ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ತೌಹಿದ್ ಹ್ರಿಡೊಯ್ ಚೊಚ್ಚಲ ಶತಕದ ನೆರವನಿಂದ ಬಾಂಗ್ಲಾದೇಶ ತಂಡ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತಕ್ಕೆ 229 ರನ್ ಗಳ ಸ್ಪರ್ಧಾತ್ಮಕ ಮೊತ್ತದ ಗುರಿ ಒಡ್ಡಿದೆ.
ದುಬೈನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಬಾಂಗ್ಲಾದೇಶ ತಂಡ 49.4 ಓವರ್ ಗಳಲ್ಲಿ 228 ರನ್ ಗೆ ಆಲೌಟಾಯಿತು.
ಭಾರತದ ಮಾರಕ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದರಿಂದ ತಂಡ 35 ರನ್ ಗೆ 5 ವಿಕೆಟ್ ಕಳೆದುಕೊಂಡು ಕಳಪೆ ಮೊತ್ತಕ್ಕೆ ಕುಸಿಯುವ ಭೀತಿಗೆ ಎದುರಾಗಿತ್ತು.
ನಾಯಕ ರೋಹತ್ ಶರ್ಮ ವಿಕೆಟ್ ಕೈ ಚೆಲ್ಲಿದ್ದರಿಂದ ಅಕ್ಸರ್ ಪಟೇಲ್ ಹ್ಯಾಟ್ರಿಕ್ ಅವಕಾಶ ತಪ್ಪಿದ್ದೂ ಅಲ್ಲದೇ ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಗಳು ಭರ್ಜರಿ ತಿರುಗೇಟು ನೀಡಿದರು. ಇದರ ನಡುವೆ ಹಾರ್ದಿಕ್ ಪಾಂಡ್ಯ ಕೂಡ ಒಂದು ಸುಲಭ ಕ್ಯಾಚ್ ಕೈಚೆಲ್ಲಿದ್ದರಿಂದ ತೌಹಿದ್ ಹಿಡ್ರೋಯ್ ಮತ್ತು ಜಕಿರ್ ಅಲಿ 6ನೇ ವಿಕೆಟ್ ಗೆ ದಾಖಲೆಯ 154 ರನ್ ಜೊತೆಯಾಟದಿಂದ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು.
ಜಕಿರ್ ಅಲಿ 114 ಎಸೆತಗಳಲ್ಲಿ 4 ಬೌಂಡರಿ ಒಳಗೊಂಡ 68 ರನ್ ಬಾರಿಸಿದ್ದಾಗ ಶಮಿ ಎಸೆತದಲ್ಲಿ ಔಟಾದರು. ಈ ಮೂಲಕ ಮಹತ್ವದ ಜೊತೆಯಾಟವನ್ನು ಮುರಿದ ಶಮಿ ಭಾರತಕ್ಕೆ ಮತ್ತೆ ಮೇಲುಗೈ ತಂದುಕೊಟ್ಟರು.
ಮತ್ತೊಂದೆಡೆ ಭರ್ಜರಿ ಆಟ ಮುಂದುವರಿಸಿದ ತೌಹಿದ್ 118 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ ಬರೋಬ್ಬರಿ 100 ರನ್ ಬಾರಿಸಿ ಕೊನೆಯವರಾಗಿ ಔಟಾದರು.
ಮೊಹಮದ್ ಶಮಿ 5 ವಿಕೆಟ್ ಗೊಂಚಲು ಪಡೆದ ಸಾಧನೆ ಮಾಡಿದರೆ, ಹರ್ಷಿತ್ ರಾಣಾ 3, ಅಕ್ಸರ್ ಪಟೇಲ್ 2 ವಿಕೆಟ್ ಗಳಿಸಿದರು.