ಮಾಜಿ ಸಂಸದ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಶಿವರಾಮೇಗೌಡ ಮತ್ತು ಪುತ್ರ ಮಂಜೇಗೌಡ, ಬ್ರಿಜೇಶ್ ಕಾಳಪ್ಪ ಮತ್ತು ಎಲ್.ಎಸ್.ಚೇತನ್ ಗೌಡ ಕಾಂಗ್ರೆಸ್ ಗೆ ಸೇರಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಅವರನ್ನೆಲ್ಲ ಪಕ್ಷಕ್ಕೆ ಸ್ವಾಗತಿಸಿದರು.
ಎಲ್ಆರ್ ಶಿವರಾಮೇಗೌಡ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದರು. ಮರಳಿ ಕಾಂಗ್ರೆಸ್ ಪಕ್ಷ ಸೇರಿಕೊಂಡಿದ್ದಾರೆ. ಕಾಂಗ್ರೆಸ್ ತೊರೆದು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್‌ಗೆ ವಾಪಸ್ ಆಗಿದ್ದಾರೆ.
ಎಲ್ ಆರ್ ಶಿವರಾಮೇಗೌಡ ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಂಸದ ಜಿ. ಮಾದೇಗೌಡ ಅವರ ಬಗ್ಗೆ ಲಘುವಾಗಿ ಮಾತನಾಡಿ ಜೆಡಿಎಸ್ನಿಂದ ಉಚ್ಚಾಟನೆಗೊಂಡಿದ್ದ ಶಿವರಾಮೇಗೌಡ ಅವರು 2023ರಲ್ಲಿ ಬಿಜೆಪಿ ಸೇರಿದ್ದರು. 1996ರಲ್ಲಿ ಜನತಾ ದಳದಲ್ಲಿದ್ದ ಶಿವರಾಮೇಗೌಡರು 1999ರವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. 2009ರಲ್ಲಿ ಬಿಜೆಪಿ ಸೇರಿದ್ದ ಅವರು ಒಂದೇ ವರ್ಷದಲ್ಲಿ ಮತ್ತೆ ಕಾಂಗ್ರೆಸ್ ಗೆ ಬಂದಿದ್ದರು. 2018ರಲ್ಲಿ ಜೆಡಿಎಸ್ ಸೇರಿ, 2023 ಜೆಡಿಎಸ್ನಿಂದ ಉಚ್ಚಾಟನೆಗೊಂಡು ಬಿಜೆಪಿಗೆ ಹೋದವರು ಇದೀಗ ಕಾಂಗ್ರೆಸ್‌ಗೆ ಸೇರಿದ್ದಾರೆ.