ಪಾರ್ಕ್ ಮಾಡಿದ್ದ ಕಾರಿನಲ್ಲಿ ಹೃದಯಾಘಾತದಿಂದ ಯುವಕ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಬ್ರೂಕ್ ಫೀಲ್ಡ್ ರಸ್ತೆಯಲ್ಲಿ ನಡೆದಿದೆ.
ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ, ಇಂದಿರಾನಗರ ನಿವಾಸಿ ಸಂತೋಷ್ ಪ್ರಸಾದ್ (37) ಮೃತಪಟ್ಟವರು. ಎಂದಿನಂತೆ ಕಾರಿನಲ್ಲಿ ಆಫೀಸಿಗೆ ಹೋಗುವಾಗ ಹೃದಯಾಘಾತ ಆಗಿದ್ದು, ಕೂಡಲೇ ಕಾರನ್ನು ರಸ್ತೆ ಬದಿಗೆ ತಂದು ನಿಲ್ಲಿಸಿದ್ದಾರೆ. ಕಾರು ನಿಲ್ಲಿಸಿದ್ದನ್ನು ಪ್ರಶ್ನೆ ಮಾಡಲು ಬಂದವರಿಗೆ ಕಾರಿನಲ್ಲಿದ್ದವರು ಮೃತಪಟ್ಟಿರುವುದು ತಿಳಿಯಿತು. ಪೊಲೀಸರು ಸಂತೋಷ್ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಸಂತೋಷ್ ಅವರಿಗೆ ಹೈ ಶುಗರ್ ಇತ್ತು ಎಂಬ ವಿಚಾರವನ್ನು ಕುಟುಂಬದವರು ತಿಳಿಸಿದ್ದಾರೆ.
ಫೆ. 20ರಂದು ಈ ಸಾವು ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.