ಸ್ನೇಹಿತರೊಂದಿಗೆ ಸೇರಿ ವ್ಯಕ್ತಿಯೊಬ್ಬ ತನ್ನ ಮಾಜಿ ಗೆಳತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಮಹಾರಾಷ್ಟ್ರ ಭಿವಂಡಿಯಲ್ಲಿ ನಡೆದಿದೆ. ಈಗ ಗೆಳತಿ ಬೇರೊಬ್ಬನ ಜತೆ ಸಂಬಂಧದಲ್ಲಿದ್ದಾಳೆಂದು ತಿಳಿದು ಮಾಜಿ ಪ್ರಿಯಕರ ಮೃಗೀಯವಾಗಿ ವರ್ತಿಸಿದ್ದು, ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಕ್ರೂರಿಗಳು ಬೆಳಗ್ಗೆ ಶಾಲೆಯ ಬಳಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಯುವತಿಯನ್ನು ಮಾಜಿ ಗೆಳೆಯ ಅಪಹರಿಸಿದ ಬಳಿಕ ನಾಲ್ವರು ಸ್ನೇಹಿತರೊಂದಿಗೆ ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.
ಮಹಿಳೆ ಮತ್ತು ಅತ್ಯಾಚಾರವೆಸಗಿದ ವ್ಯಕ್ತಿ ಕೆಲವು ವರ್ಷಗಳಿಂದ ರಿಲೇಷನ್ಶಿಪ್ನಲ್ಲಿದ್ದರು, ಇತ್ತೀಚೆಗೆ ಆಕೆ ಆತನನ್ನು ಬಿಟ್ಟು ಬೇರೊಬ್ಬನನ್ನು ಪ್ರೀತಿಸಿದ್ದಳು. ಈ ಸಿಟ್ಟಲ್ಲಿ ಮಾಜಿ ಪ್ರಿಯಕರ ರಾತ್ರಿ ಯುವತಿಯ ಸಹೋದರನನ್ನು ಅಪಹರಿಸಿ ಆತನಲ್ಲಿ ತಂಗಿಗೆ ಕರೆ ಮಾಡಿಸಿ ಸ್ಥಳಕ್ಕೆ ಬರುವಂತೆ ಮಾಡಿದ್ದಾನೆ. ಆಕೆ ಸ್ಥಳಕ್ಕೆ ಬಂದಾಗ ಆರೋಪಿಗಳು ಸಹೋದರ ಮತ್ತು ಆಕೆಯನ್ನು ಕರೆದೊಯ್ಯುತ್ತಿದ್ದ ಆಟೋರಿಕ್ಷಾ ಚಾಲಕನನ್ನು ಥಳಿಸಿ ಆಕೆಯನ್ನು ಎಳೆದುಕೊಂಡು ಹೋಗಿದ್ದಾರೆ.
ಆರೋಪಿಗಳು ನಾಗಾಂವ್‌ನ ಶಾಲೆಯ ಬಳಿ ಮತ್ತು ಫಾತಿಮಾನಗರದ ಪಿಕಪ್ ವ್ಯಾನ್‌ನೊಳಗೆ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ. ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ನಂತರ ಆಕೆ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾಳೆ.
ಆರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಇತರ ಅಪರಾಧಗಳಡಿ ಆರೋಪ ಹೊರಿಸಲಾಗಿದ್ದು, ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.