ಕಿಂಗ್ ವಿರಾಟ್ ಕೊಹ್ಲಿ ಸಿಡಿಸಿದ ಅಜೇಯ ಶತಕದ ಸಹಾಯದಿಂದ ಭಾರತ ತಂಡ 6 ವಿಕೆಟ್ ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ದುಬೈನಲ್ಲಿ ಭಾನುವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 241 ರನ್ ಗಳಿಗೆ ಆಲೌಟ್ ಮಾಡಿದ ಭಾರತ ತಂಡ 42.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು. ಈ ಮೂಲಕ ಎ ಗುಂಪಿನಲ್ಲಿ ಭಾರತ ಅಗ್ರಸ್ಥಾನಕ್ಕೇರಿದರೆ, ಪಾಕಿಸ್ತಾನ ಸತತ 2ನೇ ಸೋಲಿನೊಂದಿಗೆ ಟೂರ್ನಿಯಿಂದ ಬಹುತೇಕ ಹೊರಬಿದ್ದಿತು.
ಪಾಕಿಸ್ತಾನ ವಿರುದ್ಧದ ಪಂದ್ಯ ನಡೆದಾಗಲೆಲ್ಲಾ ಭರ್ಜರಿ ಫಾರ್ಮ್ ಗೆ ಮರಳುವ ವಿರಾಟ್ ಕೊಹ್ಲಿ ಈ ಬಾರಿ ಮತ್ತೊಮ್ಮೆ ಭರ್ಜರಿಯಾಗಿ ಫಾರ್ಮ್ ಕಂಡುಕೊಂಡರು. ಸ್ಪಿನ್ ವಿರುದ್ಧ ಎಡುವುತ್ತಾ ಬಂದಿದ್ದ ಕೊಹ್ಲಿ ಈ ಬಾರಿ ಶತಕ ಸಿಡಿಸಿದರು. ಇದು ಕೊಹ್ಲಿಗೆ 51ನೇ ಏಕದಿನ ಹಾಗೂ ಒಟ್ಟಾರೆ 81ನೇ ಶತಕ ಸಿಡಿಸಿ ದಾಖಲೆ ಬರೆದರು. ಅಲ್ಲದೇ ತಾನು ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದರು.
ವಿರಾಟ್ ಕೊಹ್ಲಿ 111 ಎಸೆತಗಳಲ್ಲಿ 7 ಬೌಂಡರಿ ಸಹಿತ ಗೆಲುವಿನ ಬೌಂಡರಿ ಬಾರಿಸುವ ಮೂಲಕ ಶತಕ ಪೂರೈಸಿದರು. ಅಲ್ಲದೇ ಫಾರ್ಮ್ ಕೊರತೆಯ ಭೀತಿಯಿಂದ ಹೊರಬಂದ ಕೊಹ್ಲಿ ಅದ್ಭುತ ಇನಿಂಗ್ಸ್ ಕಟ್ಟಿಕೊಡುವ ಮೂಲಕ ಪ್ರಬಲ ಎದುರಾಳಿ ವಿರುದ್ಧ ಅಮೋಘ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಕೊಹ್ಲಿ ಎರಡನೇ ವಿಕೆಟ್ ಗೆ ಶುಭಮನ್ ಗಿಲ್ ಕೊತೆ 79 ರನ್ ಜೊತೆಯಾಟ ನಿಭಾಯಿಸಿದರೆ, ಮೂರನೇ ವಿಕೆಟ್ ಗೆ ಅರ್ಧಶತಕ ಸಿಡಿಸಿದ ಶ್ರೇಯಸ್ ಅಯ್ಯರ್ ಜೊತೆ 114 ರನ್ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು. ಅಯ್ಯರ್ 67 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 56 ರನ್ ಗಳಿಸಿದರು.
ಪಾಕಿಸ್ತಾನ ಪರ ಶಹೀನ್ ಅಫ್ರಿದಿ 2 ವಿಕೆಟ್ ಪಡೆದು ಸ್ವಲ್ಪ ಮಟ್ಟಿಗೆ ಪ್ರಭಾವ ಬೀರಿದ್ದು ಬಿಟ್ಟರೆ ಅಬ್ರಾರ್ ಅಹ್ಮದ್ ಮತ್ತು ಖುಷ್ದಿಲ್ ಶಾಹ ತಲಾ 1 ವಿಕೆಟ್ ಪಡೆದರು. ಆದರೆ ಪ್ರಮುಖ ಜೊತೆಯಾಟಗಳನ್ನು ಮುರಿಯಲು ವಿಫಲವಾದರು.