Menu

ಭಾರತದ ಚುನಾವಣೆಗೆ ಅಮೆರಿಕ ಹಣ ನೀಡಿಲ್ಲ, ಯೋಜನೆಗಳಿಗೆ ಅನುದಾನ ನೀಡಿದೆ: ವಿತ್ತ ಸಚಿವಾಲಯ

ಪ್ರಧಾನಿ ನರೇಂದ್ರ ಮೋದಿ ಅವರಿಗೆ 180 ಕೋಟಿ ರೂ. ಚುನಾವಣಾ ಅನುದಾನವನ್ನು ಅಮೆರಿಕ ನೀಡಿತ್ತು, ಭಾರತದ ಚುನಾವಣೆ ಮೇಲೆ ಪ್ರಭಾವ ಬೀರಲು ಅಮೆರಿಕ ʻಯುಎಸ್‌ಏಡ್‌ʼ ಮೂಲಕ ನೀಡಿದೆ ಎಂಬ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೆ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಭಾರತದ ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ.

2023-24ನೇ ಸಾಲಿನಲ್ಲಿ ಮತದಾನ ಪ್ರಮಾಣ ಹೆಚ್ಚಳ ಉದ್ದೇಶಕ್ಕೆ ಅಮೆರಿಕದಿಂದ ಯಾವುದೇ ಹಣಕಾಸು ನೆರವು ಬಂದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿರುವ ವರದಿಯಲ್ಲಿ ತಿಳಿಸಿದೆ. ಅಮೆರಿಕ ಹಣಕಾಸು ಸಚಿವಾಲಯ ಕೂಡ ಇದೇ ವರದಿ ನೀಡಿದೆ.

ಭಾರತದಲ್ಲಿ 6,498 ಕೋಟಿ ರೂ. (750 ದಶಲಕ್ಷ ಡಾಲರ್) ವೆಚ್ಚದ 7 ಯೋಜನೆಗಳಿಗೆ ಅಮೆರಿಕದ ನೆರವು ಬಳಕೆಯಾಗುತ್ತಿದೆ. ಈ ದೇಣಿಗೆಯಲ್ಲಿ ಯಾವುದೂ ಚುನಾವಣೆ ಅಥವಾ ಮತದಾನಕ್ಕೆ ಸಂಬಂಧಿಸಿ ಬಳಕೆಯಾಗುತ್ತಿಲ್ಲ ಎಂದು ಹೇಳಿದೆ. ಭಾರತ ಸರ್ಕಾರ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ (ಯುಎಸ್‌ಏಡ್‌) ಸಹಯೋಗದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ 2023-24ರಲ್ಲಿ 825 ಕೋಟಿ ರೂ. (97 ದಶಲಕ್ಷ ಡಾಲರ್) ಅಮೆರಿಕದ ನೆರವು ಬಂದಿದೆ ಎಂದು ಹಣಕಾಸುಇಲಾಖೆಯ ವಾರ್ಷಿಕ ವರದಿ ತಿಳಿಸಿದೆ.

ಕೃಷಿ, ಆಹಾರ ಭದ್ರತೆ, ನೀರು, ನೈರ್ಮಲ್ಯ ರಕ್ಷಣೆ, ಮರುಬಳಕೆಯ ಇಂಧನ ಅಭಿವೃದ್ಧಿ, ವಿಪತ್ತು ನಿರ್ವಹಣೆ ಯೋಜನೆಗಳಿಗೆ ‘ಯುಎಸ್‌ಏಡ್‌’ ಮೂಲಕ ನೆರವು ಪಡೆಯಲಾಗಿದೆ. ಸುಸ್ಥಿರ ಅರಣ್ಯ ಅಭಿವೃದ್ಧಿ, ಹವಾಮಾನ ಬದಲಾವಣೆ, ಇಂಧನ ದಕ್ಷತೆ, ತಂತ್ರಜ್ಞಾನ ಸೇರಿ ಹಲವು ಯೋಜನೆಗಳಿಗೆ ಹಣಕಾಸು ನೆರವು ಪಡೆಯಲಾಗಿದೆ ಎಂಬ ಮಾಹಿತಿಯನ್ನು ಹಣಕಾಸು ಸಚಿವಾಲಯ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

ಭಾರತ-ಅಮೆರಿಕ ದ್ವಿಪಕ್ಷೀಯ ಒಪ್ಪಂದದಂತೆ 1951 ರಿಂದ ʻಯುಎಸ್‌ಏಡ್‌ʼ ಮೂಲಕ ಭಾರತಕ್ಕೆ ಆರ್ಥಿಕ ನೆರವು ನೀಡಲಾಗುತ್ತಿದೆ. 70 ವರ್ಷದಲ್ಲಿ 555 ಯೋಜನೆಗಳಿಗೆ 17 ಬಿಲಿಯನ್‌ ಡಾಲರ್‌ ಹಣದ ನೆರವು ಬಂದಿದೆ ಎಂದು ವರದಿಯಲ್ಲಿ ತಿಳಿಸಿದೆ.

Related Posts

Leave a Reply

Your email address will not be published. Required fields are marked *