ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 78 ವರ್ಷ ದಾಟಿದ ಸೋನಿಯಾ ಗಾಂಧಿ ಅವರು ವಯೋ ಸಹಜ ಆರೋಗ್ಯ ಸಮಸ್ಯೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಚಿಕಿತ್ಸೆಯಿಂದ ಸದ್ಯ ಚೇತರಿಸಿಕೊಂಡಿದ್ದು, ನಿಗದಿತ ತಪಾಸಣೆ ನಡೆಸಲಾಗಿದೆ. ಅವರ ಅರೋಗ್ಯ ಸ್ಥಿರವಾಗಿದ್ದು, ವೈದ್ಯರು ಆರೈಕೆ ಮಾಡುತ್ತಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆಯೂ ಸೋನಿಯಾ ಅವರು ತೀವ್ರ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದು, ಹಲವು ಬಾರಿ ಅಮೆರಿಕದಲ್ಲಿ ಚಿಕಿತ್ಸೆ ಪಡೆದುಕೊಂಡು ಬಂದಿದ್ದರು.
ಸೋನಿಯಾ ಗಾಂಧಿ ಕಳೆದ ವಾರದವರೆಗೂ ಅಧಿವೇಶನದಲ್ಲಿ ಪಾಲ್ಗೊಂಡು ಜನಹಿತಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದರು. ಭಾರತದ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಭದ್ರತೆ ನೀಡುವಲ್ಲಿ ನ್ಯಾಷನಲ್ ಫುಡ್ ಸೆಕ್ಯುರಿಟಿ ಆಕ್ಟ್‌ನ ಪ್ರಾಮುಖ್ಯತೆ, ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಲಭ್ಯತೆ ಬಗ್ಗೆ ಅವರು ಮಾತನಾಡಿದ್ದಾರೆ. ಈ ಕಾಯಿದೆ ಕೋವಿಡ್ ಸಂದರ್ಭದಲ್ಲೂ ಬಹಳ ಪ್ರಯೋಜನಕ್ಕೆ ಬಂದಿದೆ, ಇದನ್ನು ಯುಪಿಎ ಸರ್ಕಾರ 2013 ರಲ್ಲಿ ಜಾರಿಗೆ ತಂದಿತ್ತು ಎಂದು ಹೇಳಿದ್ದರು.