ಬೆಂಗಳೂರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಅಭಿವೃದ್ಧಿಗಿಂತ ದ್ವೇಷ ರಾಜಕಾರಣವೇ ಹೆಚ್ಚು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನಕಪುರದಲ್ಲಿ ಶನಿವಾರ ಕಾಂಗ್ರೆಸ್ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭೆಗೆ ಆಯ್ಕೆಯಾದ ಒಂದೇ ದಿನದಲ್ಲಿ ಮೋದಿಯಿಂದ ಮೇಕೆದಾಟು ಯೋಜನೆಗೆ ಸಹಿ ಹಾಕಿಸುತ್ತೇನೆ ಎಂದು ಹೇಳಿದ್ದರು ಇದುವರೆಗೆ ಆಗಿದೆಯಾ? ಇದೀಗ ಬೆಂಗಳೂರು ದಕ್ಷಿಣ ಜಿಲ್ಲೆ ಮಾಡುವುದಕ್ಕೆ ಕೇಂದ್ರದ ಮೇಲೆ ಒತ್ತಡ ತಂದು ಅಡ್ಡಿಪಡಿಸುತ್ತಿದ್ದಾರೆ ಎಂದರು.
ಅಭಿವೃದ್ಧಿ ವಿಚಾರವಾಗಿ ಯಾರೂ ನನ್ನನ್ನು ಭೇಟಿ ಮಾಡುತ್ತಿಲ್ಲ ಎಂಬ ಕುಮಾರಸ್ವಾಮಿ ಅವರ ಆರೋಪದ ಪ್ರತಿಕ್ರಿಯಿಸಿದ ಅವರು, ನಮ್ಮ ಸಚಿವ ಎಂ.ಬಿ ಪಾಟೀಲ್ ಅವರ ಬಳಿ ಹೋಗಿ ಬಂಡವಾಳ ಹೂಡಿಕೆದಾರರ ಸಮಾವೇಶದ ಬಗ್ಗೆ ಚರ್ಚೆ ಮಾಡಿಲ್ಲವೇ? ಅವರಿಗೆ ದ್ವೇಷದ ರಾಜಕಾರಣವೇ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿಯಲ್ಲ. ದ್ವೇಷದಿಂದ ಯಾರೂ ಯಾವುದೇ ಸಾಧನೆ ಮಾಡಿಲ್ಲ. ದೊಡ್ಡ ದೊಡ್ಡ ಚಕ್ರವರ್ತಿಗಳೇ ಕೆಳಗೆ ಬಿದ್ದಿದ್ದಾರೆ. ರಾಜಕಾರಣದಲ್ಲಿ ಯಾರೂ ಶಾಶ್ವತವಲ್ಲ ಎಂದು ಕಿಡಿಕಾರಿದರು.
ಅಭಿವೃದ್ಧಿ ವಿಚಾರದಲ್ಲಿ ರಾಜ್ಯ ಸತ್ತುಹೋಗಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ನಿನಗೆ ಅಧಿಕಾರ ಇದ್ದಾಗ ನೀನು ಏನು ಮಾಡಿದೆ ಹೇಳಪ್ಪಾ? ಮಂಡ್ಯದಲ್ಲಿ ಗೆದ್ದು ಕೇಂದ್ರದಲ್ಲಿ ದೊಡ್ಡ ಮಂತ್ರಿಯಾಗಿದ್ದೀಯಲ್ಲ, ಈಗ ನೀನು ಏನು ಮಾಡುತ್ತೀಯಾ ಎಂದು ಮೊದಲ ಹೇಳು ಎಂದು ಸವಾಲು ಹಾಕಿದರು.
ನೀವು ಏನು ಮಾಡುತ್ತೀರೋ ಮಾಡಿ, ಅದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ. ನೀವು ಬರೀ ದ್ವೇಷ ರಾಜಕಾರಣ ಮಾಡುತ್ತಿದ್ದೀರಿ. ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬಾರದು ಎಂದು ಆಕ್ಷೇಪ ಮಾಡಿದ್ದೀರಿ. ನಿಮ್ಮಂತೆ ನಾವು ದ್ವೇಷ ರಾಜಕಾರಣ ಮಾಡುವುದಿಲ್ಲ. ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ಕೇಂದ್ರ ಸಚಿವ ರಾಜನಾಥ್ ಸಿಂಗ್ ರಾಜ್ಯಕ್ಕೆ ಬಂದು ಏನು ಹೇಳಿದ್ದಾರೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಳ್ಳಿ ಎಂದು ತಿರುಗೇಟು ನೀಡಿದರು.