ದೆಹಲಿಯ ಮಾಜಿ ಮುಖ್ಯಮಂತ್ರಿ ಅತಿಶಿ ದೆಹಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕಿಯಾಗಲಿದ್ದಾರೆ. ಆಮ್ ಆದ್ಮಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರ ಹೆಸರನ್ನು ಅನುಮೋದಿಸಲಾಗಿದೆ. ಸಭೆಯಲ್ಲಿ ಎಲ್ಲಾ ಶಾಸಕರು ಅತಿಶಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಸಭೆಯ ನಂತರ ದೆಹಲಿ ಆಮ್ ಆದ್ಮಿ ಪಕ್ಷದ ಉಸ್ತುವಾರಿ ಮತ್ತು ಬಾಬರ್‌ಪುರ ಶಾಸಕ ಗೋಪಾಲ್ ರೈ ಅವರು, ದೆಹಲಿ ಯ ಮಾಜಿ ಸಿಎಂ ಮತ್ತು ಕಲ್ಕಾಜಿ ಎಎಪಿ ಶಾಸಕ ಅತಿಶಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುತ್ತಾರೆ ಎಂದು ಘೋಷಿಸಿದ್ದಾರೆ. ಎಎಪಿ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿ ಅನೇಕ ನಾಯಕರು ಭಾಗವಹಿಸಿದ್ದರು.
ಕಲ್ಕಾಜಿ ಕ್ಷೇತ್ರದ ಶಾಸಕಿ ಅತಿಶಿ ಅವರು ಎಎಪಿ ಸರ್ಕಾರದಲ್ಲಿ ಅರವಿಂದ್ ಕೇಜ್ರಿವಾಲ್ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸೌರಭ್ ಭಾರದ್ವಾಜ್ ಸೋಲು ಕಂಡಿದ್ದರೂ ಅತಿಶಿ ಕಲ್ಕಾಜಿಯಲ್ಲಿ ಸ್ಥಾನವನ್ನು ಉಳಿಸಿ ಕೊಳ್ಳುವಲ್ಲಿ ಯಶಸ್ವಿಯಾದರು. ಬಿಜೆಪಿಯ ರೇಖಾ ಗುಪ್ತಾ ದೆಹಲಿಯ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕಿ ಎಎಪಿಯ ಅತಿಶಿ ಇಬ್ಬರೂ ಮಹಿಳೆಯರು ಎಂಬುದು ಗಮನಾರ್ಹ.