ಸ್ಪಿನ್ನರ್ ಗಳ ಎದುರು ರನ್ ಗಳಿಸಲು ಪರದಾಟ ನಡೆಸಿರುವ ನಡುವೆಯೇ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ 14,000 ರನ್ ಪೂರೈಸಿದ ದಾಖಲೆ ಬರೆದಿದ್ದಾರೆ. ಪಾಕಿಸ್ತಾನ ವಿರುದ್ಧ ಈ ದಾಖಲೆ ಬರೆಯುವ ಮೂಲಕ ಅವಿಸ್ಮರಣೀಯ ಸಾಧೆ ಮಾಡಿದ್ದಾರೆ.
ದುಬೈನಲ್ಲಿ ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ 15 ರನ್ ಗಳಿಸುತ್ತಿದ್ದಂತೆ ಏಕದಿನ ಕ್ರಿಕೆಟ್ ನಲ್ಲಿ 14000 ರನ್ ಪೂರೈಸಿದರು.
ಹಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ 14 ಸಾವಿರ ರನ್ ಗಡಿ ದಾಟಿದರು. ಕೊಹ್ಲಿ 287ನೇ ಪಂದ್ಯದಲ್ಲಿ ಈ ಸಾಧನೆ ಮಾಡುವ ಮೂಲಕ ಅತ್ಯಂತ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ 350ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಸಚಿನ್ 18,426 ರನ್ ಗಳಿಸಿ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾದ ಕುಮಾರ್ ಸಂಗಕ್ಕಾರ 14,234 ರನ್ ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದು, ಶೀಘ್ರದಲ್ಲೇ 2ನೇ ಸ್ಥಾನಕ್ಕೆ ಲಗ್ಗೆ ಹಾಕುವ ಸೂಚನೆ ನೀಡಿದ್ದಾರೆ.
2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ ಕೊಹ್ಲಿ 299 ಪಂದ್ಯಗಳಲ್ಲಿ ಆಡಿದ್ದಾರೆ. 2023ರ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಕೊಹ್ಲಿ ಮುರಿದಿದ್ದರು.
ಇದೇ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿಯೇ ಕೊಹ್ಲಿ 158 ಕ್ಯಾಚ್ ಪಡೆಯುವ ಮೂಲಕ ಫೀಲ್ಡಿಂಗ್ ನಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದಿದ್ದ ಮೊಹಮದ್ ಅಜರುದ್ದೀನ್ (156) ದಾಖಲೆಯನ್ನು ಮುರಿದು ಕ್ಯಾಚಿಂಗ್ ನಲ್ಲೂ ಮಿಂಚಿದ್ದಾರೆ.