Saturday, February 22, 2025
Menu

ಮನುಷ್ಯರೆಲ್ಲ ಕಳೆದು ಹೋಗಿ ಧರ್ಮ-ಜಾತಿಗಳು ಜೀವ ಪಡೆದಿವೆ

ನಿಸ್ವಾರ್ಥದಿಂದ ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್‌ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು ಬರುವುದಿಲ್ಲ. ಕಾರಣ, ಧರ್ಮಗಳ ಹಂಗಿಗೆ ಅದೆಂದಿಗೂ ಒಳಗಾಗಿಲ್ಲ. ಎರಡು ದೇಶಗಳ ನಡುವೆ ಎಳೆದ ಗಡಿರೇಖೆಯ ಮೇಲೆ ಹಾರಾಡುವ ಹದ್ದು ಎಂದಾದರೂ ಯೋಚನೆ ಮಾಡಿದ್ದಿದೆಯೇ, ಕೇಳಿ ಬರುತ್ತಿರುವ ಮದ್ದು ಗುಂಡುಗಳ ಸದ್ದು ಯಾವ ದೇಶದ್ದಿರಬಹುದೆಂದು?…

ಮುಂದಾಡುವ ಮಂದಿಯ ಮಾತು

ಮುಳ್ಳಾದರೆ ಎತ್ತಿ ಎಸೆ ದೂರ

ಸುಳ್ಳಾದರೆ ಸುಟ್ಟು ಬಿಡು

ಹೂವಂತಿದ್ದರೆ ಸಹಿಸಿಕೊ ನೋವಾದರೂ…

ಬುದ್ಧ -ಬಸವ -ಗಾಂಧಿಯನ್ನೇ ಬೆಂಬಿಡದೆ ಬೆನ್ನಿಗಿರಿದ ಮಾತುಗಳು ಜನಸಾಮಾನ್ಯರಾದ ನಮ್ಮನ್ನು ಸುಮ್ಮನೆ ಬಿಟ್ಟಾವೆಯೇ? ಅದ್ಯಾವುದಕ್ಕೂ ತಲೆಗೊಡದೆ, ಮನಸ್ಸಿಗೆ ಹಚ್ಚಿಕೊಳ್ಳದೆ, ದಿವ್ಯ ನಿರ್ಲಕ್ಷ್ಯ ವಹಿಸಿ ಮೌನವಾಗಿ ನುಂಗಿಕೊಂಡು ನಡಿಗೆ ನಿಲ್ಲಿಸದೆ ಸಾಗುತ್ತಿರಬೇಕು ಎಂಬರ್ಥದ ಈ ಸಾಲುಗಳು ಮಹಾಂತೇಶ್ ಬಿ. ನಿಟ್ಟೂರು ಅವರದ್ದು.

ಇಲ್ಲಿ ಮನುಷ್ಯರೆಲ್ಲ ಕಳೆದು ಹೋಗಿದ್ದಾರೆ,  ಧರ್ಮ-ಜಾತಿಗಳು ಜೀವ ಪಡೆದುಕೊಂಡಿವೆ ಎಂದು ಬರೆಯುತ್ತಾನೆ ಕವಿ. ಯುಗ ಯುಗಗಳೇ ಕಳೆದು ಹೋದರೂ, ಶತ-ಶತಮಾನಗಳೇ ಉರುಳಿದರೂ ಮನುಷ್ಯ ಸೃಷ್ಟಿಸಿಕೊಂಡ ಜಾತಿ-ಧರ್ಮಗಳು ಮನಸ್ಸು ಮನಸ್ಸುಗಳ ಮಧ್ಯೆ ಕಂದರ ನಿರ್ಮಿಸುತ್ತಿವೆಯೇ ಹೊರತು, ನಿರ್ನಾಮವಾಗುತ್ತಿಲ್ಲ. ನಾವೇ ಈ ನೆಲದ ಮೇಲೆ ಎಳೆದುಕೊಂಡ ಗಡಿರೇಖೆಗಳು ನಮ್ಮನ್ನೆಲ್ಲಾ ಒಂದುಗೂಡಲು ಬಿಡುತ್ತಿಲ್ಲ. ಬಡವ-ಬಲ್ಲಿದ ಎನ್ನುವ ತರತಮದ ಸುಳಿಯೊಳಗೆ ನಾವೆಲ್ಲ ಬಂಧಿತರು. ಸಮತೆಯ ತೋಳತೆಕ್ಕೆಗಳು ಬಿರುಕು ಬಿಟ್ಟು ಬಹಳ ಕಾಲವಾಯಿತು. ಕೆಳಜಾತಿಯಲ್ಲಿ ಹುಟ್ಟಿದ ಕಾರಣಕ್ಕೇ ಮುಟ್ಟಿಸಿಕೊಳ್ಳದ ವರಾಗಿ, ಒಳಗೊಳಗೆ ನೋವು ತಿನ್ನುವ ನಮ್ಮವರನ್ನೇ ನಾವು ಊರಾಚೆ ಅಟ್ಟಿ ನಿಟ್ಟುಸಿರು ಬಿಟ್ಟಿzವೆ. ಸ್ವಾರ್ಥ, ದ್ವೇಷಕ್ಕೆ ಕಟ್ಟುಬಿದ್ದು, ನಾವೊಬ್ಬರೇ ಇಲ್ಲಿ ಶಾಶ್ವತ ಎನ್ನುವ ಹಾಗೆ ಎಲ್ಲವನ್ನೂ ಇಲ್ಲವಾಗಿಸಿ ಮೆರೆಯುತ್ತಿವೆ. ಹಾಗೆಂದೇ ಮಹಾಂತೇಶ್ ನಿಟ್ಟೂರು ಅವರ ಕವಿತೆ ಕಾಗೆ, ಪಾರಿವಾಳ, ಹದ್ದು, ಕೋಗಿಲೆ, ಬೆಳ್ಳಕ್ಕಿ, ಗುಬ್ಬಚ್ಚಿಗಳ ಮುಖಾಂತರ ಮನುಷ್ಯತ್ವದ ಪಾಠ ಹೇಳಿಕೊಡಲು ಯತ್ನಿಸುತ್ತದೆ. ಮಾನವ ಕುಲಂ ತಾನೊಂದೇ ವಲಂ, ದಯೆಯೇ ಧರ್ಮದ ಮೂಲ, ಭಾವೈಕ್ಯತೆ ಯೇ ಬದುಕಿನ ಮಂತ್ರ, ಸರ್ವರಿಗೂ ಸಮಪಾಲು ಸಮಬಾಳು, ಸಕಲರಿಗೂ ಲೇಸನ್ನು ಬಯಸು, ಎಲ್ಲರನ್ನೂ ಪ್ರೀತಿಸು ಈ ಕವಿತೆಯಲ್ಲಿ ಕಂಡು ಬರುವ ಅಗತ್ಯ, ಸಾರ್ವಕಾಲಿಕ ಸಂದೇಶಗಳು.
ತನ್ನ ನಿಸ್ವಾರ್ಥ ಸೇವೆಯಿಂದ ಬೆಳಗು ಮುಂಜಾನೆ ಎಲ್ಲರನ್ನೂ ಎಬ್ಬಿಸಿ ಅನ್ನ ಅರಸುವ ಕಾಗೆ, ಸತ್ತಾಗ ಇಡುವ ಪಿಂಡ ತಿನ್ನಲು ಬಂದಾಗ ಅದರ ತಲೆಯಲ್ಲಿ ಸುಳಿಯುವುದಿಲ್ಲ: ಸತ್ತವ ಯಾವ ಜಾತಿಯವನಿರಬಹುದು ಎಂಬ ಪ್ರಶ್ನೆ. ಮಂದಿರ, ಮಸೀದಿ, ಚರ್ಚ್‌ನ ತುತ್ತ ತುದಿಯಲ್ಲಿ ಕೂರುವ ಪಾರಿವಾಳಕ್ಕೆ ಯಾವ ವ್ಯತ್ಯಾಸವೂ ಕಂಡು ಬರುವುದಿಲ್ಲ ಕಾರಣ, ಧರ್ಮಗಳ ಹಂಗಿಗೆ ಅದೆಂದಿಗೂ ಒಳಗಾಗಿಲ್ಲ. ಎರಡು ದೇಶಗಳ ನಡುವೆ ಎಳೆದ ಗಡಿರೇಖೆಯ ಮೇಲೆ ಹಾರಾಡುವ ಹದ್ದು ಎಂದಾದರೂ ಯೋಚನೆ ಮಾಡಿದ್ದಿದೆಯೇ, ಕೇಳಿ ಬರುತ್ತಿರುವ ಮದ್ದು ಗುಂಡುಗಳ ಸದ್ದು ಯಾವ ದೇಶದ್ದಿರಬಹುದೆಂದು? ವಸಂತ ಕಾಲದಲ್ಲಿ ಮಾಮರದ ಚಿಗುರೆಲೆ ಸವಿದು ಇಂಪಾಗಿ ಹಾಡುವ ಕೋಗಿಲೆ, ಒಂದರೆಕ್ಷಣವೂ ಯೋಚಿಸುವುದಿಲ್ಲ; ನಾನು ಕೂತಿರುವುದು ಬಡವರ ಮನೆಯ ಮರದ ಮೇಲೆಯೋ? ಶ್ರೀಮಂತ ರ ಮನೆಯ ಮರದ ಮೇಲೋ? ಗಗನದ ತುಂಬ ದೇವರು ರುಜು ಮಾಡಿದಂತೆ, ಚಿತ್ತಾರ ಬಿಡಿಸಿ ಸಾಗುವ ಬೆಳ್ಳಕ್ಕಿ ಸಾಲು ಯಾರನ್ನೂ ಅನುಕರಿಸುವುದಿಲ್ಲ, ಯಾರ ಮನಸ್ಸನ್ನೂ ನೋಯಿಸುವುದಿಲ್ಲ. ಗೂಡು ಕಟ್ಟುವಾಗ ಗುಬ್ಬಚ್ಚಿ ಎಂದಾದರೂ ಯೋಚಿಸಿದ್ದುಂಟೆ? ಮೇಲು-ಕೀಳಿನ ತಾರತಮ್ಯದ ಗೊಡವೆ ಯನ್ನು… ಇಲ್ಲ, ಆದರೆ … ಈ ನೆಲದ ಮೇಲೆ ಇರುವ ಏಕೈಕ ಬುದ್ಧಿವಂತ ಜೀವಿ ಮನುಷ್ಯ ತನ್ನ ಸ್ವಾರ್ಥಕ್ಕೆ ಎಲ್ಲವನ್ನೂ ದಾಳವಾಗಿಸಿ, ಬೆಂಕಿ ಹಚ್ಚುತ್ತಾ, ನೆಲಸಮ ಮಾಡುತ್ತಾ ವಿಕೃತಿ ಮೆರೆ ಯುತ್ತಿದ್ದಾನೆ.
ಪ್ರಾಣಿ-ಪಕ್ಷಿಗಳಿಗೆ ಇರುವ ಸಹಜ ಹೊಂದಾಣಿಕೆ, ನಿಸ್ವಾರ್ಥತೆ, ಪ್ರೀತಿ, ದಯೆ, ಕರುಣೆ ಈ ನೆಲದ ಏಕೈಕ ಬುದ್ಧಿಜೀವಿಯಾದ ಮನುಷ್ಯನಿಗೆ ಇಲ್ಲವಲ್ಲ ಎಂಬ ಕೊರಗು ಕವಿತೆಯುದ್ದಕ್ಕೂ ಅಭಿವ್ಯಕ್ತವಾಗಿದೆ. ಒಳ್ಳೆಯ ಕವಿತೆ ಕೊಟ್ಟ ಕವಿಗೆ ಧನ್ಯವಾದಗಳು.

ಅಂತರಾಳದ ರಾಳ

ಬೆಳಿಗ್ಗೆ ಬೇಗ ಎದ್ದು, ಎಲ್ಲರನ್ನೂ ಎಬ್ಬಿಸಿ

ಬೀದಿಯಿಂದ ಬೀದಿಗೆ ಅಲೆಯುವ ಕಾಗೆ

ಯಾರಾದರೂ ಸತ್ತಾಗ ಇಡುವ ಪಿಂಡ ತಿನ್ನುವಾಗ

ಅದಕ್ಕೆ ಕಾಣಿಸುವುದಿಲ್ಲ; ಸತ್ತವ ಯಾವ ಜಾತಿಯೆಂದು…

ಮಂದಿರ, ಮಸೀದಿ, ಚರ್ಚ್ ಮೇಲೆ

ಕುಳಿತ ಪಾರಿವಾಳಕ್ಕೆ ವ್ಯತ್ಯಾಸವೇನೂ

ಅನಿಸಿಲ್ಲದ ಕಾರಣ ಅದು ನಿರ್ಭೀತ!

ನಮ್ಮಷ್ಟಕ್ಕೆ ನಾವೇ ಎಳೆದಿರುವ

ಗಡಿರೇಖೆಗುಂಟ ಹಾರಾಡುವ

ಹದ್ದು ಅರಿಯದು ಇದು ಯಾವ ದೇಶದ

ಮದ್ದು ಗುಂಡಿನ ಸದ್ದು ಎಂದು…

ವಸಂತ ಕಾಲದಲ್ಲಿ ಸೊಂಪಾಗಿ

ಮಾಮರದ ಚಿಗುರು ತಿಂದು

ಇಂಪಾಗಿ ಹಾಡುವ ಕೋಗಿಲೆಗೆ

ಲೆಕ್ಕವಿಲ್ಲ ಇದು ಬಡವರ ಮರವೋ,

ಶ್ರೀಮಂತರ ಮರವೋ ಎಂದು…

ಯಾರನ್ನೂ ಅನುಕರಿಸುವುದಿಲ್ಲ,

ಕೆರಳಿಸಿ ಕೆಂಡವಾಗಿಸುವುದಿಲ್ಲ;

ಅಂಬರದ ಪರಿಶುದ್ಧ ಹಾಳೆಯಲ್ಲಿ

ದೇವರು ರುಜು ಮಾಡಿದ ಬೆಳ್ಳಕ್ಕಿ ಸಾಲು…

ಗೂಡು ಕಟ್ಟುವಾಗ ನೋಡಲಿಲ್ಲ ಗುಬ್ಬಚ್ಚಿ;

ಸ್ಪ‌ರ್ಶಾಸ್ಪೃಶ್ಯತೆಯ ಅಂತರದ ಅಂತರಾಳದ

ರಾಳವನ್ನು…!

ಮಹಾಂತೇಶ್ ಬಿ. ನಿಟ್ಟೂರು ಪರಿಚಯ:  ದಾವಣಗೆರೆ ಜಿಲ್ಲೆಯ ಹರಿಹರದ ನಿಟ್ಟೂರಿನವರಾದ ಇವರು ಚನ್ನಗಿರಿ ತಾಲೂಕಿನ ತ್ಯಾವಣಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೀವಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಕಥೆ, ಲೇಖನ ಬರವಣಿಗೆಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿರುವ ಮಹಾಂತೇಶ್, ಕಾವ್ಯ ಧಾರೆ ಮಕ್ಕಳ ಕವಿತೆ, ನಂಟು ಭಾವಗೀತೆ, ಡೊಂಕು ಲೋಕದ ಕೊಂಕುತಿಮ್ಮ ಚುಟುಕು, ಹಾದಿಯ ಹಂಗು ಮುಕ್ತಕ, ಒಡಲು ಬೆಂಕಿಯ ಗದ್ದೆ, ಬೆಳಕಿನ ಸಮಾಧಿ, ಹವಳದ ದಿಂಡು ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಾಲೂಕು, ಜಿಲ್ಲಾ, ರಾಜ್ಯಮಟ್ಟದ ವಿಚಾರ ಸಂಕಿರಣ, ಶೈಕ್ಷಣಿಕ ಸಮ್ಮೇಳನ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಇವರ ಕವಿತೆಗಳು ನಾಡಿನ ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಂದೆಯ ಹೆಸರಿನಲ್ಲಿ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುತ್ತಿದ್ದಾರೆ. ಇವರ ಸಾಹಿತ್ಯಿಕ ಕೃಷಿಗೆ ಶತ ಶೃಂಗ, ಸ್ವರ್ಣ ಕನ್ನಡಿಗ, ಶ್ರೀಗುರು ತಿಲಕ, ಕರ್ನಾಟಕ ಜ್ಯೋತಿ, ಕಾಯಕ ಯೋಗಿ, ೨೦೨೨ರ ಶ್ರೇಷ್ಠ ಬರಹಗಾರ ಪ್ರಶಸ್ತಿಗಳು ಸಂದಿವೆ.

Related Posts

Leave a Reply

Your email address will not be published. Required fields are marked *