ಬೆಂಗಳೂರು: ಜೆಸಿಬಿ ಹರಿದು ಮನೆ ಮುಂದೆ ಆಟವಾಡುತ್ತಿದ್ದ 2 ವರ್ಷದ ಮಗು ದುರ್ಮರಣ ಹೊಂದಿರುವಂತಹ ಘಟನೆ ಕಾಡುಗೋಡಿ ಬಳಿಯ ಸಿಟಿ ಲೇಔಟ್ನಲ್ಲಿ ನಡೆದಿದೆ.
ಥನವ್ ರೆಡ್ಡಿ ಮೃತ ಮಗು. ಜೆಸಿಬಿ ಚಾಲಕನ ಅತಿವೇಗ, ಅಜಾಗರೂಕತೆಯಿಂದ ಘಟನೆ ಸಂಭವಿಸಿದೆ. ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಜೆಸಿಬಿ ಚಾಲಕನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಮನೆ ಮುಂದೆ ಥನವ್ ರೆಡ್ಡಿ ಆಟವಾಡುತ್ತಿದ್ದ. ಈ ವೇಳೆ ಆತನ ಮೇಲೆ ಜೆಸಿಬಿ ಹರಿದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ಮಗುವನ್ನು ವೈದೇಹಿ ಆಸ್ಪತ್ರೆಗೆ ಪೋಷಕರು ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗಮಧ್ಯೆಯೇ ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಂಗಳವಾರ ಸಂಜೆ 6.30ರ ವೇಳೆ ಮನೆಯ ಮುಂಭಾಗ ಆಟವಾಡುವ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.