2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೆಲುವಿನ ಓಟ ಮುಂದುವರಿಸಿದೆ. ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿ ಸೆಮಿಫೈನಲ್‌ನತ್ತ ಹೆಜ್ಜೆಯಿಟ್ಟಿದೆ.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಮತ್ತೊಮ್ಮೆ 242 ರನ್‌ಗಳ ಗುರಿಯನ್ನು ತಲುಪಿದೆ. ವಿರಾಟ್ ಕೊಹ್ಲಿ ಸಂಕಷ್ಟದ ಸಮಯದಲ್ಲಿ ಅದ್ಭುತ ಇನ್ನಿಂಗ್ಸ್ ಜೊತೆ ಅಮೋಘ ಶತಕ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟರು. ಭಾರತದ ವಿರುದ್ಧ ಸೋತಿರುವ ಪಾಕಿಸ್ತಾನ ತಂಡ ಟೂರ್ನಿಯ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ.
ಭಾನುವಾರ ದುಬೈನಲ್ಲಿ ನಡೆದ ಈ ಬ್ಲಾಕ್‌ಬಸ್ಟರ್ ಪಂದ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಪಾಕ್ ಅಭಿಮಾನಿಗಳು ಸಂತಸ ಪಡುವಂತಹ ಒಂದೇ ಒಂದು ಸನ್ನಿವೇಶವನ್ನು ಪಾಕ್ ತಂಡ ತೋರಿಲ್ಲ. ಈ ಪಂದ್ಯವನ್ನು ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡರೆ, ಮತ್ತೊಂದೆಡೆ ಇಷ್ಟು ದಿನ ರನ್ ಕೊರತೆ ಎದುರಿಸುತ್ತಿದ್ದ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ಬೇಗನೆ ಔಟಾದ ನಂತರ ಕ್ರೀಸ್‌ಗೆ ಬಂದ ಕೊಹ್ಲಿ, ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರೊಂದಿಗೆ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ಜೊತೆಗೆ ತಮ್ಮ 51 ನೇ ಏಕದಿನ ಶತಕವನ್ನು ಪೂರ್ಣಗೊಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡಕ್ಕೆ ಮೊದಲ ವಿಕೆಟ್ಗೆ 41 ರನ್‌ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ಬಾಬರ್ ಆಝಂ ಬಂದ ತಕ್ಷಣ ಕೆಲವು ಅತ್ಯುತ್ತಮ ಹೊಡೆತಗಳನ್ನು ಹೊಡೆಯುವ ಮೂಲಕ ಉತ್ತಮ ಆರಂಭ ನೀಡಿದ್ದರು. ಆದರೆ ಹಾರ್ದಿಕ್ ಪಾಂಡ್ಯ ಬಾಬರ್ ಅವರ ವಿಕೆಟ್ ಪಡೆಯುವ ಮೂಲಕ ಪಾಕ್ ತಂಡಕ್ಕೆ ಮೊದಲ ಆಘಾತ ನೀಡಿದರು. ಬಾಬರ್ ಔಟಾದ ಬೆನ್ನಲ್ಲೇ ಮತ್ತೊಬ್ಬ ಆರಂಭಿಕ ಇಮಾಮ್ ಉಲ್ ಹಕ್ ಮುಂದಿನ ಓವರ್‌ನಲ್ಲಿ ಔಟಾದರು. ನಾಯಕ ಮೊಹಮ್ಮದ್ ರಿಜ್ವಾನ್ ಮತ್ತು ಸೌದ್ ಶಕೀಲ್ ಉತ್ತಮ ಜೊತೆಯಾಟ ನಡೆಸಿ ತಂಡವನ್ನು ಸ್ಥಿರಗೊಳಿಸಿದರು.
ಕುಲ್ದೀಪ್ ಹಾಗೂ ಹಾರ್ದಿಕ್ ನಿಧಾನಗತಿಯ ಬ್ಯಾಟಿಂಗ್ ನಡೆಸಿದರು. ಪಾಕಿಸ್ತಾನ ತಂಡದ ಸೌದ್ ಶಕೀಲ್ ಅದ್ಭುತ ಅರ್ಧಶತಕ ಬಾರಿಸಿದರೆ, ರಿಜ್ವಾನ್ ಅರ್ಧಶತಕದಂಚಿನಲ್ಲಿ ಎಡವಿದರು. ಇಬ್ಬರೂ ಔಟಾದ ನಂತರ ಮಧ್ಯಮ ಕ್ರಮಾಂಕ ಮತ್ತೊಮ್ಮೆ ಕೈಕೊಟ್ಟಿತು. ಕೊನೆಯಲ್ಲಿ ಖುಸ್ದಿಲ್ ಷಾ ತಂಡವನ್ನು 241 ರನ್‌ಗಳ ಸ್ಕೋರ್‌ಗೆ ಕೊಂಡೊಯ್ದರು. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 3 ವಿಕೆಟ್ ಮತ್ತು ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
ಪಾಕ್ ನೀಡಿದ 241 ರನ್‌ಗಳ ಗೆಲುವಿನ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಮತ್ತೊಮ್ಮೆ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭ ಒದಗಿಸಿಕೊಟ್ಟರು. ಪಾಕ್ ವೇಗಿಗಳಾದ ಶಾಹೀನ್ ಅಫ್ರಿದಿ ಮತ್ತು ನಸೀಮ್ ಶಾ ಎಸೆತಗಳಲ್ಲಿ ಬೌಂಡರಿಗಳನ್ನು ಕಲೆಹಾಕಿ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಶಾಹೀನ್ ಎಸೆದ ಅದ್ಭುತ ಯಾರ್ಕರ್‌ಗೆ ರೋಹಿತ್ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡರು. ರೋಹಿತ್ ವಿಕೆಟ್ ಬಳಿಕವೂ ಉತ್ತಮವಾಗಿ ಆಟವನ್ನು ಮುಂದುವರಿಸಿದ ಶುಭ್ಮನ್ ಗಿಲ್, ಶಾಹೀನ್ ಮೇಲೆ ದಾಳಿ ಮಾಡಿ ಸತತ 2 ಓವರ್‌ಗಳಲ್ಲಿ 5 ಬೌಂಡರಿಗಳನ್ನು ಬಾರಿಸಿದರು. ಮತ್ತೊಂದೆಡೆ ಕೊಹ್ಲಿ ಹ್ಯಾರಿಸ್ ರೌಫ್ ಎಸೆತದಲ್ಲಿ ಬೌಂಡರಿ ಬಾರಿಸಿದರು. ಅರ್ಧಶತಕದಂಚಿನಲ್ಲಿ ಎಡವಿದ ಗಿಲ್ ತಂಡವನ್ನು 100 ರನ್‌ಗಳ ಗಡಿ ದಾಟಿಸಿ ವಿಕೆಟ್ ಒಪ್ಪಿಸಿದರು.
ಪಾಕಿಸ್ತಾನ ವಿರುದ್ಧ ಅತ್ಯುತ್ತಮ ದಾಖಲೆಯನ್ನು ಮುಂದುವರಿಸಿದ ಕೊಹ್ಲಿ ಮತ್ತೊಮ್ಮೆ ಉತ್ತಮ ಇನ್ನಿಂಗ್ಸ್‌ಗೆ ಅಡಿಪಾಯ ಹಾಕಿದರು. ಗಿಲ್ ಔಟಾದ ನಂತರ ಕೊಹ್ಲಿ ಎಂದಿನ ಶೈಲಿಯಲ್ಲಿ ರನ್ ಚೇಸ್ ಜವಾಬ್ದಾರಿಯನ್ನು ವಹಿಸಿಕೊಂಡು ಅದ್ಭುತ ಅರ್ಧಶತಕ ದಾಖಲಿಸಿದರು. ಇತ್ತ ಗಿಲ್ ವಿಕೆಟ್ ಬಳಿಕ ಬಂದ ಶ್ರೇಯಸ್ ಅಯ್ಯರ್ ಆರಂಭದಲ್ಲಿ ರನ್ ಕಲೆಹಾಕಲು ಪರೆದಾಡಿದರಾದರೂ, ಕ್ರೀಸ್ನಲ್ಲಿ ಸ್ವಲ್ಪ ಸಮಯ ಕಳೆದ ನಂತರ ಪಾಕ್ ಬೌಲರ್‌ಗಳನ್ನು ಮಣಿಸಿ ಅಂತಿಮವಾಗಿ ಅಯ್ಯರ್ ಅರ್ಧಶತಕ ಬಾರಿಸಿ ಔಟಾದರೆ, ಕೊಹ್ಲಿ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿದರು.