ವೈಟ್ ಟಾಪಿಂಗ್ ಕಾಮಗಾರಿ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರ ಆಗುತ್ತಾ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕಾಲೆಳೆದಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನಿಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನೀವು ಮಾಡಬೇಕಾದ ಕೆಲಸ ಬೇಕಾದಷ್ಟಿದೆ. 660 ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರು ನಗರದಾದ್ಯಂತ ಇನ್ನೂ ಸಾವಿರಾರು ರಸ್ತೆಗುಂಡಿಗಳು ಬಾಯ್ತೆರೆದುಕೊಂಡೇ ಇವೆ. ಮಾರ್ಚ್ ತಿಂಗಳಿನಿಂದ ಏಪ್ರಿಲ್ ವರೆಗೂ ಬೇಸಿಗೆ ಕಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚೋಕೆ, ರಸ್ತೆ ರಿಪೇರಿ ಮಾಡೋಕೆ ಒಳ್ಳೆ ಸಮಯ. ಈಗಲಾದರೂ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ಮುಂದಿನ ಮಳೆಗಾಲದಲ್ಲಿ ರಸ್ತೆಗುಂಡಿಗಳು ಮತ್ತೊಮ್ಮೆ ಸಾರ್ವಜನಿಕರಿಗೆ ಮೃತ್ಯು ಕೂಪಗಳಾಗುವುದು ಗ್ಯಾರೆಂಟಿ ಎಂದು ಹೇಳಿದ್ದಾರೆ.
ಕಳೆದ ವರ್ಷ ಬೇಸಿಗೆಯಲ್ಲಿ ಟ್ಯಾಂಕರ್ ಮಾಫಿಯಾ ಜೊತೆ ಶಾಮೀಲಾಗಿ ಜನರನ್ನ ಸುಲಿಗೆ ಮಾಡಿದಿರಿ. ಈ ವರ್ಷವಾ ದರೂ ಬೇಸಿಗೆ ಕಾಲದಲ್ಲಿ ಬೆಂಗಳೂರಿನ ಜನತೆ ನೀರಿಗಾಗಿ ಬವಣೆ ಪಡದಂತೆ ಏನಾದರೂ ಕ್ರಮ ಕೈಗೊಳ್ಳುತ್ತೀರೋ ಅಥವಾ ಜನರನ್ನ ಟ್ಯಾಂಕರ್ ಮಾಫಿಯಾ ಮರ್ಜಿಗೆ ಬಿಟ್ಟುಬಿಡುತ್ತೀರೋ ಎಂದು ಪ್ರಶ್ನಿಸಿದ್ದಾರೆ.
ವೈಟ್ ಟಾಪಿಂಗ್ ಕಾಮಗಾರಿ ಹೆಸರಿನಲ್ಲಿ ಫೋಟೋ ಶೂಟಿಂಗ್ ಮಾಡಿದರೆ ಬೆಂಗಳೂರಿನ ಸಮಸ್ಯೆಗಳು ಪರಿಹಾರ ಆಗುತ್ತಾ ಡಿಸಿಎಂ @dkshivakumar ಅವರೇ?
ಬೆಂಗಳೂರು ಅಭಿವೃದ್ಧಿ ಸಚಿವರಾಗಿ ನಿಮಗೆ ಬ್ರ್ಯಾಂಡ್ ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ನೀವು ಮಾಡಬೇಕಾದ ಕೆಲಸ ಬೇಕಾದಷ್ಟಿದೆ.
660 ಕೋಟಿ ರೂಪಾಯಿ ಖರ್ಚು ಮಾಡಿದರೂ ಬೆಂಗಳೂರು ನಗರದಾದ್ಯಂತ… https://t.co/igGydIjcJW— R. Ashoka (@RAshokaBJP) February 16, 2025
ಕೆಆರ್ ಎಸ್ ಜಾಲಯದಿಂದ ತಮಿಳುನಾಡಿಗೆ ನೀರು ಹರಿಯದಂತೆ ಈ ವರ್ಷವಾದರೂ ಮುನ್ನೆಚ್ಚರಿಕೆ ವಹಿಸಿ. ಎಷ್ಟು ನೀರು ಬಿಟ್ಟರೂ ತಮಿಳುನಾಡಿನವರು ಕ್ಯಾತೆ ತೆಗೆಯುವುದಂತೂ ಗ್ಯಾರೆಂಟಿ. ಅದಕ್ಕಾಗಿ ಈಗಲೇ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಿ. ಕರ್ನಾಟಕದ ಪರವಾಗಿ ಗಟ್ಟಿಯಾದ ವಾದ ಮಂಡಿಸಲು ತಯಾರಾಗಿ. ಸಿಎಂ ಸಿದ್ದರಾಮಯ್ಯನವರು ನಡೆಸಿದ ಬಜೆಟ್ ಪೂರ್ವಭಾವಿ ಸಭೆಗಳಲ್ಲಿ ಉಪಮುಖ್ಯಮಂತ್ರಿಗಳಾಗಿ ತಾವು ಎಲ್ಲಿಯೂ ಕಾಣಲೇ ಇಲ್ಲವಲ್ಲ. ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ಯಾವ ಯೋಜನೆಗಳು ಬೇಕು, ಅದಕ್ಕೆಷ್ಟು ಅನುದಾನ ಬೇಕಾಗುತ್ತದೆ ಎನ್ನುವುದನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾದರೂ ಮಾಡಿದ್ದೀರಾ ಅಥವಾ ಕುರ್ಚಿ ಕಿತ್ತಾಟದಲ್ಲಿ ತಮ್ಮ ಕರ್ತವ್ಯವನ್ನೇ ಮರೆತಿದ್ದೀರಾ ಎಂದು ಅಶೋಕ್ ಕುಟುಕಿದ್ದಾರೆ.
ಬಜೆಟ್ ಪೂರ್ವಭಾವಿ ಸಭೆಗಳಿಗೆ ಡಿಸಿಎಂ ಸಾಹೇಬರ ಅನುಪಸ್ಥಿತಿ ನೋಡಿದರೆ ಬಹುಶಃ ಅವರಿಗೆ ಆಹ್ವಾನವೇ ಇಲ್ಲ ಅನ್ನಿಸುತ್ತೆ. ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಕೇವಲ ನಾಮಕಾವಸ್ತೆ ಡಿಸಿಎಂ ಆಗಿರುವ ಡಿ.ಕೆ.ಶಿವಕುಮಾರ್ ಅವರನ್ನ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಅನ್ನಿಸುತ್ತಿದೆ ಎಂದಿದ್ದಾರೆ.