Menu

ಜನಪ್ರತಿನಿಧಿಗಳು ಎಲ್ಲಿದ್ದೀರಿ, ನಾನು ಬೆಳಗಾವಿ, ಬಾಳೇಕುಂದ್ರಿಗೆ ಬಂದೇ ಬರುತ್ತೇನೆ: ಕರವೇ ಅಧ್ಯಕ್ಷ ನಾರಾಯಣ ಗೌಡ

ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಬಾಳೇಕುಂದ್ರಿಗೂ ಬಂದೇ ಬರುತ್ತೇನೆ. ಬಾಳೇಕುಂದ್ರಿ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನೀರಾವರಿ ತಜ್ಞ ಶಿವಪ್ಪ ಗುರುಬಸಪ್ಪ ಬಾಳೇಕುಂದ್ರಿಯವರ ಊರು‌. ಕೃಷ್ಣಾ, ಮಲಪ್ರಭ, ಘಟಪ್ರಭ ವ್ಯಾಪ್ತಿಯ ನೀರಾವರಿ ಯೋಜನೆಗಳ ರೂವಾರಿಯವರು. ಇಂಥ ಶ್ರೇಷ್ಠ ವ್ಯಕ್ತಿಗೆ ಜನ್ಮ ನೀಡಿದ ಅಪ್ಪಟ ಕನ್ನಡದ ಊರು ಬಾಳೇಕುಂದ್ರಿಗೆ ಬರಲು ನನಗೆ ಯಾವ ಹಿಂಜರಿಕೆ ಇರಲು ಸಾಧ್ಯ? ಕರ್ನಾಟಕದ ಮೂಲೆಮೂಲೆಯ ಯಾವ ಹಳ್ಳಿಗಾ ದರೂ ನಾನು ಹೋಗುತ್ತೇನೆ.‌ ಅದು ನನ್ನ ಹಕ್ಕು, ಹೋಗಬೇಕಾದಾಗ ಹೋಗೇ ಹೋಗುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಹೇಳಿದ್ದಾರೆ.

ಗೌಡ್ರೇ ಬೆಳಗಾವಿಗೆ, ಬಾಳೇಕುಂದ್ರಿಗೆ ಬನ್ನಿ ಎಂದು ಕರೆಯುತ್ತಿರುವವರಿಗೆ ನನ್ನ ಒಂದಷ್ಟು ಪ್ರಶ್ನೆಗಳಿವೆ. ಎಲ್ಲಿದ್ದಾರೆ ನಿಮ್ಮ ಜನಪ್ರತಿನಿಧಿಗಳು? ನೀವೇ ಓಟು ಹಾಕಿ ಗೆಲ್ಲಿಸಿದ ಶಾಸಕರೆಲ್ಲ ಹೋದರು? ನಿಮ್ಮ ಜಿಲ್ಲೆಯನ್ನು ಪ್ರತಿನಿಧಿಸುವ ಮಂತ್ರಿಗಳು ಬಾಯಿ ಹೊಲೆದುಕೊಂಡು ಕುಳಿತಿರುವುದು ಯಾಕೆ? ಎಲ್ಲಿದೆ ಆಡಳಿತ ಪಕ್ಷ? ಎಲ್ಲಿದೆ ವಿರೋಧ ಪಕ್ಷ? ಕನ್ನಡಿ ಗರ ಪಾಲಿಗೆ ಇವೆಲ್ಲ ಸತ್ತೇ ಹೋಗಿವೆಯೇ? ಒಬ್ಬ ಅಮಾಯಕ ಕನ್ನಡಿಗನ ಮೇಲೆ ಸುಳ್ಳು ಕೇಸು ಹಾಕಿದ್ದಾರಲ್ಲ? ಯಾರ ಚಿತಾವಣೆಯಿಂದ ಇದು ನಡೆದಿದೆ? ಸುಳ್ಳು ದೂರು ದಾಖಲಿಸಿಕೊಳ್ಳಿ‌ ಎಂದು ಪೊಲೀಸರಿಗೆ ತಾಕೀತು ಮಾಡಿದ ಶಕ್ತಿಗಳು ಯಾವುವು? ಮರೆಯಲ್ಲಿ ನಿಂತು ಬಾಣ ಬಿಡುವ ಇವರ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ ಎಂದು ನಾರಾಯಣ ಗೌಡ ಪ್ರಶ್ನಿಸಿದ್ದಾರೆ.

ನಾರಾಯಣಗೌಡ್ರೇ ಬೆಳಗಾವಿಗೆ ಬನ್ನಿ, ಬಾಳೆಕುಂದ್ರಿಗೆ ಬನ್ನಿ, ಮರಾಠಿ ಬಾರದ ಕಾರಣಕ್ಕೆ ಮರಾಠಿಯಲ್ಲಿ ಮಾತನಾಡದ ಕಾರಣಕ್ಕೆ ಅನ್ಯಾಯವಾಗಿ ಮರಾಠಿ ಪುಂಡರಿಂದ ಹಲ್ಲೆಗೊಳಗಾದ ಬಸ್ ನಿರ್ವಾಹಕ ಮಹದೇವಪ್ಪ ಹುಕ್ಕೇರಿಯವರಿಗೆ ನ್ಯಾಯ ಕೊಡಿಸಿ ಎಂದು ನೂರಾರು ಮಂದಿ ಹೇಳುತ್ತಿದ್ದೀರಿ. ಫೋನುಗಳು, ಸಂದೇಶಗಳು, ಸಾಮಾ ಜಿಕ ಜಾಲತಾಣಗಳಲ್ಲಿ ಅನೇಕ ಪೋಸ್ಟ್ ಗಳ ಮೂಲಕ ನೀವು ನನ್ನನ್ನು ಕರೆಯುತ್ತಿದ್ದೀರಿ. ದೌರ್ಜನ್ಯಕ್ಕೆ ಒಳಗಾದ ಮಹ ದೇವಪ್ಪ ಅವರ ಮೇಲೇ ರಾತ್ರೋರಾತ್ರಿ ಒಂದು ಪ್ರಕರಣ ದಾಖಲಿಸಲಾಗಿದೆ. ಅದೂ ಕೂಡ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು ಎಂದು ಆರೋಪಿಸಲಾದ ಸುಳ್ಳು ಪ್ರಕರಣ ಎಂದಿದ್ದಾರೆ.

ಇವತ್ತು ಕನ್ನಡಿಗರ ಮೇಲೆ ಹಲ್ಲೆ ನಡೆಸುತ್ತಿರುವ ಶಕ್ತಿಗಳ ಬಗ್ಗೆ ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ನಿರ್ಣಯ ಮಹಾನಗರಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಿದಾಗ ಇವರ ಅಪ್ಪಂದಿರ ಮೂತಿಗೆ ಮಸಿ ಬಳಿದಿದವರು ನಾವು. ಇವರ ರಾಜಕಾರಣವನ್ನು ಹಂತಹಂತವಾಗಿ ತಿಪ್ಪೆಗೆಸೆದು ವಿಧಾನ ಸೌಧದ ಬಾಗಿಲು ಮುಚ್ಚಿದವರು ನಾವು. ಈಗ ಅವರು ಹತಾಶರಾಗಿದ್ದಾರೆ, ಅದಕ್ಕಾಗಿ ಈ ಅಮಾಯಕರ ಮೇಲೆ ಹಲ್ಲೆ ನಡೆಸುವ ಹೇಡಿತನ ತೋರುತ್ತಿದ್ದಾರೆ ಎಂದು ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾವೀಗ ಯಾರ ವಿರುದ್ಧ ಬಡಿದಾಡಬೇಕು ಹೇಳಿ. ನೆರೆಯ ರಾಜ್ಯದ ಚಿತಾವಣೆಯಿಂದ ಕನ್ನಡಿಗರ ಮೇಲೆ ದೌರ್ಜನ್ಯಕ್ಕೆ ಇಳಿಯುವ ದುಷ್ಟ ಶಕ್ತಿಗಳ ವಿರುದ್ಧವೇ? ಅಥವಾ ಇದೆಲ್ಲ ನೋಡಿಕೊಂಡು ಮರಾಠಿ ಓಟ್ ಬ್ಯಾಂಕ್ ಕೈತಪ್ಪುತ್ತದೆಯೆಂಬ ಕಾರಣಕ್ಕೆ ಸ್ವಾಭಿಮಾನ ಮರೆತು ಅಡಗಿ ಕುಳಿತಿರುವ ನಮ್ಮ ಹೇಡಿ ರಾಜಕಾರಣಿಗಳ ವಿರುದ್ಧವೇ? ಇವರು ಬಾಯಿಬಿಟ್ಟು ಮಾತಾಡುವಂತೆ ಮಾಡುವುದು ಕೂಡ ನಮ್ಮ ಕರ್ತವ್ಯವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಾನೀಗ ಕೆಪಿಎಸ್ ಸಿ ಯಲ್ಲಿ ಲಕ್ಷಾಂತರ ಕನ್ನಡದ ಮಕ್ಕಳಿಗೆ ಆಗಿರುವ ಅನ್ಯಾಯದ ವಿರುದ್ಧ ಬಡಿದಾಡುತ್ತಿದ್ದೇನೆ.‌ ಆ ಮಕ್ಕಳಿಗೆ ನ್ಯಾಯ ಕೊಡಿಸುವುದಕ್ಕಾಗಿ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗುತ್ತಿದ್ದೇನೆ.  ಈ ಸಂಘರ್ಷದ ನಡುವೆಯೂ ನನ್ನ ಹೃದಯ ಏಟು ತಿಂದು, ಕೇಸು ಹಾಕಿಸಿಕೊಂಡ ಆ ಅಮಾಯಕ ಜೀವಕ್ಕಾಗಿ ಮಿಡಿಯುತ್ತಿದೆ. ಅದಕ್ಕಾಗಿ ನಿಮ್ಮ ನಾರಾಯಣಗೌಡರು ಬೆಳಗಾವಿಗೆ, ಬಾಳೇಕುಂದ್ರಿಗೆ ಬಂದೇ ಬರುತ್ತಾರೆ. ನಾಡಿದ್ದು ಮಂಗಳವಾರವೇ ನಾನು ಬೆಳಗಾವಿ ಗೆ ಬರುತ್ತಿದ್ದೇನೆ. ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಕರವೇ ಕಾರ್ಯಕರ್ತರು, ಪಕ್ಕದ ಜಿಲ್ಲೆಗಳ ಮುಖಂಡರೂ  ಅಂದು ಬೆಳಗಾವಿಗೆ ಬರುತ್ತಿದ್ದೇವೆ. ನಾನು ಬರುವಾಗ ಸುಮ್ಮನೇ ಬಂದು ಹೋಗುವುದಿಲ್ಲ. ಇಷ್ಟು ಸೂಕ್ಷ್ಮ ನಮ್ಮ ಪೊಲೀಸ್ ಇಲಾಖೆಗೆ ಗೊತ್ತೇ ಇದೆ ಎಂದು ಭಾವಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾನ್ಯ ಗೃಹ ಸಚಿವರು ಕೂಡಲೇ ಮಧ್ಯೆ ಪ್ರವೇಶಿಸಿ ಮಹದೇವಪ್ಪ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯಲಿ. ಇದು ನನ್ನ ಆಗ್ರಹ. ಈ ಸಂಘರ್ಷ ಹೀಗೇ ಮುಂದುವರೆಯಲಿ ಎಂಬುದು ಅವರ ಆಸೆಯಾದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಶಾಂತಿ ಕದಡಿದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದೂ ನಾರಾಯಣ ಗೌಡ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *