ಕುಂಭಮೇಳ ಕೊನೆಯ ವಾರಕ್ಕೆ ಕಾಲಿಟ್ಟಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಭಾನುವಾರ ಮುಂಜಾನೆ ಸುಮಾರು 25 ಕಿ.ಮೀ. ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದೆ.
ಮಹಾಕುಂಭ ಮೇಳ ಫೆಬ್ರವರಿ 26ರಂದು ಅಂತ್ಯಗೊಳ್ಳಲಿದ್ದು, ಅಂದು ಕೊನೆಯ ಪುಣ್ಯಸ್ನಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಾನುವಾರದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭಮೇಳಕ್ಕೆ ಭೇಟಿ ನೀಡುತ್ತಿದ್ದಾರೆ. ಜನವರಿ 13ರಂದು ಆರಂಭಗೊಂಡ ಕುಂಭಮೇಳ ಫೆಬ್ರವರಿ 26 ಶಿವರಾತ್ರಿಯಂದು ತೆರೆಬೀಳಲಿದೆ.
ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾಗಳು ಮಹಾಕುಂಭಮೇಳಕ್ಕೆ ಪ್ರಮುಖ ರೈಲು ಮಾರ್ಗಗಳಾಗಿದ್ದು,ಈ ರೈಲುಗಳಲ್ಲಿ ನಿರೀಕ್ಷೆಗೂ ಮೀರಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ದೆಹಲಿಯಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದ ನಂತರ ಭಾರತೀಯ ರೈಲ್ವೆ ವಿಶೇಷ ರೈಲುಗಳ ಸೇವೆಯನ್ನು ನಿಲ್ಲಿಸಿದೆ.
ವಿಶ್ವದ ಅತೀ ದೊಡ್ಡ ಧಾರ್ಮಿಕ ಕಾರ್ಯಕ್ರಮವಾದ ಕುಂಭಮೇಳದಲ್ಲಿ ಇದುವರೆಗೆ 60 ಕೋಟಿಗೂ ಹೆಚ್ಚು ಜನರು ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದೆ. ಉತ್ತರ ಪ್ರದೇಶ ಸರ್ಕಾರದ ಪ್ರಕಾರ ಪ್ರತಿದಿನ ಸುಮಾರು 1 ಕೋಟಿಯಷ್ಟು ಜನರು ಭೇಟಿ ನೀಡುತ್ತಿದ್ದಾರೆ.
ಫೆಬ್ರವರಿ 26ರಂದು ಕುಂಭಮೇಳಕ್ಕೆ ತೆರೆ ಬೀಳಲಿದ್ದು, 73 ದೇಶಗಳಿಂದ ಜನರು ಭೇಟಿ ನೀಡಿದ್ದು, ಇದುವರೆಗೂ ಪುಣ್ಯಸ್ನಾನದ ಪೈಕಿ ಮೌನಿ ಅಮಾವಸ್ಯೆಯಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪುಣ್ಯಸ್ನಾನ ಮಾಡಿದ್ದಾರೆ. ಆ ದಿನ ನಡೆದ ಕಾಲ್ತುಳಿತ ದುರಂತದಲ್ಲಿ 30ಕ್ಕೂ ಹೆಚ್ಚು ಮಂದಿ ಅಸುನೀಗಿದ್ದರು.