ಬೆಳಗಾವಿಯಲ್ಲಿ ಕರ್ನಾಟಕದ ಬಸ್ ನಿರ್ವಾಹಕರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಗೂಂಡಾ ಕಾಯ್ದೆ ಹಾಕ್ಬೇಕು ಎಂದು ಸಚಿವ ರಾಮಲಿಂಗಾ ರೆಡ್ಡಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕನ್ನಡದಲ್ಲಿ ಮಾತನಾಡಿ ಎಂದ ವಿಚಾರಕ್ಕೆ ದುಷ್ಕರ್ಮಿಗಳು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಹಿನ್ನೆಲೆಯಲ್ಲಿ ಬೆಳಗಾವಿಗೆ ಭೇಟಿ ನೀಡಿದ್ದ ಸಚಿವರು ಹಲ್ಲೆಗೊಳಗಾದ ಕಂಡಕ್ಟರ್ ಆರೋಗ್ಯ ವಿಚಾರಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕಂಡಕ್ಟರ್ ಆರೋಗ್ಯ ಸ್ಥಿರವಾಗಿದೆ. ಎರಡು ದಿನಗಳಲ್ಲಿ ಮನೆಗೆ ಕಳುಹಿಸುತ್ತಾರೆ. ಎಂಡಿ ಪ್ರತಿದಿನ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಕೇಸ್ ಕೊಟ್ಟಿದ್ದಾರೆ. ಏನೇ ಕೇಸ್ ಇರಲಿ ತನಿಖೆ ಮಾಡುತ್ತಾರೆ ಎಂದು ಹೇಳಿದರು.
ನಿರ್ವಾಹಕ ಮಹದೇವಪ್ಪ ಪರವಾಗಿ ನಮ್ಮ ಇಲಾಖೆ ಇದೆ. ಸಾರ್ವಜನಿಕರೂ ಇದ್ದಾರೆ. ಚಿತ್ರದುರ್ಗದಲ್ಲಿ ನಮ್ಮವರು ಮಸಿ ಬಳಿದರು,ಮಾರನೇ ದಿನ ಮಹಾರಾಷ್ಟ್ರದವರು ಮಸಿ ಬಳಿದರು. ಎರಡೂ ರಾಜ್ಯಕ್ಕೆ ಇದರಿಂದ ನಷ್ಟ ಆಗುತ್ತದೆ. ಸಾರ್ವಜನಿಕರಿಗೂ ತೊಂದರೆ ಹಾಗೂ ಇಲಾಖೆಗೂ ನಷ್ಟ ಆಗುತ್ತದೆ. ಶಿವಸೇನೆಯಂತಹ ಪಕ್ಷ ಇಂತಹ ಕೆಲಸಗಳಿಗೆ ಬೆಂಬಲ ನೀಡಬಾರದು.. ಬೆಳಗಾವಿಯಲ್ಲಿ ಎಂಇಎಸ್‌ನವರು ಗೂಂಡಾಗಿರಿ ಮಾಡವವರಿಗೆ ಬೆಂಬಲ ಕೊಟ್ಟರೆ ನಾವು ಕೇಸ್ ಹಾಕುತ್ತೇವೆ ಎಂದು ಎಚ್ಚರಿಸಿದರು.