ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ (ಕೆ.ಪಿ.ಟಿ.ಸಿ.ಎಲ್)ವು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿಯಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲಿದ್ದು, ಹೆಚ್.ಬಿ.ಆರ್. ಲೇಔಟ್ನ 5 ನೇ ಬ್ಲಾಕ್ನ ಕೆ.ಪಿ.ಟಿ.ಸಿ.ಎಲ್. ಸ್ಟೇಷನ್ ಬಳಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಜತೆಯಾಗಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಹೆಚ್.ಬಿ.ಆರ್. ಲೇಔಟ್ ನ 5 ನೇ ಬ್ಲಾಕ್ನ ಕೆ.ಪಿ.ಟಿ.ಸಿ.ಎಲ್. ಸ್ಟೇಷನ್ ಪಕ್ಕದಲ್ಲಿ ಅಂದಾಜು 4.65 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ಅಭಿವೃದ್ದಿ ಮಾಡಲಾಗುತ್ತದೆ.
ಈ ಯೋಜನೆಯಲ್ಲಿ ತರಬೇತಿ ಕೇಂದ್ರ ಹಾಗೂ ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸುವ ಕೇಂದ್ರ ಇರಲಿದ್ದು, ಬಯಲು ರಂಗಮಂದಿರ, ವಾಕಿಂಗ್ ಪಾಥ್ ಹಾಗೂ ಓಪನ್ ಜಿಮ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ ಇರಲಿದೆ ಎಂದು ಹೇಳಿದರು. ಅಲ್ಲದೆ, ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
2.75 ಕೋಟಿ ರೂ. ವೆಚ್ಚದಲ್ಲಿ ಹೆಣ್ಣೂರು ಜೀವ ವೈವಿದ್ಯ ಕೇಂದ್ರ
ಇದಕ್ಕೂ ಮುನ್ನ ಸಚಿವರಾದ ಕೆಜೆ ಜಾರ್ಜ್ ಮತ್ತು ಈಶ್ವರ ಖಂಡ್ರೆ ಅವರು, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಹೆಣ್ಣೂರು ಜೀವ ವೈವಿದ್ಯ ಉದ್ಯಾನವನವನ್ನು 2.75 ಕೋಟಿ ರೂ. ವೆಚ್ಚದಲ್ಲಿ ರೂಪಾಂತರಗೊಳಿಸುವ ಕುರಿತಂತೆ ಪರಿಶೀಲನೆ ನಡೆಸಿದರು.
ಜೀವ ವೈವಿದ್ಯ ಉದ್ಯಾನದದಲ್ಲಿ ವಿಶೇಷ ಪ್ರಬೇಧದ ಸಸ್ಯಗಳನ್ನು ಬೆಳೆಸಿ, ವೈಜ್ಞಾನಿಕ ಹೆಸರನ್ನು ಪ್ರದರ್ಶಿಸಬೇಕು. ಉತ್ತಮ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಹಾಗೂ ವಾಯು ವಿಹಾರಿಗಳಿಗೆ ನಡಿಗೆ ಪಥ ನಿರ್ಮಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜೀವ ವೈವಿಧ್ಯ ಉದ್ಯಾನಕ್ಕೆ 2.75 ಕೋಟಿ ವೆಚ್ಚದಲ್ಲಿ ಕಾಯಕಲ್ಪ ನೀಡಲಾಗುತ್ತಿದ್ದು, ಅರಣ್ಯ ಇಲಾಖೆ 2 ಕೋಟಿ ನೀಡಲಿದೆ. ಇದೇ ವೇಳೆ ಸಚಿವ ಕೆ.ಜೆ.ಜಾರ್ಜ್ ಅವರು, ಯೋಜನೆಗೆ ಸಿಎಸ್ಆರ್ ಅನುದಾನದಡಿ 75 ಲಕ್ಷ ರೂ. ಒದಗಿಸುವುದಾಗಿ ಘೋಷಿಸಿದರು.