ಒಂದು ಕಾಲದಲ್ಲಿ ನಮ್ಮ ನಾಡಿನಲ್ಲಿ ಸಂಸ್ಕೃತ, ಪ್ರಾಕೃತದಂತಹ ಭಾಷೆಗಳೆ ಹೆಚ್ಚಾಗಿ ಪ್ರಚಲಿತವಾಗಿತ್ತು. ದಿನ ಕಳೆದಂತೆ ಅನ್ಯಭಾಷೆಗಳ ಪ್ರಭಾವ ಕನ್ನಡದ ಮೇಲಾಗಿರುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ. ಜೊತೆಗೆ ಕನ್ನಡದ ಪ್ರಭಾವವು ಅನ್ಯ ಭಾಷೆಗಳ ಮೇಲಾಗಿದೆ. ಈ ಬದಲಾವಣೆ ಆಗುತ್ತಿದ್ದಂತೆ ಕನ್ನಡೇತರ ಭಾಷೆಯ ಸಾಹಿತ್ಯವು ನಮ್ಮಲ್ಲಿ ಹುಟ್ಟಿಕೊಂಡಿದೆ.
ಇಂದು ಕನ್ನಡ ನೆಲದಲ್ಲಿ ಕನ್ನಡವನ್ನು ಬಳಸುವವರ ಸಂಖ್ಯೆಯ ಇನ್ನೂ ಅಧಿಕೃತವಾಗಿ ಯಾರೂ ಪ್ರಕಟಿಸಿಲ್ಲ. ಆದರೂ ಒಂದು ಲೆಕ್ಕಾಚಾರದ ಪ್ರಕಾರ ಶೇ. 43ರಷು ಜನರು ಮಾತ್ರ ಕನ್ನಡವನ್ನು ಬಳಸುತ್ತಿದ್ದಾರೆ ಎನ್ನುವ ಕಳವಳಕರ ಮಾಹಿತಿ ಸಿಗುತ್ತಿದೆ. 2011 ಜನಗಣತಿ ಆಧಾರದಲ್ಲಿ ಕರ್ನಾಟಕದ ಜನಸಂಖ್ಯೆಯ 66.54% ಜನ ಮಾತ್ರ ಕನ್ನಡವನ್ನುಬಳಸುತ್ತಿದ್ದಾರೆ ಎಂದು ನೀಡಲಾಗಿತ್ತು. ಮಿಕ್ಕವರು ವಿವಿಧ ಭಾಷೆಗಳನ್ನುತಮ್ಮ ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಈ ಲೆಕ್ಕಾಚಾರ ಅಧಿಕೃತ ಎಂದು ಹೇಳುವುದು ಕಷ್ಟವಾದರೂ ಸುಳ್ಳಂತು ಅಲ್ಲ.
ನಮ್ಮ ನೆಲದಲ್ಲಿ ಕನ್ನಡ ವಲ್ಲದೆ ಇತರ 165 ಭಾಷೆಗಳು ಪ್ರಚಲಿತವಾಗಿವೆ ಎನ್ನುವ ದಾಖಲೆ ಅಧಿಕೃತ ಮೂಲಗಳು ನೀಡುತ್ತಿವೆ. ಇಷ್ಟೊಂದು ಪ್ರಮಾಣದ ಭಾಷೆಗಳು ಇಲ್ಲಿ ಇರುವುದಕ್ಕೆ ಮುಖ್ಯಕಾರಣ ಪರದೇಶ, ಪರ ಊರುಗಳಿಂದ ಜನರು ಇಲ್ಲಿ ಬಂದು ನೆಲೆಸಿದ್ದೆ ಕಾರಣ ಎನ್ನಬಹುದಾಗಿದೆ. ಅಂಥಹ ಅಪರೂಪದ ಭಾಷೆಗಳು ಕೆಲವೇ ಜನರಲ್ಲಿ ಅಥವಾ ಕೆಲವು ಕುಟುಂಬಗಳಲ್ಲಿ ಕಾಣಬಹದು.
ಕರ್ನಾಟಕದ 72 ಭಾಷೆಗಳು ಬಳಸುವುದು ಕಂಡು ಬರುತ್ತವೆ. ಅವುಗಳಲ್ಲಿ ಸುಮಾರು 50 ಭಾಷೆಗಳು ಬುಡಕಟ್ಟು ಭಾಷೆಗಳಾಗಿದೆ. ಕನ್ನಡ ಹೊರತು ಪಡಿಸಿದರೆ ʻತುಳು,ತಮಿಳು, ಕೊಂಕಣಿ, ಮಲಯಾಳಂ, ತಿಗಳಾರಿ, ಅರವು, ಲಂಬಾಣಿ, ಹಿಂದಿ, ಉರ್ದು, ಕೊಡವ, ಬಂಜಾರಿ, ಗುಜಕ್ಷತ್ರಿಯ, ಇಂಗ್ಲಿಷ್, ಮಾರ್ವಾರಿ, ಎರವ, ತಿಬೆಟನ್, ಸಿಂಧಿ, ಬಂಗಾಲಿ, ಪಂಜಾಬಿ, ಅರಬ್ಬೀ, ಹಿಂದುಸ್ಥಾನೀ, ರಾಜಸ್ತಾನೀ, ಕುರುಂಬ, ಕೊರಚ, ವಡರಿ, ಕೊರವ, ಕೊಂಗರ್, ವ್ರಜಭಾಷಾ, ನೇಪಾಲಿ ಇತ್ಯಾದಿ ಭಾಷೆಗಳನ್ನು ಬಳಸುವ ಜನರನ್ನು ಕರುನಾಡಿನಲ್ಲಿ ಕಾಣಬುದಾಗಿದೆ.
ಒಂದು ಲೆಕ್ಕಾಚಾರದ ಪ್ರಕಾರ ಕನ್ನಡವನ್ನು ತೀರಾ ಕಡೆಗಣಿಸಲಾಗಿರುವುದು ರಾಜಧಾನಿ ಬೆಂಗಳೂರಿನಲ್ಲಿ. ಇಲ್ಲಿ ಶೇ. 33 ರಷ್ಟು ಮಾತ್ರ ಕನ್ನಡ ಬಳಕೆ ಮಾಡುವ ಜನರಿದ್ದಾರೆ. ಬಹುತೇಕರಿಗೆ ಕನ್ನಡ ಬಳಸುವುದು ಎಂದರೆ ಒಂದು ತರಹದ ಕೀಳರಿಮೆ ಕಂಡು ಬರುತ್ತಿದೆ. ಕನ್ನಡೇತರರೇ ಹೆಚ್ಚಾಗಿ ಸೇರಿಕೊಂಡ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಬಳಸುವವರಿಗೆ ಮತ್ತು ಕನ್ನಡದಲ್ಲಿ ವ್ಯವಹರಿಸುವವರನ್ನು ಕಾಣುವುದಕ್ಕೆ ಭೂತಗನ್ನಡಿ ಹಿಡಿಯುವ ಕಾಲ ಬಂದಿತ್ತು. ಹಾಗಂತ ನಾಡಿನಲ್ಲಿ ಕನ್ನಡ ಹೊರತು ಪಡಿಸಿ ಅನ್ಯ ಭಾಷೆಗಳನ್ನು ಬಳಸುವ ಕಡೆಗಳಲ್ಲಿ ಕನ್ನಡವನ್ನು ಕಡೆಗಣಿಸಿದ್ದು ಕಂಡು ಬರುವುದಿಲ್ಲ. ಅವರು ಕನ್ನಡಕ್ಕೆ ನೀಡಬೇಕಾದ ಗೌರವವನ್ನುನೀಡುತ್ತ ಬಂದಿದ್ದಾರೆ.
ಉತ್ತರ ಕರ್ನಾಟಕದ ಕೆಲ ಭಾಗಗಳು. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಗಡಿಭಾಗದಲ್ಲಿರುವ ತೆಲುಗರು, ತಮಿಳುನಾಡಿನ ಗಡಿಭಾಗಗಳು, ಹಳೆ ಮೈಸೂರು ಪ್ರದೇಶದ ಕೆಲ ಭಾಗದಲ್ಲಿರುವ ತಮಿಳಿಗರು ಇದ್ದಾರೆ. ಇವರಲ್ಲಿ ಹೆಬ್ಬಾರಿ ತಮಿಳರು, ಅಯ್ಯಂಗಾರಿ ತಮಿಳರು ಎನ್ನುವ ಉಪಭಾಷೆಗಳನ್ನು ನೋಡಬಹುದಾಗಿದೆ. ರಾಜ್ಯದಾದ್ಯಂತ ಇರುವ ಮುಸ್ಲಿಮರು ಉರ್ದು ಅಥವಾ ದಖನಿ ಉರ್ದು ಬಳಸುತ್ತಾರೆ. ಇಲ್ಲಿನ ಉರ್ದುವಿನಲ್ಲಿ ಸಾಕಷ್ಟು ಕನ್ನಡ ಸೇರಿಕೊಂಡು ಬಹುತೇಕ ಉರ್ದು ಭಾಷೆಯನ್ನು ಕುಲಗೆಡಿಸಿ ಬಿಟ್ಟಿದ್ದಾರೆ.
ಗೋವಾ ಗಡಿ, ಕರಾವಳಿ ಮತ್ತು ಸಹ್ಯಾದ್ರಿ ಭಾಗದ ಮಲೆನಾಡಿನ ಕೆಲ ಭಾಗಗಳಲ್ಲಿ ಕೊಂಕಣಿ ಭಾಷೆಯನ್ನುಬಳಸಿದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ತುಳು ಭಾಷೆಯನ್ನು ಬಳಸುವುದು ಕಾಣುವುದು. ಮಹಾರಾಷ್ಟ್ರ ಗಡಿಭಾಗಕ್ಕೆ ಸೇರಿದ ಬೆಳಗಾವಿ, ಬೀದರ, ಕಲಬುರ್ಗಿ, ವಿಜಯಪುರ, ಬಾಗಲಕೋಟೆಯ ಕೆಲವು ಭಾಗದಲ್ಲಿ ಮರಾಠಿಯನ್ನು ಬಳಸಿದರೆ, ಕೊಡಗು ಜಿಲ್ಲೆಯಾಧ್ಯಂತ ಕೊಡವ ಭಾಷೆಯನ್ನು ಬಳಸಲಾಗುತ್ತೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬ್ಯಾರಿ ಮುಸ್ಲಿಮರು ಬ್ಯಾರಿ ಭಾಷೆಯನ್ನು ಮಾತನಾಡುತ್ತಾರೆ. ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿರುವ ನವಾಯತಿ ಮುಸ್ಲಿಮರು ನವಾಯತಿ ಭಾಷೆಯನ್ನು ಬಳಸುತ್ತಾರೆ. ಈ ನವಾಯಿತಿ ಭಾಷೆಯಲ್ಲಿ ಕೊಂಕಣಿ, ತುಳು ಮತ್ತು ಉರ್ದು ಭಾಷೆಗಳ ಮಿಶ್ರಣ ಕಂಡುಬರುತ್ತದೆ. ಕೇರಳ ಗಡಿ ಜಿಲ್ಲೆಗಳಾದ ಮಂಗಳೂರು, ಕಾಸರಗೋಡು, ಎಚ್ಡಿ ಕೋಟೆಯ ಗಡಿಭಾಗದಲ್ಲಿ ಮಲಯಾಳಂ ಭಾಷೆಯನ್ನು ಬಳಸುವುದು ಕಂಡು ಬರುತ್ತದೆ.
ಇನ್ನೂ ಕೆಲವು ಭಾಷೆಗಳು ಜಾತಿ ಸಮುದಾಯಕ್ಕೆ ಮೀಸಲಾಗಿದೆ. ಉತ್ತರ ಭಾರತದಿಂದ ಬಂದು ನೆಲೆಸಿರುವವರು ಹಿಂದಿಯನ್ನು, ಹವ್ಯಕರು ಹವ್ಯಕ ಭಾಷೆಯನ್ನು, ಲಂಬಾಣಿಗಳು ಬಂಜಾರ ಭಾಷೆಯನ್ನು, ಹಳೆ ಮೈಸೂರು ಭಾಗದ ಸಂಕೇತಿಗಳು ಕನ್ನಡ ಮತ್ತು ತಮಿಳು ಎರಡರಿಂದಲೂ ಪ್ರಭಾವಗೊಂಡ ಸಂಕೇತಿ ಭಾಷೆಯನ್ನು ಬಳಸುತ್ತಾರೆ. ಮಹಾರಾಷ್ಟ್ರ ಮೂಲದವರು ಎನ್ನಲಾಗುವ ಚಿಪ್ಪವಾನರು ಮರಾಠಿ, ಕೊಂಕಣಿ ಮಿಶ್ರಿತ ಚಿಪ್ಪಾವನ್ ಭಾಷೆ ಮಾತನಾಡಿದರೆ ಕರಾಡರು ಚಿಪ್ಪವಾನ್ ಭಾಷೆಗೆ ಹತ್ತಿರ ಹೋಲುವ ಕರಾಡ ಭಾಷೆಯನ್ನು ಮಾತನಾಡುತ್ತಾರೆ. ಇದನ್ನು ಹೊರತು ಪಡಿಸಿದರೆ ಶಿವಮೊಗ್ಗದ ಮತ್ತೂರು ಹಳ್ಳಿಯಲ್ಲಿ ಸಂಸ್ಕೃತವನ್ನು ಮಾತನಾಡುತ್ತಾರೆ. ಮೈಸೂರಿನ ಬೈಲಕುಪ್ಪೆ, ಉತ್ತರ ಕನ್ನಡದ ಮುಂಡಗೋಡದಲ್ಲಿ ಇರುವ ಟಿಬೆಟಿಯನ್ ನಿರಾಶ್ರಿತರು ಟಿಬೆಟನ್ ಭಾಷೆಯನ್ನು ಬಳಸುತ್ತಾರೆ.
ಇನ್ನೂ ನಮ್ಮ ನಾಡಿನಲ್ಲಿರುವ ಜನರನ್ನು ಜಾತಿವಾರು ಭಾಷೆಗಳನ್ನು ವಿಂಗಡನೆ ಮಾಡಿದಾಗ ನಮಗೆ ಸಿಗುವ ಲೆಕ್ಕಾಚಾರ ಒಮ್ಮೆ ದಂಗು ಬಡಿಸಿ ಬಿಡುತ್ತದೆ.
ಹಾಲಕ್ಕಿ ಒಕ್ಕಲಿಗರು, ಕುಣಬಿ, ಗುನಗಿ, ಗುನಗಾ, ಗಾಬಿತ್, ಹರಿಕಂತ್ರ, ಮೊಗೆರ, ಕೊಮಾರಪಂತ, ಬಂಡಾರಿ, ಬಂಡಾರು, ಬಡಗ, ಕೊರಗ,ಕುರುಂಬ, ಬೆಟ್ಟಕುರುಬ, ಜೇನುಕುರುಬ, ವದ್ದಾರ್ (ವಾದಾರಿ), ವರ್ಲಿ, ಚೆಂಚು, ಇರುಳ, ಗೌಳಿ, ಸಿದ್ದಿ, ಹೊಲಿಯ, ಉರಲಿ, ಗೊಸಾಯಿ, ಯೆರವ (ರವುಲ), ಪರ್ಧಿ, ದುಂಗ್ರಿ ಗರಾಸಿಯ (ಭಿಲಿ), ಪಣಿಯನ್, ಗೊಂಡ, ಸೊಲಿಗ, ಅರುವು, ಕಣಿಯನ್, ಹಕ್ಕಿಪಿಕ್ಕಿ, ಇತ್ಯಾದಿ ಜನಾಗದವರು ತಮ್ಮದೇ ಭಾಷೆಗಳನ್ನು ಮಾತನಾಡುತ್ತಾರೆ, ಅವುಗಳಲ್ಲಿ ಬಹುತೇಕ ಕನ್ನಡಕ್ಕೆ ಇತರ ಗ್ರಾಮ್ಯ ಸೊಗಡನ್ನು ಸೇರಿಸಿರುವುದು ಅಥವಾ ಸ್ಥಳೀಯ ಭಾಷೆಯ ಅವುಗಳ ಪ್ರಭಾವಿ ಶಬ್ಧಗಳನ್ನು ಬಳಸಿಕೊಂಡು ತಮ್ಮದೇ ಭಾಷೆಯನ್ನು ಬಳಸುತ್ತಾರೆ.
ನಮ್ಮಲ್ಲಿರುವಲ್ಲಿ ಎಲ್ಲಾ ಭಾಷೆಗಳ ಪೈಕಿ ಸಂಸ್ಕೃತ, ಕನ್ನಡ, ಟಿಬೆಟನ್, ಸಂಕೇತಿ, ಹವ್ಯಕ, ತುಳು, ಕೊಂಕಣಿ ಮತ್ತು ಕರಾಡ ಬಿಟ್ಟು ಉಳಿದೆಲ್ಲವು ಬುಡಕಟ್ಟು ಭಾಷೆಗಳು ಎಂದು ವಿಂಗಡಿಸಲಾಗಿದೆ. ಇನ್ನೊಂದು ಲೆಕ್ಕಾಚಾರದಂತೆ ಇಷ್ಟೆ ಅಲ್ಲದೇ ಕರ್ನಾಟಕದ ನೆಲದಲ್ಲಿ ಇನ್ನೂ ಕೆಲವಾರು ಬುಡಕಟ್ಟು ಭಾಷೆಗಳಿವೆ ಎನ್ನಲಾಗುತ್ತಿದೆ. ಇನ್ನೂ ಮುಖ್ಯವಾಗಿ ಕನ್ನಡ, ತೆಲುಗು, ತಮಿಳು ಹಿಂದಿ, ಉರ್ದು ಮರಾಠಿ ಅಥವಾ ಮಲಯಾಳಂ ಭಾಷೆಗಳನ್ನೇ ಆಧಾರವಾಗಿರಿಸಿಕೊಂಡು ಬಹುತೇಕ ಎಲ್ಲಾ ಉಪಭಾಷೆಗಳು ಹುಟ್ಟಿಕೊಂಡಿವೆ. ಅವುಗಳು ಆಯಾ ಜನಾಂಗ ಅಥವಾ ಪ್ರದೇಶಕ್ಕೆ ಸೀಮಿತವಾಗಿದೆ.
ವಾಸ್ತವದಲ್ಲಿ ಕರ್ನಾಟಕದ ಪ್ರಧಾನ ಭಾಷೆ ಕನ್ನಡದ ಬಳಕೆ ಕ್ಷೀಣಿಸುತ್ತಿದೆ ಎನ್ನುವ ವಾದಕ್ಕೆ ಇಲ್ಲಿ ಬಳಸಲಾಗುವ ಉಪಭಾಷೆಗಳು ಕಾರಣ ಅಲ್ಲವೇ ಅಲ್ಲ. ಬದಲಾಗಿ ಇಂದು ಕನ್ನಡವನ್ನು ನುಂಗಿದ್ದು ಮುಖ್ಯವಾಗಿ ಇಂಗ್ಲಿಷ್ ಮತ್ತು ಹಿಂದಿ. ಇನ್ನೂ ಬೆಂಗಳೂರಿನಲ್ಲಿ ಕನ್ನಡ ನಾಪತ್ತೆ ಆಗುತ್ತಿರುವುದಕ್ಕೆ ಇಂಗ್ಲಿಷ, ಹಿಂದಿಯ ಜೊತೆ ತಮಿಳು, ತೆಲಗು ಬಾಷೆ ಹೆಚ್ಚಾಗಿ ಬಳಕೆಯೇ ಮುಖ್ಯ ಕಾರಣ. ಬಹಳಷ್ಟು ಬುಡಕಟ್ಟು ಭಾಷೆಗಳು ಇಂದಿನ ದಿನಗಳಲ್ಲಿ ಅವಸಾನದ ಅಂಚಿನಲ್ಲಿ ಇದೆ. ಹತ್ತು ಸಾವಿರಕ್ಕೂ ಕಡಿಮೆ ಜನ ಬಳಸುವ ಭಾಷೆಗಳನ್ನು ಅಳಿವಿನಂಚಿನಲ್ಲಿರುವ ಭಾಷೆಗಳು ಎನ್ನಲಾಗುತ್ತದೆ. ವಾಸ್ತವದಲ್ಲಿ ಈ ಭಾಷೆಗಳು ತೀರಾ ಹಿಂದುಳಿದ ಜನರು ಮಾತನಾಡುತ್ತಿದ್ದಾರೆ. ಅದಕ್ಕೆ ಅವುಗಳನ್ನು ಬಡವರ ಭಾಷೆ, ಹಿಂದುಳಿದ ಭಾಷೆ ಎಂಬ ಕಳಂಕ ತಟ್ಟಿದೆ. ಈ ಭಾಷೆಯನ್ನು ಮಾತನಾಡುವುದರಿಂದ ಆಯಾ ಸಮುದಾಯದಲ್ಲಿ ಮಾತ್ರ ಸೀಮಿತ ಅಥವಾ ಇನ್ನೇನೂ ಇಲ್ಲ ಎನ್ನುವ ಕಾರಣಕ್ಕೆ ಈ ಭಾಷೆಗಳನ್ನುಬಳಸುವದರಿಂದ ಕೆಲವರು ಯಾವುದೇ ಪ್ರಯೋಜನವಿಲ್ಲ ಎಂದು ವ್ಯಾಖ್ಯಾನಿಸುತ್ತಾರೆ. ಅದೇ ಕಾರಣಕ್ಕೆ ಹೊಸ ತಲೆಮಾರಿನರು ಅವರ ಸಮುದಾಯದ ಭಾಷೆಯಿಂದ ತುಸು ದೂರಾಗುವುದು ಕಂಡು ಬರುತ್ತಿದೆ.
ಅಸಲಿಗೆ ಭಾಷೆ ಎನ್ನುವುದು ಆಯಾ ಸಮಾಜ, ಜನರ ಅಸ್ಮಿತೆಯ ಜೀವನಾಡಿ. ಕನ್ನಡ ನಾಡಿನ ಪ್ರತಿಯೊಬ್ಬರ ಅಸ್ಮಿತೆ. ಕನ್ನಡ ಎನ್ನುವುದು ತಾಯಿ ಬೇರು… ಅದರಂತೆ ಜನಾಂಗದಲ್ಲಿ ಬಳಸುವ ಭಾಷೆ ಅಲ್ಲಿನ ಸಂಸ್ಖತಿ, ಆಚಾರ ವಿಚಾರ ಗಟ್ಟಿಗೊಳಿಸುವ ತಂತು ಬೇರು ಇದ್ದಂತೆ.
-ಶ್ರೀನಾಥ್ ಜೋಶಿ ಸಿದ್ದರ