ನಾವು ನಮ್ಮ ರಾಜಕೀಯ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕೇ ಹೊರತು ನಮ್ಮ ನಮ್ಮಲ್ಲೇ ಹೋರಾಟ ಮಾಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶವನ್ನು ಶಿವಕುಮಾರ್ ಪ್ರಕಟಿಸಿ, ನೂತನ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಚುನಾವಣೆ ಗೆಲ್ಲುವುದು ಮುಖ್ಯವಲ್ಲ, ಈಗ ಚುನಾವಣೆ ವಿಚಾರ ಮರೆತು ಯಾವುದೇ ಗುಂಪುಗಾರಿಕೆ ಮಾಡದೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ನಂಬಿ ಪಕ್ಷದ ಸದಸ್ಯತ್ವ ಪಡೆದಿರುವ ಎಲ್ಲರನ್ನು ಸೇರಿಸಿಕೊಂಡು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಹೋರಾಟ ಮಾಡಬೇಕು ಎಂದರು.
ಕಳೆದ ವಾರ ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಹೊರಬಂದಿದ್ದು, ನಿನ್ನೆ ನಮ್ಮ ವರಿಷ್ಠರು ಮೂವರು ಅಭ್ಯರ್ಥಿಗಳನ್ನು ಸಂದರ್ಶನ ಮಾಡಿದರು. ಅಂತಿಮವಾಗಿ ಹೆಚ್.ಎಸ್ ಮಂಜುನಾಥ್ ಅವರನ್ನು ನಮ್ಮ ಪಕ್ಷದ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.
ಇಲ್ಲಿಯವರೆಗೂ ಮೊಹಮದ್ ನಲಪಾಡ್ ಹ್ಯಾರಿಸ್ ಅವರು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಬಹಳ ಜವಾಬ್ದಾರಿಯಿಂದ ಸಂಘಟನೆ ಮಾಡಿದ್ದರು. ಭಾರತ ಜೋಡೋ, ಚುನಾವಣೆ, ಗಾಂಧಿ ಭಾರತ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿದ್ದರು. ಅವರಿಗೆ ಹಾಗೂ ಅವರ ತಂಡದ ಸದಸ್ಯರಿಗೆ ಕೆಪಿಸಿಸಿ ಪರವಾಗಿ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
2.71 ಲಕ್ಷ ಮತಗಳ ಅಂತರದ ಗೆಲುವು: ಈ ಬಾರಿ ಸುಮಾರು 25 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಮಾಡಿ, ಅಂದೇ ಆನ್ ಲೈನ್ ಮೂಲಕ ಮತದಾನ ಮಾಡಿದ್ದರು. ಸುಮಾರು ಶೇ.40ರಿಂದ 50 ರಷ್ಟು ಮತಗಳು ತಿರಸ್ಕಾರಗೊಂಡಿವೆ. ಅಬ್ದುಲ್ ದೇಸಾಯಿ ಅವರು 45,968 ಮತಗಳನ್ನು ಪಡೆದರೆ, ದೀಪಿಕಾ ರೆಡ್ಡಿ 2,92,705 ಮತಗಳನ್ನು ಪಡೆದಿದ್ದರು. ಹೆಚ್.ಎಸ್ ಮಂಜುನಾಥ್ ಅವರು 5,67,343 ಮತಗಳನ್ನು ಪಡೆದಿದ್ದರು. 2,71,638 ಮತಗಳ ಅಂತರದಿಂದ ಮಂಜುನಾಥ್ ಅವರು ಗೆಲುವು ಸಾಧಿಸಿದ್ದಾರೆ ಎಂದು ಫಲಿತಾಂಶ ಪ್ರಕಟಿಸಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉದಯ ಭಾನು ಅವರು ಮಂಜುನಾಥ್ ಅವರನ್ನು ಆಯ್ಕೆ ಮಾಡಿದ್ದು, ಅವರಿಗೆ ಕೆಪಿಸಿಸಿ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬಿಬಿಎಂಪಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿ: ಮುಂದಿನ ಎರಡು ಮೂರು ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುತ್ತಿದೆ. ಜತೆಗೆ ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿದೆ. ನಾವು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಬಿಎಂಪಿ ವಿಚಾರವಾಗಿ ಶಾಸಕ ರಿಜ್ವಾನ್ ಆರ್ಷದ್ ಅವರ ನೇತೃತ್ವದಲ್ಲಿ ಸಮಿತಿ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ನೀವೆಲ್ಲರೂ ಈಗಿನಿಂದಲೇ ಬೂತ್ ಮಟ್ಟದಲ್ಲಿ ಸಜ್ಜಾಗಿ ಎಂದು ಕರೆ ನೀಡಿದರು.
ಮಹಿಳೆಯರಿಗೆ ಶೇ. 50 ಮೀಸಲಾತಿ ನೀಡಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ನಾಯಕತ್ವ ಹೆಚ್ಚಾಗಿ ಬೆಳೆಸಬೇಕು. ಯುವ ಕಾಂಗ್ರೆಸ್ ಪಕ್ಷದ ಅಂಗ ಸಂಸ್ಥೆಯಾಗಿದ್ದು ಕೆಪಿಸಿಸಿಯ ಸಂಪೂರ್ಣ ಬೆಂಬಲ ಸಿಗಲಿದೆ ಎಂದು ತಿಳಿಸಿದರು.