Saturday, February 22, 2025
Menu

ದಾವಣಗೆರೆಯಲ್ಲಿ ಪೂಜೆ ಹೆಸರಲ್ಲಿ ಚಿನ್ನಾಭರಣ ದೋಚಿದ್ದವರು ಸೆರೆ

ಇತ್ತೀಚೆಗೆ ದಾವಣಗೆರೆಯಲ್ಲಿ ಪೂಜೆ ಮಾಡಿ ಕಷ್ಟವನ್ನು ಪರಿಹರಿಸುತ್ತೇವೆಂದು ನಂಬಿಸಿ ದಂಪತಿಯ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿದ್ದ ವಂಚಕರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಒರಿಸ್ಸಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನಾಬೇಗಂ ಬಂಧಿತರು. ಆರೋಪಿಗಳಿಂದ 8.65 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ವಂಚಕರು ದಾವಣಗೆರೆ ನಗರ ಸೇರಿ ಹಲವೆಡೆ ಇದೇ ರೀತಿ ವಂಚಿಸಿದ್ದರು. ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದ ಶಶಿಕಲಾ ಮತ್ತು ರಮೇಶ್​​ ದಂಪತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದನ್ನು ಅರಿತ ಆರೋಪಿಗಳು ಫೆಬ್ರವರಿ 11 ರಂದು ದಂಪತಿಯ ಮನೆಗೆ ಹೋಗಿ ವಿಶೇಷ ಪೂಜೆ ಮಾಡಿಸಿ ಸಂಕಷ್ಟ ಪರಿಹಾರವಾಗುತ್ತದೆ ಎಂದು  ನಂಬಿಸಿದ್ದಾರೆ.

ಆರೋಪಿಗಳ ಮಾತು ನಂಬಿದ ದಂಪತಿ ಮನೆಯಲ್ಲಿದ್ದ ಒಟ್ಟು 1.44 ಲಕ್ಷ ರೂ. ಬೆಲೆಯ 2 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಪೂಜೆಗಾಗಿ ಅವರಿಗೆ ಕೊಟ್ಟಿದ್ದಾರೆ. ಆಭರಣ ಪಡೆದುಕೊಂಡ ಆರೋಪಿಗಳು ಪರಾರಿಯಾಗಿದ್ದರು.
ಬಳಿಕ ಸಂತ್ರಸ್ತ ದಂಪತಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *