ಬೆಂಗಳೂರು ದೂರದರ್ಶನ ಕೇಂದ್ರದ ನಿವೃತ್ತ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಜೋಷಿಗೆ ಒಂದು ಲಕ್ಷ ರೂಪಾಯಿಗಳ ದಂಡ ಹಾಗೂ ಕೇಸು ದಾಖಲಿಸಿದ ದಿನದಿಂದ ದಂಡ ಪಾವತಿಯ ದಿನದವರೆಗೆ ಶೇ.೨೪ರಷ್ಟು ಬಡ್ಡಿಯನ್ನು ಅರ್ಜಿದಾರ ಎನ್.ಕೆ.ಮೋಹನ್ ರಾಂ ಅವರಿಗೆ ತೀರ್ಪು ಪ್ರಕಟಿಸಿದ ಏಳು ದಿನಗಳೊಳಗೆ ನೀಡಬೇಕು ಮತ್ತು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಕ್ಷಮೆ ಕೋರಬೇಕೆಂದು ಬೆಂಗಳೂರಿನ ೧೪ನೇ ನ್ಯಾಯಾಲಯ ಆದೇಶಿಸಿದೆ.
ಈ ಆದೇಶ ಉಲ್ಲಂಘನೆಯಾದ್ದಲ್ಲಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿ ನೀಡಿರುವುದು ಮಾತ್ರವಲ್ಲದೆ ಮಹೇಶ್ ಜೋಷಿಯವರು ಏಳು ದಿನಗಳ ನ್ಯಾಯಾಂಗ ಬಂಧನ ಶಿಕ್ಷೆಗೆ ಒಳಗಾಗುತ್ತಾರೆ ಎಂದೂ ತೀರ್ಪಿನಲ್ಲಿ ನ್ಯಾಯಾಧೀಶೆ ನಳಿನಾ ಕುಮಾರಿಯ ಆದೇಶಿಸಿದ್ದಾರೆ.
ಬೆಂಗಳೂರು ದೂರದರ್ಶನದ ಮುಖ್ಯಸ್ಥರಾಗಿದ್ದಾಗ, ಅರ್ಜಿದಾರ ಮೋಹನ್ ರಾಂ ಹಾಗೂ ಇತರೆ ಆರು ದೂರದರ್ಶನ ಸಹೋದ್ಯೋಗಿಗಳ ವಿರುದ್ಧ ೨೦೦೪ರಲ್ಲಿ ಜೆ.ಸಿ.ನಗರ ಠಾಣೆಯಲ್ಲಿ ದಾಖಲಿಸಿದ ದೂರಿನ ಆಧಾರದ ಮೇಲೆ ಪೊಲೀಸರು ನ್ಯಾಯಾಲಯದಲ್ಲಿ ಮೋಹನ್ ರಾಂ ಮತ್ತಿತರ ಆರು ಜನರ ಮೇಲೆ ಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ, ನಕಲಿ ಸಹಿ ಹಾಕಿದ್ದಾರೆ ಎಂದು ಸಲ್ಲಿಸಿದ್ದ ಆರೋಪ ಪಟ್ಟಿ ಸಲ್ಲಿಸಿದ್ದರು. ಇದನ್ನು ೨೦೧೩ರಲ್ಲಿ ಕರ್ನಾಟಕ ಹೈಕೋರ್ಟ್ ಸುಳ್ಳು ಕೇಸೆಂದು ರದ್ದುಮಾಡಿತ್ತು. ತೀರ್ಪಿನಲ್ಲಿ ಮಹೇಶ ಜೋಷಿಯು ಸಲ್ಲಿಸಿದ್ದ ದೂರು ದುರುದ್ದೇಶದ್ದು ಮಾತ್ರವಲ್ಲ, ತನ್ನ ಸಹೋದ್ಯೋಗಿಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಹಾಕಿದ್ದೆಂದು ತೀರ್ಮಾನಿಸಿತ್ತು.
ದುರುದ್ದೇಶದ ಕೇಸು ದಾಖಲಿಸಿದ್ದ ಮಹೇಶ್ ಜೋಷಿ ವಿರುದ್ಧ ಮೋಹನ್ ರಾಂ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಪರಿಹಾರ ಕೋರಿದ್ದರು. ಸುದೀರ್ಘ ವಿಚಾರಣೆಯ ನಂತರ ಮಹೇಶ್ ಜೋಷಿಯು ಮೋಹನ್ ರಾಂ ವಿರುದ್ಧ ದಾಖಲಿಸಿದ ಕೇಸು ದುರುದ್ದೇಶ ಪೂರ್ವಕವಾಗಿದೆ, ಆ ಕೇಸನ್ನು ಬಳಸಿಕೊಂಡು ಮೋಹನ್ ರಾಂ ಅವರ ಸೇವೆಯ ನಿವೃತ್ತಿ ಸೌಲಭ್ಯಗಳನ್ನು ತಡೆಹಿಡಿಯಲು ಮಹೇಶ್ ಜೋಷಿ ಪ್ರಯತ್ನಿಸಿರುವುದು ಸಾಬೀತಾಗಿದೆ. ಇದರಿಂದ ಮೋಹನ್ ರಾಂ ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯಾಗುರುವುದರಿಂದ ಪರಿಹಾರವಾಗಿ ಬರುವ ಏಳು ದಿಬಗಳಲ್ಲಿ ಮಹೇಶ್ ಜೋಷಿ ಒಂದು ಲಕ್ಷ ರೂಪಾಯಿಗಳನ್ನು ಕೇಸು ದಾಖಲಿಸಿದ ದಿನದಿಂದ ವಾರ್ಷಿಕ ಶೇ.೨೪ ರ ಲೆಕ್ಕದಲ್ಲಿ ಬಡ್ಡಿ ಸಮೇತ ಕೊಡಬೇಕು ಹಾಗೂ ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ಬೆಂಗಳೂರು ದೂರದರ್ಶನದಲ್ಲಿ ಕ್ಷಮಾಪಣೆ ಕೋರಬೇಕು ಎಂದು ತೀರ್ಪು ತಿಳಿಸಿದೆ.
ಇವನ್ನು ಪಾಲಿಸದಿದ್ದಲ್ಲಿ ಮಹೇಶ್ ಜೋಷಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡುವ ಸ್ವಾತಂತ್ರ್ಯವನ್ನು ಮೋಹನ್ ರಾಂ ಅವರಿಗೆ ನ್ಯಾಯಾಲಯ ನೀಡಿದೆ. ಏಳು ದಿನಗಳ ಕಾಲ ಬಂಧನಕ್ಕೆ ಒಳಗಾಗಬೇಕಾಗುತ್ತದೆ ಎಂದೂ ತೀರ್ಪಿನಲ್ಲಿ ತಿಳಿಸಿದೆ.