವಿಚಾರವಾಗಿ ಸುನೀಲ್ ಕನಗೋಲು ಅವರ ಸಲಹೆ ಸೂಚನೆ ಪರಿಗಣಿಸುತ್ತೀರಾ ಎಂದು ಕೇಳಿದಾಗ, “ಇದನ್ನು ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಮಾಡುತ್ತಾರೆ. ಅವರು ಇಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾಗಿದ್ದು, ಪಕ್ಷದ ಹಿತಕ್ಕಾಗಿ ಅವರು ಕೊಡುವ ಸಲಹೆಗಳನ್ನು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ನೀವುಗಳು ಪಕ್ಷಕ್ಕೆ ಒಳ್ಳೆಯದಾಗುವ ಸಲಹೆ ಕೊಟ್ಟರೆ ನಿಮ್ಮ ಸಲಹೆಯನ್ನು ಸ್ವೀಕರಿಸುತ್ತೇವೆ” ಎಂದು ತಿಳಿಸಿದರು.

ಪರಿಷತ್ ನಾಮನಿರ್ದೇಶನ ವಿಚಾರವಾಗಿ ಉಳ್ಳವರಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕಾರ್ಯಕರ್ತರು ಬೇಸರವಾಗಿದ್ದಾರೆ ಎಂದು ಕೇಳಿದಾಗ, “ನಿಮ್ಮ ಬಳಿ ಮಾತನಾಡಿರಬಹುದು, ನನ್ನ ಬಳಿ ಮಾತನಾಡಿಲ್ಲ. ನಾನು ಪಕ್ಷದಲ್ಲಿ ಇರುವುದೇ ಕಾರ್ಯಕರ್ತರಿಗಾಗಿ. ನಿಜ ಒಂದು ತಿಂಗಳು ತಡವಾಗಿದೆ. ಕಳೆದ ಮಾಸಾಂತ್ಯದಲ್ಲೇ ದೆಹಲಿಗೆ ಹೋಗಬೇಕಿತ್ತು. ಸಿಎಂ ಅವರು ಚೇತರಿಸಿಕೊಂಡ ನಂತರ ಮಾಡುತ್ತೇವೆ” ಎಂದು ತಿಳಿಸಿದರು.

ಅಧಿವೇಶನಕ್ಕೂ ಮುನ್ನ ತೀರ್ಮಾನ ಮಾಡುತ್ತೀರಾ ಅಥವಾ ಅಧಿವೇಶನದ ನಂತರ ಮಾಡುತ್ತೀರಾ ಎಂದು ಕೇಳಿದಾಗ, “ರಾಜಕೀಯದಲ್ಲಿ ರಾತ್ರಿ ಬೆಳಗಾಗುವುದರೊಳಗೆ ತೀರ್ಮಾನ ಮಾಡಲಾಗುತ್ತದೆ. ಹೀಗಾಗಿ ರಾಜಕೀಯದಲ್ಲಿ ಒಂದು ರಾತ್ರಿ ಸಾಕು” ಎಂದು ತಿಳಿಸಿದರು.

ಸಮಯ ಸಿಕ್ಕರೆ ಎಐಸಿಸಿ ನಾಯಕರ ಭೇಟಿ

ನಾಳೆ ದೆಹಲಿಗೆ ತೆರಳಿದಾಗ ಯಾವ ಎಐಸಿಸಿ ನಾಯಕರನ್ನು ಭೇಟಿ ಮಾಡುತ್ತಿದ್ದೀರಿ ಎಂದು ಕೇಳಿದಾಗ, “ನಾನು ದೆಹಲಿಗೆ ಹೋಗುತ್ತಿರುವುದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲು. ನಾನು ರಾಜಸ್ಥಾನದಲ್ಲಿ ನಡೆದ ಸಮ್ಮೇಳನಕ್ಕೆ ಹೋದಾಗ ನಾನು ನಮ್ಮ ನೀರಾವರಿ ಯೋಜನೆಗಳ ವಿಚಾರವನ್ನು ಪ್ರಸ್ತಾಪಿಸಿದೆ. ಅದಕ್ಕೆ ಅವರು ನಾಳೆ ಸಭೆ ಮಾಡಲು ಸಮಯ ನೀಡಿದ್ದಾರೆ. ನಮ್ಮ ರಾಜ್ಯದವರೇ ಆದ ಸೋಮಣ್ಣ ಅವರ ಮೂಲಕವೇ ಕಡತ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅವರನ್ನು ಬಿಟ್ಟು ನಾನು ಮಾತನಾಡುವುದು ಸರಿಯಲ್ಲ. ಸೋಮಣ್ಣ ಅವರಿಗೂ ನಾನು ಪತ್ರ ಬರೆದಿದ್ದೇನೆ. ನಾಳೆ 11-12 ಗಂಟೆಗೆ ಸಭೆ ಇದೆ. ನಮ್ಮ ಅಧಿಕಾರಿಗಳು ಇಂದೇ ದೆಹಲಿಗೆ ಪ್ರಯಾಣ ಮಾಡಿದ್ದು, ಪ್ರಾಸ್ತಾವಿಕ ಸಭೆ ಮಾಡುತ್ತಿದ್ದಾರೆ. ಅಲ್ಲಿ ಸಭೆಯಲ್ಲಿ ಭಾಗವಹಿಸಿದ ನಂತರ ಸಮಯ ಸಿಕ್ಕರೆ, ನಮ್ಮ ದೆಹಲಿ ನಾಯಕರಿಗೂ ಸಮಯ ಇದ್ದರೆ ಅವರನ್ನು ಭೇಟಿ ಮಾಡಿಕೊಂಡು ಬರುತ್ತೇನೆ. ಎಐಸಿಸಿ ಕಚೇರಿ ನಮ್ಮ ಪಾಲಿಗೆ ದೇವಾಲಯವಿದ್ದಂತೆ ಅಲ್ಲಿಗೂ ಹೋಗಿ ಬರುತ್ತೇನೆ. ಮರುದಿನ ಬೆಳಗ್ಗೆ ಇಶಾ ಫೌಂಡೇಷನ್ ನ ಕಾರ್ಯಕ್ರಮಕ್ಕೆ ಸದ್ಗುರು ಅವರು ಆಹ್ವಾನ ನೀಡಿದ್ದು, ಆಕಾರ್ಯಕ್ರಮಕ್ಕೆ ತೆರಳಬೇಕಿದೆ” ಎಂದು ತಿಳಿಸಿದರು.

ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷ ಮುನ್ನಡೆಸುವುದು ನಮ್ಮ ಕರ್ತವ್ಯ

2028ರ ಚುನಾವಣೆ ನಿಮ್ಮ ನಾಯಕತ್ವದಲ್ಲೇ ನಡೆಯಲಿದೆಯೇ ಎಂದು ಕೇಳಿದಾಗ, “ಆ ಸಮಯಕ್ಕೆ ನಾನು ಯಾವುದೇ ಹುದ್ದೆಯಲ್ಲಿದ್ದರೂ ಪಕ್ಷವನ್ನು ಮುನ್ನಡೆಸುವುದು ನನ್ನ ಕರ್ತವ್ಯ. ಹುದ್ದೆಗಳು ಪಕ್ಷವನ್ನು ಮುನ್ನಡೆಸುವಂತೆ ಮಾಡುವುದಿಲ್ಲ. ನಿಮ್ಮ ನಾಯಕತ್ವ, ಬದ್ಧತೆ, ದೂರದೃಷ್ಟಿ ಪಕ್ಷ ಮುನ್ನಡೆಸಲು ಮುಖ್ಯ. ನಾನು ಏನೇ ಆಗಬಹುದು ಅದು ಮುಖ್ಯವಲ್ಲ. ಪಕ್ಷ ಕೊಟ್ಟಿರುವ ಶಕ್ತಿಯಿಂದ ನಾವು ನಾಯಕರಾಗಿದ್ದು, ಕಾಂಗ್ರೆಸಿಗನಾಗಿ ಪಕ್ಷಕ್ಕೆ ಶಕ್ತಿ ತುಂಬಿ ಮುನ್ನಡೆಸುವುದು ಮುಖ್ಯ” ಎಂದು ತಿಳಿಸಿದರು.

ಗೃಹಜ್ಯೋತಿ ಹಣ ಪಾವತಿಯಾಗಿಲ್ಲ, ಅದನ್ನು ಜನರಿಂದಲೇ ವಸೂಲಿ ಮಾಡಲು ಅನುಮತಿ ನೀಡುವಂತೆ ಬರೆಯಲಾಗಿರುವ ಪತ್ರದ ಬಗ್ಗೆ ಕೇಳಿದಾಗ, “ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಹಿತಿ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ” ಎಂದು ತಿಳಿಸಿದರು.

ಬೆಳಗಾವಿಯಲ್ಲಿ ಮರಾಠಿಗರಿಂದ ಬಸ್ ಕಂಡಕ್ಟರ್ ಮೇಲೆ ಹಲ್ಲೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಳಿದಾಗ, “ಗೃಹಸಚಿವರು ಹಾಗೂ ಸಾರಿಗೆ ಸಚಿವರು ಈ ಪ್ರಕರಣವನ್ನು ನಿಭಾಯಿಸುತ್ತಿದ್ದಾರೆ. ಇವರು ಬೆಳಗಾವಿಗೆ ತೆರಳಿದ್ದಾರೆ. ಅವರು ಪರಿಸ್ಥಿತಿ ಅಲೋಕಿಸಿದ ನಂತರ ನಮ್ಮ ಬಳಿ ಚರ್ಚೆ ಮಾಡಲಿದ್ದಾರೆ. ನಮ್ಮದು ಶಾಂತಿ ಪ್ರಿಯ ರಾಜ್ಯ. ನಾವು ಎಲ್ಲರ ಜತೆ ಸಹೋದರರಂತೆ ಬಾಳಲು ಬಯಸುತ್ತೇವೆ” ಎಂದು ತಿಳಿಸಿದರು.

ಮುನಿರತ್ನ ಅವರು ನಿಮ್ಮ ವಿರುದ್ಧ 2 ಸಾವಿರ ಕೋಟಿ ಅಕ್ರಮದ ಆರೋಪದ ಬಗ್ಗೆ ಕೇಳಿದಾಗ, “ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವ ಪ್ರಕರಣಗಳ ಬಗ್ಗೆ ಯಡಿಯೂರಪ್ಪ, ಆರ್.ಅಶೋಕ್ ಅವರು ಉತ್ತರ ನೀಡಲಿ. ಆನಂತರ ನಾನು ಉತ್ತರ ನೀಡುತ್ತೇನೆ” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *