Saturday, February 22, 2025
Menu

ಮಾಜಿ ಸಚಿವ ಬಿ.ನಾಗೇಂದ್ರ ಮನವಿಯ ವಿಚಾರಣೆ ಫೆ. 27ಕ್ಕೆ ಮುಂದೂಡಿಕೆ

ವಾಲ್ಮೀಕಿ ನಿಗಮದ ಹಣ ಅಕ್ರಮ ವರ್ಗಾವಣೆ ಆರೋಪ ಸಂಬಂಧ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ವಿಚಾರಣೆಯನ್ನು ಹೈಕೋರ್ಟ್ ಫೆಬ್ರುವರಿ 27ರವರೆಗೆ ಮುಂದೂಡಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣ (ಇಸಿಐಆರ್) ಮತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೆಗೆದುಕೊಂಡಿರುವ ಕಾಗ್ನಿಜೆನ್ಸ್ ರದ್ದು ಕೋರಿ ಮಾಜಿ ಸಚಿವ ಬಿ.ನಾಗೇಂದ್ರ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ, ವಿಚಾರಣೆಯನ್ನು ಫೆ.27ರವರೆಗೆ ಮುಂದೂಡಿತು.

ನಾಗೇಂದ್ರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿ, ಪ್ರಕರಣ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಅನುಸಾರ ವಿಶೇಷ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಬಿಎನ್‌ಎಸ್‌ಎಸ್ ಸೆಕ್ಷನ್ 223 ಪ್ರಕಾರ, ಬಿಎನ್‌ಎಸ್‌ಎಸ್ ಅಡಿಯಲ್ಲಿ ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಮುನ್ನ ಆರೋಪಿಗೆ ನೋಟಿಸ್ ಜಾರಿಗೊಳಿಸಿ ವಾದ ಆಲಿಸಬೇಕಾಗುತ್ತದೆ. ಹೀಗಾಗಿ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ವಿಚಾರಣೆಯನ್ನು ಮುಂದುವರಿಸಬಾರದು ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ಜಾರಿ ನಿರ್ದೇಶನಾಲಯದ ಪರ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಬಿಎನ್‌ಎಸ್‌ಎಸ್ ಜಾರಿಗೆ ಬರುವ ಮುನ್ನ 2024ರ ಜೂ.6ರಂದು ಜಾರಿ ನಿರ್ದೇಶನಾಲಯವು ಇಸಿಐಆರ್ ದಾಖಲಿಸಿದೆ. ಬಿಎನ್‌ಎಸ್‌ಎಸ್ 2024ರ ಜು.1ರಿಂದ ಜಾರಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಗಳನ್ನು ಬಿಎನ್‌ಎಸ್‌ಎಸ್ ಜಾರಿಗೆ ಮುನ್ನ ಜಾರಿ ನಿರ್ದೇಶನಾಲಯ ಕೈಗೊಂಡಿದೆ. ವಿಶೇಷ ನ್ಯಾಯಾಲಯವು ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅನ್ವಯಿಸಿ ಕಾಗ್ನಿಜೆನ್ಸ್ ತೆಗೆದುಕೊಂಡಿದೆ. ಹಾಗಾಗಿ ಕಾಗ್ನಿಜೆನ್ಸ್ ಸ್ವೀಕರಿಸಿರುವ ಪ್ರಕ್ರಿಯೆಯಲ್ಲಿ ಲೋಪವಾಗಿಲ್ಲ. ವಿಚಾರಣಾ ನ್ಯಾಯಾಲಯದ ವಿಚಾರಣೆ ಮುಂದುವರಿಸಲು ಅನುಮತಿ ನೀಡಬೇಕು ಎಂದು ಕೋರಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಪೀಠ, ವಿಚಾರಣೆ ಮುಂದೂಡಿ ಮಧ್ಯಂತರ ಆದೇಶ ನೀಡಿತು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಬಿವೃದ್ಧಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ 95 ಕೋಟಿ ಹಣ ವರ್ಗಾಯಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಮತ್ತಿತರರ ವಿರುದ್ಧ ಇಸಿಐಆರ್ ದಾಖಲಿಸಿ ತನಿಖೆ ಕೈಗೊಂಡು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಕಾಗ್ನಿಜೆನ್ಸ್ ತೆಗೆದುಕೊಂಡು 2024ರ ಅ.5ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ನಾಗೇಂದ್ರ ಹೈಕೋರ್ಟ್‌ ಗೆ ಮನವಿ ಸಲ್ಲಿಸಿದ್ದಾರೆ.

Related Posts

Leave a Reply

Your email address will not be published. Required fields are marked *